ಕಥೆ'-678
*ಬಚ್ಚಿಟ್ಟ ಹಣವೆಂದೂ ಪರರ ಪಾಲಿಗೆ.*
ಈ ವ್ಯಕ್ತಿಯ ಹೆಸರೇನೋ ಕನಕರಾಜ. ಆದರೆ ಮಹಾ ಜಿಪುಣ. ಸಾಕಷ್ಟು ಅನುಕೂಲಸ್ಥನೇ, ಆದರೆ ಎಲ್ಲಾದಕ್ಕೂ ಮಹಾ ಲೆಕ್ಕಾಚಾರ, ಯಾವುದಕ್ಕೂ ಹಣವನ್ನು ಖರ್ಚು ಮಾಡುಲು ಮನಸ್ಸು ಬರುತ್ತಿರಲಿಲ್ಲ. ಊರಿನ ಜನರೆಲ್ಲರೂ ಅವನನ್ನು ಮಹಾ ಕಂಜೂಸ್ಸೆಂದೇ ಕರೆಯುತ್ತಿದ್ದರು. ತನ್ನ ಮನೆಯಲ್ಲಿ, ಹೆಂಡತಿ ಮಕ್ಕಳಿಗೂ ಹೊಟ್ಟೆತುಂಬ ಊಟ ಕೂಡಾ ಮಾಡಲು ಬಿಡುತ್ತಿರಲಿಲ್ಲ. ಇಷ್ಟೊಂದು ಯಾಕೆ ತಿನ್ನುತ್ತೀರಾ, ಕಡಿಮೆ ತಿನ್ನಿ ,ಎನ್ನುತ್ತಾ ಎಲ್ಲರೂ ಬಹುತೇಕ ಎಲ್ಲರೂ ಅರೆ ಹೊಟ್ಟೆಯಲ್ಲಿರುವಂತೆ ಮಾಡುತ್ತಿದ್ದ.
ಒಂದು ದಿನ ಕೆಲಸದ ಮೇಲೆ ಆತ ಯಾವುದೋ ,ಊರಿಗೆ ಹೊರಟ. ಊರು ಅಷ್ಟೇನೂ ದೂರ ಇಲ್ಲವೆಂದು ಅದಕ್ಕೆ ಅನಾವಶ್ಯಕ ಹಣ ಖರ್ಚು ಮಾಡುವುದೆಂದು, ನಡೆದುಕೊಂಡೇ ಹೊರಟ. ನಡೆದು ಹೋಗುತ್ತಿರುವಾಗ, ರಸ್ತೆಯ ಬದಿಯಲ್ಲಿ ಒಂದು ಅಡಿಕೆ ತೋಟ ಕಂಡಿತು. ನೇತಾಡುತ್ತಿದ್ದ ಅಡಿಕೆ ಕೊನೆಯನ್ನು ಕಂಡು ಇವನಿಗೆ ಆಸೆಯಾಯಿತು. ಈಗಂತೂ ಅಡಿಕೆಗೆ ಬಹಳ ಬೆಲೆ, ಒಂದಿಷ್ಟು ಅಡಿಕೆಯನ್ನು ಕಿತ್ತಿಟ್ಟುಕೊಂಡರೆ, ಮನೆಯಲ್ಲಿ ತಿನ್ನಬಹುದು, ಉಳಿದದ್ದನ್ನು ಮಾರಿದರೆ, ಸಾಕಷ್ಟು ಹಣವೂ ದೊರಕುತ್ತದೆ, ಎಂದುಕೊಂಡು, ಅಕ್ಕ ಪಕ್ಕದಲ್ಲಿ ಯಾರು ಇಲ್ಲದಿದ್ದನ್ನು ನೋಡಿ ,ಮನಸ್ಸುಗಟ್ಟಿ ಮಾಡಿಕೊಂಡು ಅಡಿಕೆ ಮರವನ್ನು ಹತ್ತ ತೊಡಗಿದ. ಇವನಿಗೆ ಎಂದೂ ಮರಹತ್ತಿಯೇ, ಗೊತ್ತಿಲ್ಲ, ಅಂತೂ ಹೇಗೂ ಧೈರ್ಯ ಮಾಡಿ ಮರ ಹತ್ತೇಬಿಟ್ಟ.
