ಕಥೆ-396
*ಅನಾಥ ತಾಯಿಗೆ ಅಸಂಖ್ಯಾತ ಅಳಿಯಂದಿರು, ಸೊಸೆಯರು ಮತ್ತು ಮೊಮ್ಮಕ್ಕಳು!*
ಹೌದು! ಸಾವಿರಾರು ಮೊಮ್ಮಕ್ಕಳಿರುವ ಆಕೆ ಅನಾಥೆ. ‘ಅನಾಥ ಮಕ್ಕಳ ತಾಯಿ’ ಎಂದು ಕರೆಯಲ್ಪಡುವ ಆಕೆ ಸಿಂಧೂತಾಯಿ ಸಪ್ಕಾಳ್. 1948ರಲ್ಲಿ ಮಹಾರಾಷ್ಟ್ರದ ಪಿಂಪ್ರಿ ಬಳಿಯ ಹಳ್ಳಿಯಲ್ಲಿ ದನ ಕಾಯುವಾತನ ಮಗಳಾಗಿ ಹುಟ್ಟಿದ ಆಕೆ ತಾಯ್ತಂದೆಯರಿಗೆ ಬೇಡವಾದ ಮಗಳಾಗಿದ್ದರು. (ಹೆಣ್ಣು ಮಗುವಲ್ಲವೇ?) ಆಕೆಯನ್ನು ಚಿಂದಿ (ಬಟ್ಟೆಯ ತುಂಡು) ಎಂದೇ ಕರೆಯಲಾಗುತ್ತಿತ್ತು. ಕಾಡಿ ತಿನ್ನುತ್ತಿದ್ದ ಬಡತನದಿಂದಾಗಿ, ನಾಲ್ಕನೆಯ ತರಗತಿವರೆಗೆ ಮಾತ್ರ ಓದಿದ್ದ, ಹತ್ತು ವರ್ಷ ವಯಸ್ಸಿನ ಆಕೆಯನ್ನು, ಆಕೆಗಿಂತಲೂ 20 ವರ್ಷ ಹೆಚ್ಚು ವಯಸ್ಸಾಗಿದ್ದ ವ್ಯಕ್ತಿಯೊಂದಿಗೆ ಮದುವೆ ಮಾಡಿ ಕಳುಹಿಸಲಾಯಿತು.
ಆಕೆಯ ಗಂಡನ ಮನೆಯಲ್ಲೂ ಬಡತನದ್ದೇ ತಾಂಡವ. ಆಕೆಗೆ 20 ವರ್ಷ ವಯಸ್ಸಾಗುವ ಹೊತ್ತಿಗೆ ಮೂರು ಗಂಡು ಮಕ್ಕಳ ತಾಯಿಯಾಗಿದ್ದರು. ನಾಲ್ಕನೆಯ ಮಗುವಿನ ಗರ್ಭಿಣಿಯಾಗಿದ್ದಾಗ ಆಕೆಯ ಗಂಡ ಆಕೆಯನ್ನು ಮನೆಯಿಂದ ಓಡಿಸಿಬಿಟ್ಟರು. ಆಕೆ ತನ್ನ ತವರುಮನೆಗೆ ಹಿಂತಿರುಗಿದಾಗ, ಆಕೆಯ ತಾಯಿ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ನಿನ್ನ ಪಾಡು ನಿನ್ನದು’ ಎಂದು ಹೇಳಿ ಮನೆಯೊಳಕ್ಕೂ ಬಿಟ್ಟುಕೊಳ್ಳದೆ ಅಟ್ಟಿಬಿಟ್ಟರು. ಆಕೆ ಊರಿನ ದನದ ಕೊಟ್ಟಿಗೆಯೊಂದರಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತರು.
ಹೆರಿಗೆ ಮಾಡಿಸುವವರೂ ಇರಲಿಲ್ಲ. ಆಕೆಯೇ ಹೆರಿಗೆ ಮಾಡಿ ಕೊಂಡರು. ಕರುಳ ಬಳ್ಳಿಯನ್ನು ಚೂಪಾದ ಕಲ್ಲಿನಿಂದ ತುಂಡರಿಸಿಕೊಂಡರು. ಸ್ವತಃ ನಿರಾಶ್ರಿತೆ, ಜೊತೆಗೆ ಹೆಣ್ಣು ಮಗು! ಆತ್ಮಹತ್ಯೆ ಮಾಡಿಕೊಳ್ಳೋಣವೇ ಎಂದುಕೊಂಡರು. ಆದರೆ ಧೈರ್ಯ ತಂದುಕೊಂಡರು. ಹತ್ತಿರದ ರೈಲು ನಿಲ್ದಾಣಕ್ಕೆ ಹೋಗಿ ಭಿಕ್ಷೆ ಬೇಡತೊಡಗಿದರು. ಹೆಣ್ಣು ಮಗುವನ್ನು ಸಾಕತೊಡಗಿದರು. ಅಲ್ಲಿ ಆಕೆ ಆಶ್ಚರ್ಯಕರ ದೃಶ್ಯವೊಂದನ್ನು ಕಂಡರು. ಆಕೆ ಭಿಕ್ಷೆ ಬೇಡುತ್ತಿದ್ದ ರೈಲ್ವೇ ಪ್ಲ್ಯಾಟ್‌ಫಾರಮ್ಮಿನಲ್ಲಿ ತಾಯಿ ತಂದೆಯರಿಲ್ಲದ ಹನ್ನೊಂದು ಜನ ತಬ್ಬಲಿ ಮಕ್ಕಳಿದ್ದರು. ಅವರೆಲ್ಲರೂ ಭಿಕ್ಷೆ ಬೇಡುತ್ತಲೇ ಬದುಕು ಸಾಗಿಸುತ್ತಿದ್ದರು. ಆಕೆ ಅವರೆಲ್ಲರನ್ನು ತನ್ನ ಮಕ್ಕಳಂತೆಯೇ ಭಾವಿಸಿ ಪ್ರೀತಿಸತೊಡಗಿದರು.
