ಕಥೆ-484
ವೈಫಲ್ಯವೇ ಹೊಸ ಯಶಸ್ಸಿಗೆ ದಾರಿ.
ಈತ ಓದಿದ್ದು, ಬರೀ 8ನೇ ತರಗತಿ. ಆದರೆ ಆಗಿದ್ದು ಮಾತ್ರ ಜನ ಪ್ರಸಿದ್ಧ ಮಿಕ್ಕಿಮೌಸ್ ಜನಕನಾಗಿ. ಸಾಧಿಸುವ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದು ಈತನೇ ಉತ್ತಮ ಉದಾಹರಣೆ. ಸೋತು ಗೆದ್ದ ಇವರ ಸಾಧನೆ ಎಂಥವರಿಗೂ ಸ್ಫೂರ್ತಿ.
ಇವರ ಬಾಲ್ಯ ಸಾಗಿದ್ದು ಅತ್ಯಂತ ಕಡು ಬಡತನದಲ್ಲಿ. ಒಂದು ತುತ್ತಿಗೂ ಅಂಗಲಾಚಿದ ದಿನಗಳಿದ್ದವು. ಅಂತಹ ದಿನಗಳ ಎದುರು ಹೋರಾಡಿದ ವಾಲ್ಟ್ ಡಿಸ್ನಿ, ಕಟ್ಟಿದ್ದು ಯಶಸ್ಸಿನ ಸಾಮ್ರಾಜ್ಯವನ್ನು. ಬಾಲ್ಯದಲ್ಲಿ ಕಾರ್ಟೂನ್ ಹವ್ಯಾಸ ಹೊಂದಿದ್ದ ವಾಲ್ಟ್ ಡಿಸ್ನಿ, ಆಗಿದ್ದು ಜನಪ್ರಿಯ ಕಾರ್ಟೂನ್ ಮಿಕ್ಕಿ ಮೌಸ್ (Famous Cartoon Mickey Mouse) ಜನಕವಾಗಿ. ವಿಶ್ವದ ಕೋಟ್ಯಂತರ ಮಂದಿಗೆ ಅವರೇ ರೋಲ್ ಮಾಡೆಲ್.
ವಾಲ್ಟ್ ಡಿಸ್ನಿ ಅವರ ಓದು 8ನೇ ತರಗತಿಗೆ ನಿಂತು ಹೋಯ್ತು. 1918ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾಯ್ತು. ಪರಿಣಾಮ ಪ್ರೌಢಶಾಲೆಯಲ್ಲಿ ಅವರು ಒಂದು ವರ್ಷವಷ್ಟೇ ಅಧ್ಯಯನ ಮಾಡಲು ಸಾಧ್ಯವಾಯ್ತು. ನಂತರ ರೆಡ್ಕ್ರಾಸ್ ಆ್ಯಂಬುಲೆನ್ಸ್ ಚಾಲಕನಾಗಿ ಸೇವೆ ಸಲ್ಲಿಸಿದರು.
ಕಾರ್ಟೂನ್ ರಚಿಸುವುದರಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಾಲ್ಟ್ ಡಿಸ್ನಿ, ತನ್ನ 19ನೇ ವಯಸ್ಸಿನಲ್ಲೇ ಪತ್ರಿಕೆಯೊಂದಕ್ಕೆ ಕಾರ್ಟೂನ್ ಕಂಪನಿ ಪ್ರಾರಂಭಿಸಿದರು. ಬೇಸರದ ಸಂಗತಿ ಎಂದರೆ ಅವರ ಒಂದೇ ಒಂದು ಕಾರ್ಟೂನ್ ಮಾರಾಟವಾಗಲಿಲ್ಲ. ಕೂಡಿಟ್ಟ ಬಂಡವಾಳವೂ ಖಾಲಿಯಾಗಿ ಒಂದೊತ್ತಿನ ಊಟಕ್ಕೂ ಪರದಾಡಿದರು. ಬರೋಬ್ಬರಿ ಮೂರು ವರ್ಷಗಳ ಕಾಲ ಅಂದರೆ, 22ನೇ ವಯಸ್ಸಿನವರೆಗೂ ಹಣಕಾಸಿನ ಸಮಸ್ಯೆ ತೀವ್ರವಾಗಿ ಕಾಡಿತು. ಎಲ್ಲಾ ಮೂಲಗಳಿಂದಲೂ ನಿರಾಸೆ ನಿರಾಸೆ. ಆಗ ಸ್ನೇಹಿತರು ಇವರ ಕೈ ಹಿಡಿದರು. ಸ್ವಲ್ಪ ಯಶಸ್ಸು ಪಡೆದರಾದರೂ ನಂತರ ಒಳ್ಳೆಯ ದಿನಗಳು ಅವರದ್ದಾಗಿರಲಿಲ್ಲ. 1928 ವಾಲ್ಟ್ ಡಿಸ್ನಿಗೆ ತೀರಾ ಕೆಟ್ಟ ವರ್ಷ. ಯಾಕೆಂದರೆ ಅವರ ಸಹೋದ್ಯೋಗಿಗಳೆಲ್ಲರೂ ಆತನನ್ನು ಬಿಟ್ಟು ಹೋದರು.
ನಿಮ್ಮಲ್ಲಿ ಕ್ರಿಯೆಟಿವಿಟಿ ಇಲ್ಲ ಎಂದು ಹೇಳಿದ ನ್ಯೂಸ್‌ಪೇಪರ್ ವಾಲ್ ಡಿಸ್ನಿ ಎಂಬ ವ್ಯಕ್ತಿಯನ್ನು ಉದ್ಯೋಗದಿಂದ ತೆಗೆದುಹಾಕಿತ್ತು. ಇದು ವಾಲ್ ಡಿಸ್ನಿಯ ಜೀವನದಲ್ಲಿ ಟರ್ನಿಂಗ್ ಪಾಯಿಂಟ್. ತನ್ನ ಕಣ್ಣಿಗೆ ಬಿದ್ದ ಇಲಿಯನ್ನೇ ಜಗತ್ತಿನ ಪ್ರಮುಖ ಕಾರ್ಟೂನ್ ಕ್ಯಾರೆಕ್ಟರ್ ಆಗಿ ಪರಿವರ್ತಿಸಿದ ವ್ಯಕ್ತಿ ಇವರು. ಮಿಕ್ಕಿ ಮೌಸ್ ಈಗ ತುಂಬಾ ಫೇಮಸ್. ಡಿಸ್ನಿಗೆ 22 ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಇತಿಹಾಸದಲ್ಲಿಯೇ ಅತ್ಯಧಿಕ ಬಾರಿ ಆಸ್ಕರ್‌ಗೆ ನಾಮಿನೇಟೆಡ್ ಆದ ವ್ಯಕ್ತಿ ಇವರು. ಮಿಕ್ಕಿ ಮೌಸ್ ವಿಶ್ವ ಪ್ರಸಿದ್ದಿ ಪಡೆಯಿತು. ಡೊನಾಲ್ಡ್ ಡಕ್, ಗೂಫಿ, ಪ್ಲುಟೊ, ಮಿನಿ ಮೌಸ್.. ಹೀಗೆ ಹಲವಾರು ಕಾರ್ಟೂನ್ ಪಾತ್ರಗಳನ್ನು ಸೃಷ್ಟಿಸಿ ಖ್ಯಾತಿ ಅವರಿಗಿದೆ. ಕೊನೆಗೆ ತನ್ನ ಹೆಸರನ್ನೇ ಕಂಪನಿಗೆ ಇಟ್ಟರು. ಸದ್ಯ ವರ್ಷದಿಂದ ವರ್ಷಕ್ಕೆ ವಾಲ್ಟ್ ಡಿಸ್ನಿ ಕಂಪನಿ ಆದಾಯ 15.66% ಹೆಚ್ಚಳವಾಗುತ್ತಿದೆ. ಕಳೆದ ವರ್ಷ 82.7 ಶತಕೋಟಿ US ಡಾಲರ್‌ಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಿದೆ. ವಾಲ್ಟ್ ಡಿಸ್ನಿ ಕಂಪನಿಯ ನಿವ್ವಳ ಮೌಲ್ಯವು US ಡಾಲರ್ 203.63 ಬಿಲಿಯನ್ಗೂ ಹೆಚ್ಚಿದೆ. ಸಾಧಿಸುವ ಛಲ ನಮ್ಮಲ್ಲಿದ್ದರೆ, ಯಾರು ನಮ್ಮನ್ನು ತಡೆಯರು, ಆ ವೈಫಲ್ಯವೇ ಹೊಸ ಯಶಸ್ಸಿಗೆ ದಾರಿಯಾಗುತ್ತದೆ.
No comments:
Post a Comment