ಕಥೆ-563
ಬೆಳ್ಳಿ ದಾರದ ಚಿಂತೆ
ಬಾವಿಯ ಅಂಚಿನಲ್ಲಿ ಆಡುತ್ತಿದ್ದ ಮಗುವೊಂದು ಆಯತಪ್ಪಿ ಒಳಗೆ ಜಾರಿತು. ಮಗು ಬಿದ್ದ ಸದ್ದು ಕೇಳಿ ಹೆತ್ತವರು ಎದೆ ಬಡಿದುಕೊಂಡು ಗೋಳಾಡುತ್ತಾ ಬಾವಿಯತ್ತ ಓಡಿಬಂದರು.
ಅಷ್ಟರಲ್ಲಿ ಅಲ್ಲೇ ಬಾವಿಯ ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವನೊಬ್ಬ ಮಗು ಬಿದ್ದದ್ದನ್ನು ಕಂಡು ಬಾವಿಗೆ ಧುಮುಕಿದ.
ಆತ ಈಜಿಕೊಂಡು ಮಗುವನ್ನು ಸಮೀಪಿಸುತ್ತಿದ್ದಂತೆ ಬಾವಿಯ ಸುತ್ತ ನಿಂತವರ ಆಕ್ರಂದನ ಜೋರಾಗತೊಡಗಿತು.
ನೀನು ಕೇಳಿದ್ದನ್ನು ಕೊಡ್ತೀವಿ ನಮ್ಮ ಮಗುವನ್ನು ಬದುಕಿಸಿಕೊಡಪ್ಪಾ ಎಂದು ಹೆತ್ತವರು ಅಂಗಲಾಚುತ್ತಿದ್ದರು.
ಅಷ್ಟು ಪ್ರಕ್ಷುಬ್ಧ ವಾತಾವರಣದಲ್ಲಿಯೂ ಆತನ ಮುಖಭಾವ ಬಾವಿಯ ನೀರಿನಂತೆ ತಣ್ಣಗಿತ್ತು.
ಮಗು ಜೀವಂತವಾಗಿದೆ ಎಂದು ಆತ ಮೇಲಿನವರಿಗೆ ಸನ್ನೆ ಮಾಡಿದಾಗ ಎಲ್ಲರೂ ನಿರಾಳರಾದರು.
ಆತ ಕೇವಲ ಮಗುವನ್ನು ಮಾತ್ರ ಮೇಲಕ್ಕೆ ಎತ್ತು ತರಲಿಲ್ಲ. ಅಲ್ಲೇ ಬಾವಿಯ ಇನ್ನೊಂದು ಬದಿಯಲ್ಲಿ ಕೊಳೆತ ತೆಂಗಿನ ಗರಿಯನ್ನು ಕಚ್ಚಿಕೊಂಡು ಜೀವ ಉಳಿಸಿಕೊಳ್ಳಲು ಹೆಣಗುತ್ತಿದ್ದ ನಾಯಿ ಮರಿಯನ್ನೂ ಎತ್ತಿಕೊಂಡು ಬಂದ.
ನಾಯಿ ಮರಿಯನ್ನು ಮುದ್ದಾಡುತ್ತಿದ್ದಾಗ ಮಗುವು ಮರಿಯ ಜೊತೆಗೆ ಬಾವಿಗೆ ಬಿದ್ದಿತ್ತು.
ಮಗುವಿನ ನಡುವಿನಲ್ಲಿದ್ದ ಬೆಳ್ಳಿಯ ಉಡುದಾರ ನೀರಿನಲ್ಲಿ ಜಾರಿಹೋಗಿತ್ತು.
ಮೊದಲು ಮಗು ಬದುಕುಳಿದರೆ ಸಾಕೆಂದು ಪ್ರಾರ್ಥಿಸುತ್ತಿದ್ದ ಹೆತ್ತವರ ಸಂಭ್ರಮವನ್ನು ಉಡುದಾರದ ಚಿಂತೆ ನುಂಗಿ ಹಾಕಿತು.
ಇನ್ನೊಂದು ಕಡೆ ಬಾವಿಯ ಅಂಚಿನಲ್ಲಿ ನಿರ್ಲಿಪ್ತವಾಗಿ ನೋಡುತ್ತಿದ್ದ ನಾಯಿ ತನ್ನ ಮರಿ ಮೇಲೆ ಬಂದ ಕೂಡಲೇ ಅಕ್ಕರೆಯಿಂದ ನೆಕ್ಕತೊಡಗಿತು,ಯಾವ ದಾರದ ಗೊಡವೆಯೂ ಇಲ್ಲದೇ.
ಮೊದಲು ನಾವು ಮಗು ಉಳಿದರೆ ಸಾಕು ಎನ್ನುವ ಮನಸ್ಥಿತಿ ನಂತರ ಮಗುವಿನ ಜೀವಕ್ಕಿಂತ ಅಮೂಲ್ಯವಲ್ಲದ ಬೆಳ್ಳಿ ದಾರದ ಚಿಂತೆ ಮಾಡುತ್ತೇವೆ...
ಹೆತ್ತವರ ನಾಟಕಿಯ ಬದಲಾವಣೆ ಆತನನ್ನು ಬಾಧಿಸಲಿಲ್ಲ. ಕಪಟತೆ ಅರಿಯದ ಎರಡು ಜೀವಿಗಳನ್ನು ರಕ್ಷಿಸಿದ ಸಂತೃಪ್ತಿಯಿಂದ ಹೆಜ್ಜೆ ಹಾಕಿದ.
No comments:
Post a Comment