ಪೋಷಿಸತೊಡಗಿದರು. ಇನ್ನೂ ಹೆಚ್ಚು ಹೆಚ್ಚು ಭಿಕ್ಷೆಯನ್ನು ಬೇಡತೊಡಗಿದರು. ಏಕೆಂದರೆ ಈಗ ಆಕೆ ಹತ್ತಾರು ಮಕ್ಕಳಿಗೆ ಅನ್ನವನ್ನುಣಿಸಬೇಕಿತ್ತು. ತಮ್ಮ ಸ್ವಂತ ಮಗುವನ್ನು ಪುಣೆಯ ಶ್ರೀಮಂತ್ ದಗಡೂಸೇಟ್ ಟ್ರಸ್ಟಿಗೆ ದತ್ತು ಕೊಟ್ಟುಬಿಟ್ಟರು. ಉಳಿದ ಮಕ್ಕಳನ್ನು ಸಾಕತೊಡಗಿದರು. ಮುಂದೆ ಆಕೆ ತನ್ನ ಇಡೀ ಜೀವನವನ್ನು ಅನಾಥ ಮಕ್ಕಳಿಗಾಗಿಯೇ ಮೀಸಲಿಟ್ಟರು. ಭಿಕ್ಷೆಯಿಂದಲೇ ಅವರನ್ನೆಲ್ಲ ಬೆಳೆಸತೊಡಗಿದರು.
ಸಿಂಧುತಾಯಿಯವರು ಇದುವರೆವಿಗೂ 1050 ಅನಾಥ ಮಕ್ಕಳನ್ನು ಸಾಕಿದ್ದಾರೆ. ಬೆಳೆಸಿದ್ದಾರೆ, ಓದಿಸಿದ್ದಾರೆ. ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ 207 ಜನ ಅಳಿಯಂದಿರು. 36 ಜನ ಸೊಸೆಯಂದಿರು ಮತ್ತು ಒಂದು ಸಾವಿರಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ. ಪುಣೆಯ ಹಡಪ್ಸರ್ ಬಡಾವಣೆಯಲ್ಲಿ ಆಕೆ ಸ್ಥಾಾಪಿಸಿದ ‘ಸನ್ಮತಿ ಬಾಲನಿಕೇತನ’ದಲ್ಲಿ ಈಗ ಮುನ್ನೂರಕ್ಕೂ ಹೆಚ್ಚು ಅನಾಥ ಮಕ್ಕಳು ವಾಸಿಸುತ್ತಿದ್ದಾರೆ. ಆಕೆಗೆ ಐನೂರಕ್ಕೂ ಹೆಚ್ಚು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ಆಕೆಯ ಬದುಕನ್ನಾಧರಿಸಿದ ‘ಮೀ ಸಿಂಧುತಾಯಿ ಸಪ್ಕಾಳ್’ ಎಂಬ ಮರಾಠಿ ಭಾಷೆ ಚಲನಚಿತ್ರ 2010ರಲ್ಲಿ ಬಿಡುಗಡೆಯಾಗಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.
ಈಗಲೂ, 69ರ ವಯಸ್ಸಿನಲ್ಲೂ, ಬಿಡುವಿಲ್ಲದೆ ದುಡಿಯುವ ಸಿಂಧುತಾಯಿಯ ‘ದೊಡ್ಡಮಗ’ನಿಗೆ ಈಗ 86 ವರ್ಷ ವಯಸ್ಸು! ಆತ ಯಾರು ಗೊತ್ತೇ? ಆತ ಆಕೆಗೆ ತಾಳಿ ಕಟ್ಟಿದ ಗಂಡ! ‘ನನ್ನದು ತಪ್ಪಾಯಿತು. ನಿನ್ನನ್ನು ಮನೆಯಿಂದ ಹೊರಕ್ಕೆ ಅಟ್ಟಬಾರದಿತ್ತು. ನಾನೀಗ ನಿರಾಶ್ರಿತ’ ಎಂದು ಬೇಡಿಕೊಂಡು ಬಂದ ಗಂಡನನ್ನು ‘ಆಯಿತು. ನೀವೂ ಒಬ್ಬ ಮಗನಂತೆ ಈ ಅನಾಥ ಮಕ್ಕಳೊಡನೆ ಇರಿ’ ಎಂದು ಹೇಳಿ ಸೇರಿಸಿಕೊಂಡರಂತೆ. ಸಿಂಧುತಾಯಿ ಇವರ ಆತ್ಮವಿಶ್ವಾಸಕ್ಕೆ, ಛಲಬಿಡದ ಸಾಧನೆಗೆ, ನಾವೆಲ್ಲ ನಮಸ್ಕರಿಸಬಹುದು. ಅಂತರ್ಜಾಲದಲ್ಲಿ ಅವರ ಬಗ್ಗೆ ಓದಬಹುದು. ಬೇಕಿದ್ದರೆ ಆ ಮರಾಠಿ ಚಲನಚಿತ್ರವನ್ನೂ ನೋಡಬಹುದು.
ಕೃಪೆ: ಎಸ್.ಷಡಕ್ಷರಿ
No comments:
Post a Comment