Tuesday, July 16, 2024

 ಕಥೆ-458

ತಕ್ಷಣದ ಪ್ರತಿಕ್ರಿಯೆ

ಅದೊಂದು ಸುಂದರವಾದ ಕೊಳ­ವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದು­ಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು.

ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯ­ಮಾನಗಳ ಬಗ್ಗೆ ಮಾಹಿತಿ ಪಡೆಯು­ತ್ತಿತ್ತು. ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿ­ಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು.


ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು. ಅದಕ್ಕೆ ಕೋಪ ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾ­ದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು.


ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕಾರಣವಾಗುತ್ತಿತ್ತು. ಹಂಸಗಳು ಅನೇಕ ಬಾರಿ ಅದರ ಬಗ್ಗೆ ಆಮೆಗೆ ಹೇಳಿ ನೋಡಿದವು. ಆಮೆ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಮತ್ತಷ್ಟು ರೇಗಿತು. ‘ಹೇ, ನೀವಿಬ್ಬರೂ ನಿಷ್ಪ್ರ­ಯೋಜಕರು, ಪ್ರತಿಯೊಂದಕ್ಕೂ ಹೆದ­ರುತ್ತೀರಿ. ನಾನು ಯಾರಿಗೂ ಹೆದ­ರು­ವವನಲ್ಲ. ನನ್ನ ನಡೆ, ನುಡಿ ಯಾವಾ­ಗಲೂ ನೇರ. ಯಾರು ಏನೆಂದು­ಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

ನನ್ನದೇ­ನಿದ್ದರೂ ಒಂದು ಹೊಡೆತ, ಎರಡು ತುಂಡು. ಅದೇ ನನ್ನ ನಾಯಕತ್ವದ ಶಕ್ತಿ’ ಎಂದು ಗುಡುಗಿತು. ಇದಕ್ಕೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಹಂಸಗಳು ಸುಮ್ಮನಾದವು. ಮರುವರ್ಷ ಬೆಟ್ಟಗಳ ಇಳಿಜಾರಿನಲ್ಲಿ ಕೆಲವು ಕಾರ್ಖಾನೆಗಳು ಆರಂಭ­ಗೊಂಡವು. ಅವುಗಳ ಕಟ್ಟಡ­ಗಳು ಎಲ್ಲೆಡೆ ಹರಡತೊಡಗಿದವು. ಇದರಿಂದ ಎರಡು ರೀತಿಯ ಹಾನಿ ಕೊಳಕ್ಕೆ ಆಗತೊಡಗಿತು. ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಂತು­ಹೋಯಿತು.

ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ಕೊಳಕ್ಕೆ ಸೇರಿ, ನೀರು ವಿಷಮಯ­ವಾಗತೊಡಗಿತು. ಇದನ್ನು ಮೊದಲು ಗಮನಿ­ಸಿದ್ದು ಆಮೆ. ಸಣ್ಣಪುಟ್ಟ ಮೀನು­ಗಳು ಸಾಯುವುದನ್ನು ಕಂಡೊಡನೆ ಅದಕ್ಕೆ ಈ ಸರೋವರ ಇನ್ನು ಬದುಕ­ಲಾರದು ಎನ್ನಿಸಿತು. ತಕ್ಷಣವೇ ಅದು ಹಂಸಗಳನ್ನು ಕರೆದು ಸುತ್ತಮುತ್ತ ಹಾರಾಡಿ ಬೇರೆ ಕೊಳಗಳು ಇರುವು­ದನ್ನು ನೋಡಿಕೊಂಡು ಬರಲು ಒತ್ತಾ­ಯಿ­ಸಿತು. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಹಂಸಗಳು ಹಿಂದೆ­ಮುಂದೆ ನೋಡಿದಾಗ ಅವುಗಳಿಗೆ ಬೈಯ್ದು, ಪ್ರೋತ್ಸಾಹಿಸಿ ಒಪ್ಪಿಸಿತು. ನಾಲ್ಕು ದಿನಗಳಲ್ಲಿ ಅವು ಮತ್ತೊಂದು ಸುಂದರ ಕೊಳವನ್ನು ನೋಡಿಕೊಂಡು ಬಂದವು.


