Friday, May 3, 2024

 ಕಥೆ-384

ಲಕ್ಷಗಟ್ಟಲೆ ಬೆಲೆಯ ಬಳುವಳಿಯನ್ನು ನಿರಾಳವಾಗಿ ಕೊಟ್ಟವರು !

೧೯೪೦ರಲ್ಲಿ ನಡೆದ ನಿಜಜೀವನದ ಘಟನೆ. ಹಾಲಿವುಡ್ಡಿನ ಹೆಸರಾಂತ ನಾಯಕ ನಟ ಕ್ಲಾರ್ಕ್ ಗೇಬಲ್(೧೯೦೧–೧೯೬೦) ‘ದಿ ಕಿಂಗ್ ಆಫ್ ಹಾಲಿವುಡ್’ ಎಂದು ಖ್ಯಾತರಾದವರು. ‘ಗಾನ್ ವಿತ್ ದಿ ವಿಂಡ್’ ಅವರ ಪ್ರಖ್ಯಾತ ಚಲನಚಿತ್ರಗಳಲ್ಲೊಂದು! ೧೯೩೪ರಲ್ಲಿ ‘ಇಟ್ ಹ್ಯಾಪೆನ್ಡ್ ಒನ್ ನೈಟ್’ ಚಿತ್ರಕ್ಕಾಗಿ ಅವರಿಗೆ ಆಸ್ಕರ್ ಪ್ರಶಸ್ತಿಯೂ ದೊರಕಿತು. ಪ್ರಶಸ್ತಿಯಲ್ಲಿ ಕೊಡುವ ಚಿನ್ನದ ಮೂರ್ತಿಯನ್ನು ಅವರು ಮನೆಯಲ್ಲಿಟ್ಟಿದ್ದರು.

ಒಮ್ಮೆ ಪರಿಚಿತ ಮಹಿಳೆಯೊಬ್ಬರು ಗೇಬಲ್ಲರನ್ನು ನೋಡಲು ಬಂದರು. ಆಕೆಯೊಟ್ಟಿಗೆ ಐದಾರು ವರ್ಷ ವಯಸ್ಸಿನ ಆಕೆಯ ಮಗನೂ ಇದ್ದ. ಅವರು ಗೇಬಲ್ಲರೊಂದಿಗೆ ಮಾತನಾಡುತ್ತಿದ್ದಾಗ, ಬಾಲಕ ತನ್ನೊಂದಿಗೆ ತಂದಿದ್ದ ಪುಟ್ಟ ಕಾರುಗಳ ಆಟಿಕೆಗಳನ್ನು ಇಟ್ಟುಕೊಂಡು, ಆಸ್ಕರ್ ಚಿನ್ನದ ಪ್ರತಿಮೆಯ ಸುತ್ತ ಕಾರುಗಳು ರೇಸ್ ಮಾಡುತ್ತಿರುವಂತೆ ಕಲ್ಪಿಸಿಕೊಂಡು, ಆಟವಾಡುತ್ತಿದ್ದ.

ಮಾತು–ಕತೆ ಮುಗಿದ ನಂತರ ಮಹಿಳೆಯು ಹೊರಟು ನಿಂತರು. ಬಾಲಕನೂ ತನ್ನ ಕಾರಿನ ಆಟಿಕೆಗಳನ್ನು ತೆಗೆದುಕೊಂಡು ಹೊರಡಲು ಅನುವಾದ. ಆಗ ಬಾಲಕನ ಒಂದು ಕಾರಿನ ಆಟಿಕೆ ಅಲ್ಲಿಯೇ ಉಳಿದಿರುವುದು ಗೇಬಲ್ಲರ ಗಮನಕ್ಕೆ ಬಂದಿತು. ಅವರು ಸಹಜವಾಗಿ “ಮಗೂ, ನೀನು ಅದನ್ನೂ ತೆಗೆದುಕೊಂಡು ಹೋಗಪ್ಪ” ಎಂದರು. ಬಾಲಕನಿಗೆ ಏನು ಅರ್ಥವಾಯಿತೋ ಏನೋ? ಆತ ಆಸ್ಕರ್ ಚಿನ್ನದ ಪ್ರತಿಮೆಗೇ ಕೈಹಾಕಿ “ನಿಜವಾಗಿಯೂ ಇದನ್ನು ತೆಗೆದುಕೊಂಡು ಹೋಗಲು ಹೇಳುತ್ತಿದ್ದೀರಾ?” ಎಂದು ಕೇಳಿದ.

ಅದರ ಬೆಲೆ ಗೊತ್ತಿರದಿದ್ದ ಆತನಿಗೆ ಆಟವಾಡುವುದಕ್ಕೆ ಮತ್ತೊಂದು ಫಳಫಳ ಹೊಳೆಯುವ ಬೊಂಬೆ ಸಿಕ್ಕಿತು ಎನ್ನುವ ಖುಷಿ!ಪ್ರತಿಮೆಯ ಬೆಲೆ ಗೊತ್ತಿದ್ದ ತಾಯಿಯು “ದಡ್ಡಾ! ಅಂಕಲ್ ತೆಗೆದುಕೊಳ್ಳಲು ಹೇಳಿದ್ದು ನಿನ್ನ ಕಾರಿನ ಆಟಿಕೆಯನ್ನು! ಚಿನ್ನದ ಪ್ರತಿಮೆಯನ್ನಲ್ಲ! ಅದನ್ನಲ್ಲೇ ಇಟ್ಟುಬಿಡು” ಎಂದು ಗದರಿಸಿದರು. ಬಾಲಕನ ಮುಖ ಪೆಚ್ಚಾಯಿತು. ತಕ್ಷಣ ಗೇಬಲ್ಲರು “ಮಗೂ, ಪ್ರತಿಮೆಯನ್ನೇ ತೆಗೆದುಕೊಂಡು ಹೋಗು.ಸಂಕೋಚ ಪಟ್ಟುಕೊಳ್ಳಬೇಡ” ಎಂದು ನಗುನಗುತ್ತಲೇ ಹೇಳಿದರು.

