ಕಥೆ-564
ಅಪಶಬ್ದಗಳಿಗೆ ಉತ್ತರವೆಲ್ಲಿದೆ
ಭಾರದ್ವಾಜ ಎಂಬ ಒಬ್ಬ ಬ್ರಾಹ್ಮಣ-ವಿದ್ವಾಂಸನು ಗೌತಮ ಬುದ್ಧರ ಶಿಷ್ಯನಾಗಿ ದೀಕ್ಷೆ ಪಡೆದು ಬೌದ್ಧ ಸನ್ಯಾಸಿಯಾದನು. ಇದರಿಂದ ಆ ಬ್ರಾಹ್ಮಣ ವಿದ್ವಾಂಸನ ಬಂಧು ಬಾಂಧವರಿಗೆಲ್ಲ ಬಹಳ ದುಃಖವಾಯಿತು. ಅವರೆಲ್ಲರ ಪ್ರತಿನಿಧಿಯಾಗಿ ಮಹಾಪಂಡಿತನೊಬ್ಬನನ್ನು ಗೌತಮ ಬುದ್ಧರ ಬಳಿಗೆ ಕಳುಹಿಸಿಕೊಟ್ಟರು. ಆ ಮಹಾಪಂಡಿತನು ಗೌತಮ ಬುದ್ಧರ ಬಳಿಗೆ ಬಂದು ಸಿಕ್ಕಾಪಟ್ಟೆ ಬೈಯುತ್ತಾ, ಅಪಶಬ್ದಗಳನ್ನು ಪ್ರಯೋಗಿಸತೊಡಗಿದನು. ಗೌತಮ ಬುದ್ಧರು ಮೌನವಾಗಿದ್ದು, ಶಾಂತಿಯಿಂದ ಸಹನಶೀಲರಾಗಿ ಕುಳಿತಿದ್ದರು; ಉತ್ತರಿಸಲೇ ಇಲ್ಲ. ಬೈದು-ಬೈದು ಸುಸ್ತಾದ ಮಹಾಪಂಡಿತನೂ ಕೊನೆಗೆ ಸುಮ್ಮನಾದ.
ಆಗ ಗೌತಮ ಬುದ್ಧರು ಮಹಾಪಂಡಿತನನ್ನು ಹತ್ತಿರ ಕರೆದು ಕೇಳಿದರು- 'ತಮ್ಮಾ, ನಿನ್ನ ಮನೆಗೆ ಆಗಾಗ್ಗೆ ಅತಿಥಿಗಳು ಬರುತ್ತಾರಲ್ಲ ಅವರಿಗೆ
ಬಗೆ-ಬಗೆಯ ತಿಂಡಿ ತೀರ್ಥಗಳನ್ನು ಕೊಟ್ಟು ಉಪಚಾರ ಮಾಡುತ್ತೀಯಷ್ಟೆ ! ಆಕಸ್ಮಾತ್ ಅವುಗಳನ್ನು
ಅವರು ಸ್ವೀಕಾರ ಮಾಡಲಿಲ್ಲವೆಂದಾದರೆ ಏನು ಮಾಡುತ್ತೀಯ?' ಮಹಾಪಂಡಿತನು ಮತ್ತೆ ಸಿಟ್ಟಾಗಿ ಉತ್ತರಿಸಿದ- 'ಸ್ವೀಕಾರ ಮಾಡಲಿಲ್ಲವೆಂದಾದರೆ ಅವರಿಗೆ ತಿನ್ನುವ ಯೋಗವಿಲ್ಲವೆಂದು ಮನೆಯವರೇ ತಿನ್ನುತ್ತೇವೆ.'
ಆಗ ಗೌತಮ ಬುದ್ಧರು ಮತ್ತಷ್ಟು ತಾಳ್ಮೆಯಿಂದ ನುಡಿದರು- 'ಬಹಳಷ್ಟು ಹೊತ್ತಿನಿಂದ ಸಾಕಷ್ಟು ಅಪಶಬ್ದಗಳನ್ನು ಹೇಳಿದ ಬಳಿಕ ಬೈದು-ಬೈದು ಸುಸ್ತಾಗಿ ನೀನೇ ನಿಲ್ಲಿಸಿದೆ. ನಿನ್ನ ಕೆಟ್ಟ-ಉಪಚಾರಗಳೊಂದನ್ನು ನಾನು ಸ್ವೀಕಾರ ಮಾಡಲೇ ಇಲ್ಲ. ಇವು ಈಗ ನಿನ್ನ ಪಾಲಿಗೇ ಉಳಿದಿವೆ !'
ಮಹಾಪಂಡಿತನಿಗೆ ಜ್ಞಾನೋದಯವಾಯಿತು. ನಾಚಿಕೆಯಿಂದ ತಲೆಬಾಗಿದ. ಗೌತಮ ಬುದ್ಧರಿಗೆ ಚರಣ ಸ್ಪರ್ಶ ಮಾಡಿ, ಕ್ಷಮೆ ಯಾಚನೆ ಮಾಡಿ ತಾನೂ ಶಿಷ್ಯನಾಗಿ ಹೊರಟು ಹೋದ.
ಕ್ರೋಧದ ಆವೇಶದಲ್ಲಿ ಇತರರನ್ನು ಬೈದಾಗ ಅವರೂ ಕುಪಿತರಾಗಿ ಬೈಯತೊಡಗಿದರೆ, ಜಗಳ ಜೋರಾಗುತ್ತದೆ. ಮಾತಿನ ಜಗಳ ದೈಹಿಕ-ಜಗಳಕ್ಕೆ, ಹಿಂಸೆಗೆ ಕಾರಣವಾಗಲೂಬಹುದು. ಆದರೆ ಮಹಾತ್ಮರು ನಡೆವ ದಾರಿಯು ವಿಭಿನ್ನವಾಗಿರುತ್ತದೆ.
ಅವರು ಕ್ರೋಧವೆಂಬ ಬೆಂಕಿಯನ್ನು ತಾಳ್ಮೆಯಿಂದ, ಮೌನವೆಂಬ ತಣ್ಣೀರಿನಿಂದ ಉಪಶಮನಗೊಳಿಸುವ ಕಲೆಯಲ್ಲಿ ನಿಷ್ಣಾತರಾಗಿರುತ್ತಾರೆ. ದಯೆ, ಶಾಂತಿ, ಅಹಿಂಸೆ-ಕಾರುಣ್ಯಗಳಂಥ ಉನ್ನತಾದರ್ಶಗಳಿಂದಾಗಿಯೇ ಗೌತಮ ಬುದ್ಧರು ವಿಶ್ವಪೂಜ್ಯರೆನಿಸಿದರು..
-ವೀರೇಂದ್ರ ಹೆಗ್ಗಡೆ,
No comments:
Post a Comment