ಉಟ್ಟಿದ್ದ ಲುಂಗಿಯನ್ನು ಬಿಚ್ಚಿ, ಅದರಲ್ಲಿ ಸಾಕಷ್ಟು ಅಡಿಕೆಯನ್ನು ಕಿತ್ತು , ಗಂಟುಕಟ್ಟಿಕೊಂಡ. ನಂತರ ಕೆಳಗೆ ಬಗ್ಗಿ ನೋಡಿದಾಗ ಅವನ ಎದೆ ಧಸಕ್ಕೆಂದಿತು. ಹೆದರಿಕೆಯಿಂದ ತಲೆ ತಿರುಗಲು ಶುರುವಾಯಿತು, ತಾನಿನ್ನು ಸತ್ತೇ ಹೋಗುತ್ತೇನೆ ಎಂಬ ಭಯಕಾಡಿತು. ತಕ್ಷಣ ತನ್ನ ಕುಲದೇವರಾದ ಆಂಜನೇಯನನ್ನು ಸ್ಮರಿಸುತ್ತಾ, ಅಪ್ಪಾ, ಹನುಮಂತ ಸ್ವಾಮಿ, ನನ್ನನ್ನು ಕಾಪಾಡಪ್ಪಾ, ನಾನು ಏನೂ ತೊಂದರೆ ಇಲ್ಲದೇ, ಮರದಿಂದ ಇಳಿದರೆ, ನಿನಗೆ ಬೆಣ್ಣೆ ಅಲಂಕಾರ ಮಾಡಿಸಿ, ಸಾವಿರ ಜನರಿಗೆ ಊಟ ಹಾಕಿಸುತ್ತೇನೆ, ಎಂದು ಬೇಡಿಕೊಂಡ. ಆಗ ಅವನಿಗೆ ಸ್ವಲ್ಪ ಧೈರ್ಯ ಬಂದಂತಾಯಿತು. ನಿಧಾನವಾಗಿ ಮರದಿಂದ ಅರ್ಧ ಮಟ್ಟಕ್ಕೆ ಇಳಿದ, ಆ ಕ್ಷಣ ಅವನಿಗೆ ಅನ್ನಿಸಿತು, ತಾನು ಬಹಳ ಬಾವುಕನಾಗಿ ಸಾವಿರ ಜನಕ್ಕೆ ಊಟ ಹಾಕಿಸುತ್ತೇನೆ ಎನ್ನ ಬಾರದಿತ್ತು, ಐನೂರು ಜನಕ್ಕೆ ಎಂದು ಹೇಳಿಕೊಂಡಿದ್ದರೆ ಸಾಕಿತ್ತು ಎಂದೆನಿಸಿತು. ಇನ್ನೂ ಸ್ವಲ್ಪ ಕೆಳಕ್ಕೆ ಇಳಿದಾಗ, ಅದು ಕೂಡ ಜಾಸ್ತಿ ಆಯಿತು, ನೂರು ಜನಕ್ಕೆ ಊಟ ಹಾಕಿದ್ದರೆ ಸಾಕು ಎಂದುಕೊಂಡ, ಇನ್ನಷ್ಟು ಕೆಳಗಿಳಿದ, ನೂರು ಜನ ಬಹಳ ಜಾಸ್ತಿ ಆಯ್ತು, ಹತ್ತೇ ಜನಕ್ಕೆ ಊಟ ಹಾಕಿಸುತ್ತೇನೆ ಎಂದುಕೊಂಡ.