ಮಹಿಳೆಯು “ಸರ್, ಅದನ್ನು ಪಡೆಯಲು ನೀವೆಷ್ಟು ಕಷ್ಟಪಟ್ಟಿದ್ದೀರೆಂದು ಜಗತ್ತಿಗೇ ಗೊತ್ತು!” ಎಂದರು. ಗೇಬಲ್ಲರು “ಆಸ್ಕರ್ ಪ್ರಶಸ್ತಿಯನ್ನು ಪಡೆಯಲು ನಾನು ಆಗ ಬಹಳ ಕಷ್ಟಪಟ್ಟಿದ್ದು ನಿಜ. ಈಗ ಆ ಪ್ರತಿಮೆಯು ನನ್ನ ಮನೆಯ ಅಲಂಕಾರದ ವಸ್ತುಗಳಲ್ಲೊಂದು!ಪ್ರತಿಮೆ ಇಲ್ಲಿದ್ದರೆ ನನ್ನ ಆನಂದ ಹೆಚ್ಚಾಗುವುದೂ ಇಲ್ಲ. ಅದನ್ನು ನಿಮ್ಮ ಮಗ ತೆಗೆದುಕೊಂಡು ಹೋದರೆ ನನ್ನ ಆನಂದ ಕಡಿಮೆಯಾಗುವುದೂ ಇಲ್ಲ.

ಅದು ಸಿಕ್ಕರೆ ಅವನಿಗಾಗುವ ಆನಂದವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ! ಅವನು ಅದನ್ನು ತೆಗೆದುಕೊಂಡು ಹೋಗಲಿ” ಎಂದು ಹೇಳಿ ಅವರೇ ಒತ್ತಾಯ ಮಾಡಿ ಆಸ್ಕರ್ ಪ್ರಶಸ್ತಿ ಪ್ರತಿಮೆಯನ್ನು ಬಾಲಕನಿಗೆ ಕೊಟ್ಟು ಕಳುಹಿಸಿದರಂತೆ. ಬಾಲಕನಿಗೆ ಆನಂದ! ತಾಯಿಗೆ ಮುಜುಗರ! ಆಕೆ ಒಲ್ಲದ ಮನಸ್ಸಿನಿಂದಲೇ ಅದನ್ನು ತೆಗೆದುಕೊಂಡು ಹೊರಟರು. ಗೇಬಲ್ಲರು ಮಾತ್ರ ನಿರಾಳವಾಗಿ ನಗುನಗುತ್ತಲೇ ನಿಂತಿದ್ದರು.

ಇದಾದ ಸುಮಾರು ೨೫ ವರ್ಷಗಳ ನಂತರ, ೧೯೬೦ರಲ್ಲಿ ಕ್ಲಾರ್ಕ್ ಗೇಬಲ್ ನಿಧನ ಹೊಂದಿದರು. ಅಷ್ಟು ಹೊತ್ತಿಗೆ ಆಸ್ಕರ್ ಪ್ರತಿಮೆಯನ್ನು ತೆಗೆದುಕೊಂಡು ಹೋಗಿದ್ದ ಬಾಲಕ ಬೆಳೆದು ಯುವಕನಾಗಿದ್ದ. ಆತನ ತಾಯಿ ಎಂದೋ ತೀರಿಕೊಂಡಿದ್ದರು. ಆದರೆ ಆ ಯುವಕ ಆಸ್ಕರ್ ಪ್ರತಿಮೆಯನ್ನು ಪ್ರಾಮಾಣಿಕವಾಗಿ ತಂದು ಕ್ಲಾರ್ಕ್ ಗೇಬಲ್ಲರ ಕುಟುಂಬದವರಿಗೆ ಹಿಂತಿರುಗಿಸಿದರು. ಕ್ಲಾರ್ಕ್ ಗೇಬಲ್ಲರ ಸ್ಮರಣಾರ್ಥ ವಸ್ತು ಸಂಗ್ರಹಾಲಯದಲ್ಲಿ ಅದನ್ನು ಇಟ್ಟಿರಬಹುದು!

ನಮಗೂ ಬದುಕಿನಲ್ಲಿ ಪ್ರಶಸ್ತಿ, ಫಲಕ, ಪುರಸ್ಕಾರಗಳು ಸಿಗಬಹುದು. ಸಿಕ್ಕಾಗ ಅವು ನಮ್ಮ ಅಹಂಕಾರದ ಕಿರೀಟಕ್ಕೆ ಮೆರುಗನ್ನು ನೀಡಬಹುದು! ಆನಂತರ ಅವು ನಮ್ಮ ಮನೆಯ ಶೋಕೇಸನ್ನು ಅಲಂಕರಿಸಬಹುದಲ್ಲವೇ? ಇಲ್ಲಿ ಗಮನಾರ್ಹವಾದದ್ದು ಗೇಬಲ್ಲರ ನಿರಾಳತನ! ಅಂತಹ ನಿರಾಳತನ ನಮಗೂ ಬಂದರೆ ಒಳ್ಳೆಯದಲ್ಲವೇ? 

 ಕೃಪೆ :ಎಸ್.ಷಡಕ್ಷರಿ. 

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು