ಕಥೆ-561
ನೆಮ್ಮದಿಯ ಹುಡುಕಾಟ
ರಾಜನೊಬ್ಬನಿಗೆ ಸಂಪದ್ಭರಿತವಾದ ಸಾಮ್ರಾಜ್ಯವಿದ್ದರೂ ಆತನ ಬಾಳಲ್ಲಿ ನೆಮ್ಮದಿ, ಖುಷಿ ಇರಲಿಲ್ಲ. ಇದರಿಂದಾಗಿ ಅವನ ಮನಸ್ಸಿನಲ್ಲಿ ಸದಾ ಕೋಪ, ತಾಪ. ಸಿಕ್ಕಸಿಕ್ಕವರ ಮೇಲೆ ಹರಿಹಾಯುತ್ತಿದ್ದ. ಕೋಪದಿಂದ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ರಾಜ ಹುಚ್ಚನಂತಾದ. ಆವೇಶದಲ್ಲಿ ಬೀದಿಗೆ ಬಂದು ಚೀರಿದ, 'ನನಗೆ ನಮ್ಮದಿ ಬೇಕು' ಎಂದ. ರಾಜನ ಆಸ್ಥಾನದ ಮಂತ್ರಿಗಳೆಲ್ಲ ಧಾವಿಸಿದರು. 'ಮಹಾರಾಜ, ಮೇಲೆ
ನೋಡಿ. ಆ ಸೂರ್ಯ, ಚಂದ್ರ, ಬೆಳ್ಳಿ ನಕ್ಷತ್ರಗಳು ಎಷ್ಟು ಚೆಂದ. ಅವುಗಳನ್ನು ನೋಡಿ ಖುಷಿಪಡಿ. ನೆಮ್ಮದಿ ಸಿಗುತ್ತದೆ' ಎಂದಾಗ ರಾಜ 'ಆ ಸೂರ್ಯ, ಚಂದ್ರ, ನಕ್ಷತ್ರಗಳೇನು ನನ್ನ ಕೈಗೆ ಸಿಗುತ್ತವೆಯೇ ಖುಷಿಪಡಲಿಕ್ಕೆ, ಹೋಗಿ' ಎಂದ. 'ಸಂಗೀತಕ್ಕೆ ಮನಸ್ಸನ್ನು ಆಹ್ಲಾದಗೊಳಿಸುವ ಶಕ್ತಿ ಇದೆ. ದಿನವಿಡಿ ನಿಮ್ಮ ಮುಂದೆ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತೇವೆ. ಅದರಿಂದ ನಿಮ್ಮ ಮನಕ್ಕೆ ಆನಂದ ಸಿಗಬಹುದು'ಎಂದರು ಕೆಲವರು. 'ಅಯ್ಯೋ, ದಿನವಿಡಿ ಸಂಗೀತ ಕೇಳುತ್ತ ಕುಳಿತುಕೊಳ್ಳುವ ತಾಳ್ಮೆ ನನಗಿಲ್ಲ' ಎಂದ ರಾಜ. ಹೀಗೆಯೇ ರಾಜ ನೆಮ್ಮದಿ ಇಲ್ಲದೇ ದಿನಗಳೆಯುತ್ತಿರಬೇಕಾದರೆ ಒಬ್ಬ ಮಂತ್ರಿ ರಾಜನ ಹತ್ತಿರಬಂದು, “ನನ್ನ ಹತ್ತಿರ ಒಂದು ಉಪಾಯ ಇದೆ. ನಮ್ಮ ಸಾಮ್ರಾಜ್ಯದಲ್ಲಿ ಅತ್ಯಂತ ಹೆಚ್ಚು ನೆಮ್ಮದಿ ಇರುವ ವ್ಯಕ್ತಿಯ ದೇಹದ ಮೇಲಿರುವ ಅಂಗಿಯನ್ನು ನೀವು ಧರಿಸಿದರೆ ಖಂಡಿತ ನಿಮಗೆ ನೆಮ್ಮದಿ ದೊರೆಯುತ್ತದೆ' ಎಂದ. ರಾಜನಿಗೆ ಈ ವಿಚಾರ ಒಪ್ಪಿಗೆ ಆಯಿತು. ಇಂತಹ ವ್ಯಕ್ತಿಗಾಗಿ ರಾಜಭಟರು ಹುಡುಕಾಟ ಪ್ರಾರಂಭಿಸಿದರು. ಒಂದು ತಿಂಗಳಿನ ಹುಡುಕಾಟದ ನಂತರ ಒಬ್ಬ ಸಿಕ್ಕ. ಸೈನಿಕರು ಆತನನ್ನು ರಾಜನ ಆಸ್ಥಾನಕ್ಕೆ ಕರೆತಂದರು. ಅತ್ಯಂತ ನೆಮ್ಮದಿಯಿಂದ ಇರುವ ವ್ಯಕ್ತಿಯನ್ನು ನೋಡಲು ರಾಜ ಧಾವಿಸಿದಾಗ ಆಶ್ಚರ್ಯ ಕಾದಿತ್ತು. ಕರೆತರಲಾದ ಆ ವ್ಯಕ್ತಿಯ ದೇಹದ ಮೇಲೆ ಅಂಗಿಯೇ ಇರಲಿಲ್ಲ. ಹೊಲದಲ್ಲಿ ಕೃಷಿ ಕೆಲಸದಲ್ಲಿ ನಿರತನಾದ ಬಡ ರೈತ ಆತ! ರಾಜನಿಗೆ ಜ್ಞಾನೋದಯವಾಯಿತು. ಏನೂ ಇಲ್ಲದೇ ಈತ ನೆಮ್ಮದಿಯಿಂದ ಇರಬೇಕಾದರೆ, ಎಲ್ಲವೂ ಇರುವ ನಾನು ನೆಮ್ಮದಿಯನ್ನು ಮತ್ತೆಲ್ಲೋ ಹುಡುಕುತ್ತಿದ್ದೇನೆ ಎಂಬುದರ ಅರಿವಾಯಿತು.
ನಾಗಾಲೋಟದ ನಮ್ಮ ಜೀವನವೂ ಆ ರಾಜನ ಹಾಗೆಯೇ ಆಗಿದೆ. ಎಲ್ಲವೂ ಇದೆ. ಆದರೆ, ಮತ್ತೇನೋ ಹುಡುಕುತ್ತಿದ್ದೇವೆ. ನೆಮ್ಮದಿ ಇಲ್ಲ. ಏನೂ ಇರದೆಯೂ ನೆಮ್ಮದಿಯಿಂದ ಇರುವವರನ್ನು ನೋಡಿ ನಾವು ಕಲಿಯಬೇಕಾಗಿದೆ. ಕೆಲವರಿಗೆ ಕೈಕಾಲಿಲ್ಲ; ಮತ್ತೆ ಕೆಲವರಿಗೆ ನೋಡಲು ಕಣ್ಣುಗಳಿಲ್ಲ; ಕೆಲವರಿಗೆ ಕಿವಿ ಕೇಳದು. ಆದರೆ, ಇವೆಲ್ಲವನ್ನೂ ಪರಿಪೂರ್ಣವಾಗಿ ಹೊಂದಿರುವ ನಮಗೆ ಇದಕ್ಕಿಂತ ದೊಡ್ಡ ಆಸ್ತಿ ಬೇಕೆ? ಒಪ್ಪೋತ್ತಿನ ಊಟಕ್ಕೂ ಪರದಾಡುವರ ನಡುವೆ ಮೂರು ಹೊತ್ತು ಊಟ ಮಾಡುವ ನಮಗಿಂತ ಧನಿಕರಾರು?
-ಸುನಿತಾ ಬಸವರಾಜ ಕುಳಲಿ
No comments:
Post a Comment