ಕೊನೆಗೆ ನೆಲ ಮುಟ್ಟಿದ ಮೇಲೆ, ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡುವುದಕ್ಕೆ ತುಂಬಾ ದುಡ್ಡು ಖರ್ಚಾಗುತ್ತದೆ, ಅಷ್ಟು ಬೆಣ್ಣೆಯಿಂದ ಅವನೇನು ಮಾಡುತ್ತಾನೆ? ಬೆರಳ ತುದಿಯಿಂದ, ಆಂಜನೇಯನ ಬಾಯಿಗೆ ಬೆಣ್ಣೆ ಸವರಿದರೆ ಸಾಕು, ಎಂದುಕೊಂಡ ಹತ್ತು ಜನರಿಗೇಕೆ ಊಟ ಹಾಕಿಸಬೇಕು? ಹೇಗಿದ್ದರೂ ಈಗ ನಾನು ನೆಲದ ಮೇಲಿದ್ದೇನೆ, ಇನ್ನೇನು ಬೀಳುವ ಭಯವಿಲ್ಲ ಎಂದುಕೊಂಡ.
ಹಾಗೇ ಯೋಚಿಸುತ್ತಾ, ತೆಳ್ಳಗಿರುವ ಕಿಟ್ಟಣ್ಣನನ್ನು ಕರೆದು ಅವನೊಬ್ಬನಿಗೆ ಒಂದು ಊಟ ಹಾಕಿದರೆ ಆಯಿತು ಎಂದುಕೊಂಡು, ಮನೆಗೆ ಬಂದು ತನ್ನ ಮಡದಿಗೆ ಹೇಳಿದ.
" ನಾಳೆ ನಾನು ಊರಿನಲ್ಲಿ ಇರುವುದಿಲ್ಲ, ಕಿಟ್ಟಣ್ಣ ಊಟಕ್ಕೆ ಬರುತ್ತಾನೆ, ಅಂತ ವಿಶೇಷ ಅಡಿಗೆಯೇನೂ ಮಾಡಬೇಡ, ಬರಿ ಅನ್ನ ಸಾರು, ಮಾಡಿ, ಎರಡು ತುತ್ತು ಅನ್ನ ಹಾಕಿ ಕಳಿಸು" ಎಂದು ಹೇಳಿದ.
ಮಾರನೇ ದಿನ ಕಿಟ್ಟಣ್ಣ ಊಟಕ್ಕೆ ಬಂದ. ಅವನು ನೋಡುವುದಕ್ಕೇನೊ, ಒಣಗಿದ ಕಡ್ಡಿಯಂತೆ, ಇದ್ದರೂ, ಬರೋಬ್ಬರಿ ಅನ್ನ ಸಾಂಬಾರ ಉಂಡ. ನಂತರ ಅವನ ಹೆಂಡತಿಯನ್ನು ಕಾಡಿಬೇಡಿ, ಬಲವಂತವಾಗಿ ಐದು ರೂಪಾಯಿ ದಕ್ಷಿಣೆಯನ್ನೂ ತೆಗೆದುಕೊಂಡು ಹೋದ.
ಮನೆಗೆ ಬಂದ ಕನಕರಾಜ, ಬಲವಂತವಾಗಿ ಕಿಟ್ಟಣ್ಣ ತನ್ನ ಹೆಂಡತಿಯಿಂದ ಐದು ರೂಪಾಯಿ ದಕ್ಷಿಣೆ ಪಡೆದ ವಿಷಯ ತಿಳಿದು ಕೆಂಡಮಂಡಲವಾದ. ತಕ್ಷಣವೇ ಕಿಟ್ಟಣ್ಣನ ಮನೆಗೆ ಹೊರಟ, ಇವನು ಸಿಟ್ಟಾಗಿ ಬರುವುದನ್ನು ದೂರದಿಂದಲೇ ನೋಡಿದ ಕಿಟ್ಟಣ್ಣ, ಒಳಗೆ ಬಂದು, ತನ್ನ ಹೆಂಡತಿಯ ಕಿವಿಯಲ್ಲಿ, ಏನೋ ಪಿಸುಗುಟ್ಟಿ, ಮುಸುಕೆಳೆದುಕೊಂಡು ಮಲಗಿಬಿಟ್ಟ.
