ಕಥೆ-492
ರಕ್ಷಾಬಂಧನ
ರಾಖಿ ಎಂಬುದು ಕೇವಲ ನೂಲಲ್ಲ, ನಮ್ಮ ಸಂಬಂಧಗಳನ್ನು ಸದಾ ಸುರಕ್ಷಿತವಾಗಿರಿಸುವ ಅಭೇದ್ಯ ಸರಪಳಿ..
ಕನಸುಗಳು ನೂರಿರಲಿ, ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸೋದರತೆಯ ಸಂಭ್ರಮದ ಹಬ್ಬ...
ರಕ್ಷಾ ಬಂಧನದ ಶುಭಾಶಯಗಳು.
ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ನೂಲು ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ರಕ್ಷಾಬಂಧನವನ್ನು ಆಚರಿಸುತ್ತಾರೆ. ಈ ರಕ್ಷಾ ಬಂಧವನ್ನು ‘ರಾಖಿ ಹಬ್ಬ’, ‘ಅಣ್ಣ ತಂಗಿ’ ಹಬ್ಬ ಎಂದೂ ಕರೆಯುತ್ತಾರೆ. ರಕ್ಷಾಬಂಧನವು ಭಾರತದಲ್ಲಿ ಒಂದು ವಿಶೇಷ ಹಬ್ಬವಾಗಿದ್ದು, ಇದು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸುವಂತಹ ಹಬ್ಬವಾಗಿದೆ
ರಕ್ಷಾ ಬಂಧನ ಸಹೋದರ-ಸಹೋದರಿಯರ ಪ್ರೀತಿಯ ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರ ಒಳ್ಳೆಯದಾಗಲೆಂದು ಹಾರೈಸುತ್ತ ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ಅವರ ಕೈಯ ಮಣಿಕಟ್ಟಿನ ಮೇಲೆ ತಮ್ಮ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ರಾಖಿಯನ್ನು ಕಟ್ಟಿ ದೀರ್ಘಾಯುಷ್ಯವನ್ನು ಹಾರೈಸಿ ಆಶೀರ್ವಾದ ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಅಲ್ಲದೇ ಸಹೋದರರು ತಮ್ಮ ಸಹೋದರಿಯರಿಗೆ ಅವರ ಪ್ರೀತಿಯ ಸಂಕೇತವಾಗಿ ಅವರಿಗಿಷ್ಟವಾದ ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಕೊನೆಗೆ ಕುಟುಂಬಗಳೊಂದಿಗೆ ಹಬ್ಬದ ಊಟವನ್ನು ಸವಿಯುತ್ತಾರೆ. ಆದರೆ ಕೆಲವೊಮ್ಮೆ ದೂರ ದೂರ ಇರುವ ಸಹೋದರ ಸಹೋದರಿಯರು ಭೇಟಿ ಆಗಲು ಸಾಧ್ಯವಾಗದಿದ್ದಾಗ ಅವರಿಗೆ ರಾಖಿಯನ್ನು ಕಳುಹಿಸಿಕೊಡುತ್ತಾರೆ.
ರಕ್ಷಾಬಂಧನವು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಇದು ಒಡಹುಟ್ಟಿದವರ ನಡುವೆ ಪ್ರೀತಿ ಮತ್ತು ಬೆಂಬಲವನ್ನು ಹೆಚ್ಚಿಸುತ್ತದೆ. ಸಹೋದರಿಯರು ತಮ್ಮ ಸಹೋದರರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ರಕ್ಷಾಬಂಧನ ಯುಗಯುಗಾಂತರಗಳಿಂದ ಬಂದಿರುವ ಒಂದು ಸಾಂಪ್ರದಾಯಿಕ ಹಬ್ಬವಾಗಿದೆ. ಇದು ಕುಟುಂಬದ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಮೂಡಿಸುತ್ತದೆ.
No comments:
Post a Comment