ಕಥೆ-404
ಜೀವವೈವಿಧ್ಯವೇ ಪ್ರೀತಿ. ಜೀವವೈವಿಧ್ಯವೇ ಜೀವನ.
ಮೇ 22 - ವಿಶ್ವ ಜೀವವೈವಿಧ್ಯ ದಿನದ ಶುಭಾಶಯಗಳು.
ಪ್ರತಿ ವರ್ಷ, ಮೇ 22 ಅನ್ನು ಅಂತಾರಾಷ್ಟ್ರೀಯ ಜೀವವೈವಿಧ್ಯ ಅಥವಾ ವಿಶ್ವ ಜೀವ ವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ.
2000 ಇಸ್ವಿಯಲ್ಲಿ ವಿಶ್ವಸಂಸ್ಥೆ ಮೇ 22ನ್ನು ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ಜೀವವೈವಿಧ್ಯತೆಯ ವಿನಾಶ ತಡೆಯಲು 2011-20 ದಶಕವನ್ನು ವಿಶ್ವಸಂಸ್ಥೆಯ ಜೀವವೈವಿಧ್ಯತೆ ದಶಕ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.
ಭೂಮಿಯ ಮೇಲಿರುವ ಸಕಲ ಜೀವರಾಶಿಗಳ ವಿವಿಧತೆ ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನೊಳಗೊಂಡ ಸಮೂಹಕ್ಕೆ‘ಜೀವವೈವಿಧ್ಯತೆ’ (Biodiversity) ಎನ್ನುವರು. ಎಲ್ಲಾ ಜೀವಿಗಳ ಸಮೂಹವೇ “ಜೀವವೈವಿಧ್ಯತೆ”. ಇಲ್ಲಿ ಎಲ್ಲಾ ಗಿಡ - ಮರಗಳು, ಪ್ರಾಣಿ - ಪಕ್ಷಿಗಳು, ಕೀಟಗಳು, ಶಿಲೀಂಧ್ರಗಳು, ಪಾಚಿಗಳು, ಇತರ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಈ ಜೀವವೈವಿಧ್ಯಕ್ಕೆ ಸೇರುತ್ತವೆ.
ಜೀವ ವೈವಿಧ್ಯತೆ (Biodiversity) : ಜೀವ ವೈವಿಧ್ಯತೆ ಎಂಬ ಪದವನ್ನು ಮೊದಲ ಬಾರಿಗೆ 1968 ರಲ್ಲಿ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಕ ರೇಮಂಡ್ ಎಫ್. ಡಸ್ಮಾನ್ ಅವರು ಸೃಷ್ಟಿಸಿದರು. ಈ ಪದವು 1980ರ ದಶಕದಿಂದ ವ್ಯಾಪಕವಾಗಿ ಬಳಕೆಗೆ ಬಂತು. ಜೀವವೈವಿಧ್ಯತೆಯು “ಒಂದು ಪ್ರದೇಶದ ಜೀನ್ ಗಳು, ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಗಳ ಸಂಪೂರ್ಣತೆ” ಯನ್ನು ಉಲ್ಲೇಖಿಸುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೀವವೈವಿದ್ಯತೆ ಪದವನ್ನು ಬಳಸಲಾಗುತ್ತದೆ.
ವಿಶ್ವಸಂಸ್ಥೆಯ 2023ರ ಅಂಕಿ- ಅಂಶಗಳ ಪ್ರಕಾರ ಕೆಂಪು ಪಟ್ಟಿಯ (Danger Zone) 1,57,190 ಜಾತಿ ಜೀವಿಗಳಲ್ಲಿ, 9,760 ಜಾತಿಯ ಜೀವಿಗಳು ಅಳಿವಿನಂಚಿನಲ್ಲಿವೆ. ಅದರಲ್ಲಿ 1,302 ಜಾತಿಯ ಜೀವಿಗಳನ್ನು ಪ್ರಾಯಶಃ ಉಳಿಸುವುದು ಕಷ್ಟವಾಗಿದೆ. ಮಾನವನ ಚಟುವಟಿಕೆಗಳಿಂದಾಗಿ ಸುಮಾರು 869 ಪ್ರಭೇದದ ಜೀವಿಗಳು ನಿರ್ನಾಮವಾಗಿ ಹೋಗಿವೆ.
ಇತ್ತೀಚಿಗೆ ವೇಗವಾಗಿ ಮತ್ತು ವ್ಯಾಪಕವಾಗಿ ಮಾನವರಿಂದ ಪರಿಸರ ವ್ಯವಸ್ಥೆಯ ಜೀವ ವೈವಿಧ್ಯತೆ ಹಾಳಾಗಿದೆ. ವೇಗವಾಗಿ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು. ಹೆಚ್ಚಾಗಿ ಶುದ್ಧ ಗಾಳಿ ಶುದ್ಧ ನೀರು, ಆಹಾರ, ಮರ, ಮತ್ತು ಇಂಧನಗಳಿಗೆ ಬದಲಾಯಿಸಲಾಗದ ನಷ್ಟವನ್ನು ಉಂಟುಮಾಡಿದ್ದೇವೆ.
ನಮ್ಮನ್ನು ಜೀವಂತವಾಗಿಡುವ ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸಿದರೆ ಮತ್ತು ನೈಸರ್ಗಿಕ ವ್ಯವಸ್ಥೆಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಜೀವವೈವಿಧ್ಯತೆಯನ್ನು ನಾವು ನಾಶಮಾಡಿದರೆ, ಯಾವುದೇ ಹಣವು ನಮ್ಮನ್ನು ಉಳಿಸುವುದಿಲ್ಲ.
*ಹೆಚ್ಚು ವೈವಿಧ್ಯತೆ, ಉತ್ತಮ ಸಮಾಜ*.
Shankargouda Basapur
A.M GHS Hiremyageri
No comments:
Post a Comment