ಕನಕರಾಜ ಮನೆಯೊಳಗೆ ಕಾಲಿಡುತ್ತಿದ್ದಂತೆ, ಕಿಟ್ಟಣ್ಣನ ಹೆಂಡತಿ ಜೋರಾಗಿ ಅಳುತ್ತಾ, ನಿಮ್ಮ ಮನೆಗೆ ಊಟಕ್ಕೆ ಕರೆದು, ನನ್ನ ಗಂಡನಿಗೆ ಅದ್ಯಾವ ವಿಷ ಹಾಕಿ ಬಿಟ್ಟಿರೋ ಗೊತ್ತಿಲ್ಲ. ಅವನನ್ನು ಆಸ್ಪತ್ರೆಗೆ ಸೇರಿಸಿದ್ದೆವು, ವೈದ್ಯರು ನಾವೇನು ಮಾಡಲಾಗುವುದಿಲ್ಲ ಎಂದು ಅವನನ್ನು ಮನೆಗೇ ವಾಪಸ್ಸು ಕಳಿಸಿಬಿಟ್ಟರು. ನೀವೀಗ ಸರಿಯಾದ ಸಮಯಕ್ಕೆ ಬಂದಿದ್ದೀರಿ, ಇನ್ನೇನು ಈಗ ಪೊಲೀಸರು ನಿಮ್ಮನ್ನು ಬಂಧಿಸಲು ಬರುತ್ತಾರೆ, ಎಂದಳು.
ಕನಕರಾಜನಿಗೆ ಜೀವವೇ ಹೋದ ಹಾಗಾಯ್ತು.
ಕಿಟ್ಟಣ್ಣನ ಹೆಂಡತಿಯನ್ನು ಸಮಾಧಾನಪಡಿಸುತ್ತಾ, ಆಸ್ಪತ್ರೆಯ ಖರ್ಚೆಂದು , ಆಕೆಯ ಕೈಗೆ 50ಸಾವಿರ ರೂಪಾಯಿ ಕೊಡುತ್ತಾ, ದಯವಿಟ್ಟು, ಪೊಲೀಸರಿಗೆ, ನನ್ನ ವಿಷಯ ತಿಳಿಸಬೇಡ ಎಂದು ಹೇಳಿ, ಮುಖ ಚಿಕ್ಕದು ಮಾಡಿಕೊಂಡು, ಮನೆಗೆ ಹಿಂತಿರುಗಿದ. ಛೇ, ಅಡಿಕೆಯ ಆಸೆಯಿಂದ ನಾನೆಂತಹ ಪೆದ್ದು ಕೆಲಸ ಮಾಡಿಕೊಂಡುಬಿಟ್ಟೆ ಎಂದು ನೊಂದುಕೊಂಡ.
ದುಂದು ವೆಚ್ಚ ಮಾಡುವುದು ತಪ್ಪೇ, ಆದರೆ ಹೊಟ್ಟೆ ತುಂಬಾ ತಿನ್ನುವುದನ್ನೂ ನಿಲ್ಲಿಸಿ, ಹಣವನ್ನು ಉಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಜಿಪುಣತನ ಮಾಡಿ ನಾವು ಉಳಿಸಿದ್ದೆಲ್ಲಾ , ಇನ್ಯಾವುದೋ ಕಡೆಯಿಂದ ಬೇರೆಯವರಿಗೆ ಹೋಗುತ್ತಿರುತ್ತದೆ.ಅದು ನಾವು ಹೋದ ಮೇಲೆ, ಪರರಿಗೆ ನೀಡುವ ಉಡುಗೊರೆ ಆಗಬಹುದು ಅಷ್ಟೇ.
ಅದಕ್ಕೆ ಹೇಳುವುದು, "ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ "ಎಂದು.
ಬದುಕುವುದಕ್ಕಾಗಿ ಹಣ.ಆದರೆ ಹಣಕ್ಕಾಗಿಯೇ ಬದುಕಲ್ಲಾ.
ಕೃಪೆ:ಸುವರ್ಣಾ ಮೂರ್ತಿ.
No comments:
Post a Comment