ಆದರೆ, ಅದು ಈ ಕೊಳದಿಂದ ಒಂದು ಮೈಲಿ ದೂರವಿತ್ತು. ಹಂಸ­ಗಳೇನೋ ಹಾರಿಹೋದಾವು, ಆಮೆ ಹೋಗುವುದು ಹೇಗೆ? ಕೊನೆಗೆ ಅದೇ ಸಲಹೆ ನೀಡಿತು. ‘ನೀವಿಬ್ಬರೂ ನಿಮ್ಮ ಬಾಯಿಯಲ್ಲಿ ಒಂದು ಕಡ್ಡಿ ಹಿಡಿದುಕೊಂಡು ಒಮ್ಮೆಗೇ ಹಾರಿ. ನಾನು ಆ ಕಡ್ಡಿಯ ಮಧ್ಯಭಾಗವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತೇನೆ. ಆಗ ನೀವು ನನ್ನನ್ನು ಎತ್ತಿಕೊಂಡು ಆ ಕೊಳಕ್ಕೆ ಹೋಗಿ ಇಳಿಸಿಬಿಡಿ’. ಅಂತೆಯೇ ಪಕ್ಷಿಗಳು ಉದ್ದ ಕಡ್ಡಿಯ ಎರಡು ತುದಿಗಳನ್ನು ಕಚ್ಚಿಕೊಂಡು ಸಿದ್ಧವಾದವು.

ಆಮೆ ಮಧ್ಯಭಾ­ಗವನ್ನು ಗಟ್ಟಿಯಾಗಿ ಬಾಯಲ್ಲಿ ಹಿಡಿಯಿತು. ಪಕ್ಷಿಗಳು ಮೇಲೆ ಹಾರಿದವು. ನಡುವೆ ಆಮೆ ಗಾಳಿಯಲ್ಲಿ ತೇಲುತ್ತ ಸಾಗಿತ್ತು. ಈ ದೃಶ್ಯವನ್ನು ಕಂಡು ಎಲ್ಲ ಪ್ರಾಣಿ­ಗಳು, ಜನ ಆಶ್ಚರ್ಯಪಟ್ಟರು, ಕೆಲವರು ಕೈ ತಟ್ಟಿ ನಕ್ಕರು. ಹೀಗೆ ನಕ್ಕಿದ್ದು ಆಮೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸಿಟ್ಟು ಸರ್ರನೇ ಏರಿತು. ‘ದರಿದ್ರಗಳಾ, ನನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳುವ ಬದಲು ನಗುತ್ತೀರಾ?’ ಎಂದು ಕೋಪದಿಂದ ಕೂಗಿತು.

ಆಗ ಕಡ್ಡಿಯ ಹಿಡಿತ ತಪ್ಪಿ ಹೋಗಿ ಎತ್ತರದಿಂದ ಕೆಳಗೆ ಬಿದ್ದು ಚಿಪ್ಪೊಡೆದು ಸತ್ತ್ತು ಹೋಯಿತು. ಎಷ್ಟೇ ದೊಡ್ಡ ನಾಯಕರಾದರೂ, ಎಲ್ಲ ನಾಯಕತ್ವದ ಗುಣಗಳಿದ್ದರೂ ಸಿಟ್ಟನ್ನು ನಿಗ್ರಹಿಸದಿದ್ದರೆ, ತಕ್ಷಣದ ಪ್ರತಿಕ್ರಿಯೆಯ ಉದ್ವೇಗ ತಡೆದುಕೊಳ್ಳದಿದ್ದರೆ ಅದೊಂದು ದಿನ ಬಹುದೊಡ್ಡ ಅಪಾಯ­ ತಂದೊ­ಡ್ಡುತ್ತದೆ. ಕೃಪೆ: ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು