Thursday, May 23, 2024

 ಕಥೆ-405

ದೇವರಂದರೆ ಗುಡಿಯೊಳಗಿನ ಮೂರ್ತಿಯಲ್ಲ,

ಮಾನವನ ಹೃದಯದಲ್ಲಿನ ಪ್ರೀತಿ

ಬೌದ್ಧ ಧರ್ಮದ ಮೂಲಕ ವಿಶ್ವಕ್ಕೆ ಜ್ಞಾನ, ಮಾನವೀಯತೆ ಹಾಗೂ ಶಾಂತಿಯ ಸಂದೇಶ ನೀಡಿ ಏಷ್ಯಾದ ಬೆಳಕು ಎಂದೇ ಪ್ರಸಿದ್ಧರಾದವರು ಗೌತಮ ಬುದ್ಧ. ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಅಪ್ಪಟ ಭಾರತೀಯನಾಗಿ ಜನಿಸಿದ್ದ ಬುದ್ಧ, ಈಗಲೂ ಕೋಟ್ಯಾನುಕೋಟಿ ಅನುಯಾಯಿಗಳನ್ನು ದೇಶ ವಿದೇಶಗಳಲ್ಲಿ ಹೊಂದಿದ್ದಾರೆ. ಅವರೊಬ್ಬ ಶುದ್ಧ ಚಾರಿತ್ರ್ಯದ ಸಾಕಾರಮೂರ್ತಿ.

ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿಲ್ಲ. ಬದುಕುವ ರೀತಿ, ಅದಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿ ಹೇಳಿ, ಜಗತ್ತಿಗೆ ಗುರುವಾದವರು. ಅರಸೊತ್ತಿಗೆಯನ್ನು ತ್ಯಜಿಸಿ, ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದಕ್ಕೂ ಶಾಂತಿ, ಅಹಿಂಸಾ ತತ್ವಗಳನ್ನು ಸಾರಿದರು. ಲೋಕದ ಸಂಕಟಗಳಿಗೆ ಪರಿಹಾರ ಹುಡುಕಿಕೊಟ್ಟ ಆಧ್ಯಾತ್ಮಿಕ ಪುರುಷ. ಧ್ಯಾನ, ದಾನ ಜೀವನದ ಬಗ್ಗೆ ಸದಾಕಾಲ ಚಿಂತಿಸಿ ಅದನ್ನು ಜನರಿಗೆ ತಿಳಿಸಿ ಅಪಾರ ಅನುಯಾಯಿಗಳನ್ನು ಗಳಿಸಿಕೊಂಡವರು.

ಗೌತಮ ಬುದ್ಧ ಶ್ರೀಮಂತ ಕುಟುಂಬದಲ್ಲಿ ಜನಿಸಿದ. ಕಷ್ಟಕಾರ್ಪಣ್ಯಗಳ ಅರಿವಿಲ್ಲದೇ ಸುಖವಾಗಿ ಅರಮನೆಯಲ್ಲಿ ಬದುಕುತ್ತಿದ್ದ ಸಿದ್ಧಾರ್ಥ ಒಂದು ದಿನ ಸೇವಕನ ಜತೆಗೂಡಿ ಹೊರ ಸಂಚಾರಕ್ಕಾಗಿ ಹೋಗಿದ್ದಾಗ *ಮುದುಕ, ಶವ ಹಾಗೂ ರೋಗಿಯನ್ನು* ಕಂಡು ಮರುಗಿದರು. ಅದುವೇ ಅವರ ಯೋಚನಾ ಪರಿಧಿಯ ಬದಲಾವಣೆಗೆ ಪ್ರೇರಣೆಯಾಯಿತು.

ಜೀವನ ಎಂಬುದು ನಶ್ವರ. ಜಗತ್ತು ದುಃಖ ದುಮ್ಮಾನಗಳಿಂದ ಕೂಡಿದ್ದು, ಇವುಗಳಿಗೆ ಪರಿಹಾರ ಹುಡುಕಬೇಕು ಎಂಬ ತುಡಿತ ಹೆಚ್ಚಾಯಿತು. ಆಗ ರಾತ್ರೋರಾತ್ರಿ ಹೆಂಡತಿ, ಮಗನನ್ನು ಬಿಟ್ಟು ಲೋಕ ಸಂಚಾರಿಯಾಗಿ ತನ್ನ 29 ನೇ ವಯಸ್ಸಿನಲ್ಲಿ ಜೀವನದ ಅರ್ಥವನ್ನು ಹುಡುಕಿಕೊಂಡು ಮನೆ ಬಿಟ್ಟನು.ಅಂತಿಮವಾಗಿ ಬಿಹಾರದ ಬೋಧಗಯಾದಲ್ಲಿ ಮಹಾಬೋಧಿ ಮರದ ಅಡಿಯಲ್ಲಿ 35 ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಪಡೆದು ಸಿದ್ದಾರ್ಥ ಬುದ್ಧನಾಗುತ್ತಾನೆ. ಬುದ್ಧ ಎಂದರೆ ಪ್ರಬುದ್ಧ, ಜ್ಞಾನಿ ಎಂದರ್ಥ. ಬುದ್ಧನು ಜೀವನದ ಅರ್ಥವನ್ನು ಬೋಧಿಸಿ ಇಂದು ವಿಶ್ವದ ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬನಾಗಿ ನಿಂತಿದ್ದಾನೆ. ಅವನ ಬೋಧನೆಗಳೇ ಬೌದ್ಧ ಧರ್ಮ. 

ಕ್ರಿ.ಪೂ. 6ನೇ ಶತಮಾನದಲ್ಲಿ ನಡೆಯುತ್ತಿದ ಪ್ರಾಣಿ ಹಿಂಸೆ, ನರಬಲಿ, ಸಾಮಾಜ್ಯ ವಿಸ್ತರಣೆಯ ದಾಹದ ಹಿಂಸೆ, ಇದನ್ನು ಬುದ್ಧನು ವಿರೋಧಿಸಿ, ಅಹಿಂಸೆಯನ್ನು ಪ್ರತಿಪಾದಿಸಿದನು. ಅಹಿಂಸೆಯ ಪ್ರತಿಪಾದನೆ ಕುರಿತು ಬುದ್ಧನೇ ಹೇಳುವಂತೆ, ನಾವು ಯಾವ ಪ್ರಾಣಿಗೂ ಜೀವ ಕೊಡಲಾರೆವೂ, ಅವುಗಳ ಜೀವ ತೆಗೆಯುವ ಹಕ್ಕು ನಮ್ಮಗಿಲ್ಲ. ನಾವು ನಮ್ಮ ದೇಹವನ್ನು ಪ್ರಾಣವನ್ನು ಪ್ರೀತಿಸುವಂತೆ ಇತರೆ ಪ್ರಾಣಿಗಳನ್ನು ಪ್ರೀತಿಸಬೇಕೆಂದು ಹೇಳಿ ನಿಜ ಪ್ರೀತಿಯ ಅಂತಃಕರಣದ

ಬೋಧನೆಯನ್ನು ಮಾಡುತ್ತಾನೆ.

ಆಸೆಯೇ ದುಃಖಕ್ಕೆ ಮೂಲ ಎಂದು ಪ್ರತಿಪಾದಿಸಿದ. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ.ಯಾರೇ, ಏನೇ ಹೇಳಿದರೂ ಕೂಡ ಅದನ್ನು ಒರೆಗಚ್ಚಿ ನೋಡಿ, ಆಲೋಚಿಸಿ ನಿರ್ಧಾರಕ್ಕೆ ಬನ್ನಿ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ.

ಬುದ್ಧನ ಚಿಂತನೆಗಳಿಗೆ ಮಾರು ಹೋಗದವರೇ ಇಲ್ಲ. ಸ್ವಾಮಿ ವಿವೇಕಾನಂದ, ಗಾಂಧೀಜಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ವೈಚಾರಿಕ ಚಿಂತನೆಗಳಿಗೆ ಬುದ್ಧನ ಆದರ್ಶಗಳು, ತತ್ವಗಳೇ ಮೂಲ ಪ್ರೇರಕ ಶಕ್ತಿಯಾಗಿದ್ದವು.

ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ. 

*ಯಶಸ್ವಿ ಜೀವನಕ್ಕೆ ಬುದ್ಧನು ನೀಡಿದ ಎಂಟು ಸನ್ಮಾರ್ಗಗಳು*

ಜೀವನವೂ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳನ್ನು ಪಾಲಿಸುವಂತೆ ಹೇಳಿರುವ ಬುದ್ಧ ಈ ಮೂಲಕ ಜೀವನದ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಬಹುದು ಎನ್ನುತ್ತಾನೆ.

ನಾವು ನಡೆಯುವ ದಾರಿ ಸರಿಯಾಗಿದ್ದರೆ, ನಾವು ಮಾಡುವ ಕಾರ್ಯ ಸತ್ಯ ಶುದ್ಧವಾಗಿದ್ದರೆ ಸಾಧನೆಯ ಶಿಖರವೇರಲು ನಮಗೆ ಯಾವುದೇ ಅಡೆತಡೆಗಳು ಉಂಟಾಗಲಾರದು ಎಂಬುದು ಬುದ್ಧನ ಬೋಧನೆಯ ಸಾರ.

*ಸುಖ ಸಮಾಜಕ್ಕೆ ಬುದ್ಧನ ಪಂಚಶೀಲ ತತ್ವಗಳು*

 1.ಅಹಿಂಸಾ ಪಾಲನೆ  

2.ದಾನ ಮಾಡುವುದು 

3.ಸತ್ಯ ಬೋಧನೆ, 

4.ಮದ್ಯಪಾನ ಮಾಡದಿರುವುದು ಹಾಗೂ 5.ಶೀಲವಂತರಾಗಿ ಬದುಕುವುದು. 

ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಈ ತತ್ವಗಳನ್ನು ಅಳವಡಿಸಿಕೊಂಡರೆ ಈ ಸಮಾಜ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಿದೆ ಎನ್ನುತ್ತಾನೆ.

*ಯಾವ ಸಮಯದಲ್ಲಿ ಸಮಸ್ಯೆ ಹುಟ್ಟಿರುತ್ತದೆ ಅದೇ ಸಮಯದಲ್ಲಿ ಅದಕ್ಕೆ ಪರಿಹಾರವು ಹುಟ್ಟಿರುತ್ತದೆ, ತಾಳ್ಮೆ ಇರಲಿ...*

*Whenever a problem arises, a solution arises at the same time. Be patient...*

ಜಗತ್ತಿಗೆ ಶಾಂತಿ ಮಂತ್ರವನ್ನು ಬೋಧಿಸಿದ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು💐💐💐

Shankargouda Basapur 

AM GHS Hiremyageri 

(Source:Internet)

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು