Sunday, August 4, 2024

 ಕಥೆ-477

ಗೌರವಿಸುವ ಲಕ್ಷಣ

ಹಿಂದೆ ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿ­­ದರಿಗೆ ರಾಜಾಶ್ರಯ ಬಹು­ದೊಡ್ಡ ಭರವಸೆಯಾಗಿತ್ತು. ಹೊಟ್ಟೆ­ಪಾಡಿಗೆ ಚಿಂತೆಪಡದೇ ತಮ್ಮ ಸೃಜನ­­ಶೀಲತೆ ವೃದ್ಧಿಸಿಕೊಳ್ಳಲು ರಾಜರ ಆಶ್ರಯ ಸಹಾಯ ಮಾಡುತ್ತಿತ್ತು. ಅದು ಬಹಳಷ್ಟು ಬಾರಿ ಯಜಮಾನ – ಕೆಲಸಗಾರನ ಸಂಬಂಧವಾಗಿರದೇ ಆತ್ಮೀಯ ಗೆಳೆಯನ ಸ್ನೇಹದಂತಿತ್ತು. ಭೋಜರಾಜ ಮತ್ತು ಕಾಳಿದಾಸರ ಸ್ನೇಹ, ಅಕ್ಬರ್ ಮತ್ತು ತಾನಸೇನ್‌ನ ಆತ್ಮೀಯತೆ ಇದಕ್ಕೆ ಮಾದರಿಯಾ­ದಂಥವುಗಳು.


ಕೆಲ­­ವೊಂದು ಬಾರಿ ಆಸ್ಥಾನ ಕವಿಗಳು, ಸಾಹಿತಿಗಳು ತಮಗೆ ಆಶ್ರಯ ನೀಡಿದ ರಾಜ­ನಿಗೆ ಕೃತಜ್ಞತೆ ಸಮರ್ಪಿಸಲು ಅವನನ್ನೇ ಹೊಗಳಿ, ಹಾಡಿ ಅತಿರೇಕಕ್ಕೆ ಹೋದದ್ದೂ ಉಂಟು. ಅದೇ ರೀತಿ ತಾನು ಯಾವಾಗಲೂ ಯಜಮಾನನೇ ಎಂದು ತೋರುವ ದರ್ಪದಲ್ಲಿ ಕಲಾವಿದರಿಗೆ ತೋರುವ ಗೌರವವನ್ನು ಬಹು­ದೊಡ್ಡ ಉಪಕಾರ ಎಂದು ಪ್ರದರ್ಶಿಸುವ ರಾಜರೂ ಇದ್ದರು. ಗಾಯನ ಸಾಮ್ರಾ­ಜ್ಯದ ಚಕ್ರವರ್ತಿ ಎಂದು ಕರೆಯಿಸಿಕೊಳ್ಳುತ್ತಿದ್ದ ಪಂಡಿತ ಅಲ್ಲಾದಿಯಾಖಾನರ ಮನೆತನ­­ದಲ್ಲಿ ಹಿಂದೆ ಶಾದೀಖಾನ್ ಎಂಬ ಮಹಾನ್ ಗಾಯಕರಿದ್ದರಂತೆ.


ಅವರ ಕೀರ್ತಿ ಭಾರತದೆಲ್ಲೆಡೆ ಹರಡಿತ್ತು. ಅದನ್ನು ಕೇಳಿ ತಿಳಿದ ಉತ್ತರ ಭಾರತದ ರಾಜನೊಬ್ಬ ಅವರನ್ನು ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ. ಅವರನ್ನು ತನ್ನ ಅರ­ಮನೆಗೆ ಕರೆದೊಯ್ದು ಕೇವಲ ತನ್ನ ಪರಿವಾರ ಹಾಗೂ ಆಸ್ಥಾನಿಕರಿಗೆ ಒಂದು ಗಾಯನ ಕಾರ್ಯಕ್ರಮ ಏರ್ಪಡಿಸಿದ. ಅಲ್ಲಿ ಶಾದೀಖಾನ್ ಅದ್ಭುತವಾಗಿ ಹಾಡಿ­ದರು. ರಾಜನಿಗೆ ಅಷ್ಟರಿಂದಲೇ ತೃಪ್ತಿಯಾಗಲಿಲ್ಲ. ಮರುದಿನ ಅರಮ­ನೆಯ ಮುಂಭಾಗದಲ್ಲಿ ಇಡೀ ನಗರದ ಜನಕ್ಕೆ ಒಂದು ಕಾರ್ಯಕ್ರಮ ಆಯೋಜಿ­ಸಿದ. ಸಹಸ್ರಾರು ಜನ ಬಂದರು.


ಅಂದಂತೂ ಖಾನ್ ಸಾಹೇಬರ ಗಾಯನ ಅತ್ಯದ್ಭುತ­ವಾಗಿತ್ತು. ಜನ ಹುಚ್ಚೆದ್ದು ಕುಣಿದರು. ರಾಜನಿಗೆ ಸಂಪೂರ್ಣ ತೃಪ್ತಿಯಾ­ಯಿತು. ತಕ್ಷಣವೇ ಅಷ್ಟೊಂದು ಜನರ ಮುಂದೆ ಶಾದೀಖಾನ್‍ರಿಗೆ ಸನ್ಮಾನ ಮಾಡಲು ನಿರ್ಧ­ರಿಸಿದ. ಗಾಯಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ತನ್ನ ಘನತೆಯನ್ನು, ಉದಾ­ರ­ತೆ­ಯನ್ನು ತೋರಿ­ಸುವುದು ಕೂಡ ಮುಖ್ಯವಾಗಿತ್ತು.


ತನ್ನ ಗೌರವದ ದ್ಯೋತಕ­ವಾಗಿ ರಾಜ ನೂರಾರು ರೇಷ್ಮೆಯ ಚೀಲಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ತುಂಬಿ ಅವು­ಗಳನ್ನು ಅಲಂಕರಿಸಿದ ಆನೆಯ ಮೇಲೆ ಹೊರಿಸಿ ಆ ಚೀಲಗಳ ಮಧ್ಯೆ ಪಂಡಿತ ಶಾದೀ­ಖಾನ್‌ ಅವರನ್ನು ಕುಳ್ಳಿರಿಸಿ ಸತ್ಕರಿಸಿದ. ಆಗ ಎಲ್ಲರಿಗೆ ಕೇಳುವಂತೆ ಹೇಳಿದ, ‘ನಿಮಗೆ ಹಿಂದೆ ಹಲವಾರು ಜನರು ಮರ್ಯಾದೆ ತೋರಿರಬಹುದು. ಆದರೆ, ಆನೆಯ ಮೇಲೆ ಕುಳ್ಳಿರಿಸಿ, ಆನೆ ಹೊರುವಷ್ಟು ಹಣವನ್ನು ಕೊಡುವ ರಾಜನನ್ನು ನೋಡಿದ್ದು ನಿಮಗೆ ಇದೇ ಮೊದಲನೇ ಸಲವಿರಬಹುದಲ್ಲವೇ?’ ಶಾದೀಖಾನ್‍ರು ನಸು­ನಕ್ಕು, ‘ಹೌದು ಮಹಾಸ್ವಾಮಿ’ ಎಂದರು.


ಮಹಾನ್ ಗಾಯಕರ ಮೆರವಣಿಗೆ ನಗರದಲ್ಲಿ ನಡೆಯಿತು. ಆನೆಯ ಮೇಲೆ ಕುಳಿತಿದ್ದ ಶಾದೀಖಾನ್‌ ಅವರು ಒಂದೊಂದೇ ಹಣದ ಚೀಲವನ್ನು ತೆಗೆದು ಅದರಲ್ಲಿಯ ನಾಣ್ಯಗಳನ್ನು ಒಂದೊಂದಾಗಿ ರಸ್ತೆಯ ಮೇಲೆ ಎಸೆ­ಯುತ್ತ ಬಂದರು. ಮೆರವಣಿಗೆ ಮುಗಿದು ಅರಮನೆಯ ಹತ್ತಿರ ಬರುವ­ಷ್ಟರಲ್ಲಿ ಒಂದೂ ನಾಣ್ಯ ಉಳಿದಿರಲಿಲ್ಲ. ಈ ವಿಷಯ ರಾಜನಿಗೆ ತಲುಪಿತ್ತು.

ಆಗ ಶಾದೀಖಾನ್‌ ವಿನಯದಿಂದಲೇ ರಾಜ­ನಿಗೆ ಕೇಳಿದರು, ‘ಮಹಾರಾಜ್, ಆನೆ ಹೊರುವಷ್ಟು ದೊರೆತ ನಾಣ್ಯಗಳನ್ನು ರಸ್ತೆಯಲ್ಲಿ ತೂರಿಬಂದ ಗಾಯಕನನ್ನು ನೀವು ನೋಡಿದ್ದು ಇದೇ ಮೊದಲ ಬಾರಿಯಲ್ಲವೇ?’ ರಾಜನಿಗೆ ತನ್ನ ಮೂರ್ಖತನದ ಅರಿವಾಗಿ ಅವರನ್ನು ಮತ್ತೊಮ್ಮೆ ಪ್ರಾಮಾಣಿಕವಾಗಿ ಗೌರವಿಸಿದ.

ಅಧಿಕಾರದಲ್ಲಿ ಇರುವ­ವರಿಗೆ, ಕಲಾವಿದರನ್ನು, ಸಜ್ಜನರನ್ನು ಗೌರವಿಸುವಾಗ ವಿನಯ­­ವಿರಬೇಕು, ಅವರು ತಮ್ಮ ಗೌರವವನ್ನು ಸ್ವೀಕರಿಸಲು ಒಪ್ಪಿದರಲ್ಲ ಎಂಬ ಧನ್ಯತೆ ಇರಬೇಕು. ತಾವು ಅವರಿಗೆ ಗೌರವ ತೋರಿ ಮಹೋಪಕಾರ ಮಾಡಿದ್ದೇವೆ ಎನ್ನುವ ಅಹಂಕಾರ ಭಾವ ಸರಿಯಲ್ಲ. ಅಂತೆಯೇ ಗೌರವ ಬಂದರೆ ಸಾಕು ಎಂಬಂತೆ ಅಧಿಕಾರಿಗಳನ್ನು, ಗದ್ದುಗೆಗಳ­ಲ್ಲಿದ್ದವರನ್ನು ಓಲೈಸುವ ಲಕ್ಷಣವೂ ಕಲಾವಿದರಿಗೆ ಗೌರವ ತರದು. ಕೃಪೆ ,: ಮುಖ ಪುಸ್ತಕ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು