ಕಥೆ-680
Google....
ಒಮ್ಮೆ ಸಂದರ್ಶನವೊಂದರಲ್ಲಿ ಬಿಲ್ ಗೇಟ್ಸ್ ಅವರಿಗೆ ನಿಮ್ಮ ದುಃಸ್ವಪ್ನ ಯಾವುದು ಎಂದು ಕೇಳುತ್ತಾರೆ. ಸಂದರ್ಶಕ ಅಂದುಕೊಂಡಿದ್ದು ಆ್ಯಪಲ್ ಅಥವಾ ಇನ್ಯಾವುದೋ ಕಂಪನಿಯ ಹೆಸರು ಹೇಳಬಹುದೆಂದು! ಆದರೆ ಗೇಟ್ಸ್ ಹೇಳುತ್ತಾರೆ “ತನ್ನ ಮನೆಯ ಗ್ಯಾರೇಜಿನಲ್ಲಿ ಕೂತ ಹುಡುಗನೊಬ್ಬ ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯುವುದು!” ಅವರ ಭವಿಷ್ಯ ಸುಳ್ಳಾಗಲಿಲ್ಲ! ಗ್ಯಾರೇಜಿನಲ್ಲಿ ಕಂಪ್ಯೂಟರ್ ಎದುರು ಕೂತ ಹುಡುಗರಿಬ್ಬರು ಅಸಾಧ್ಯವನ್ನು ಸಾಧಿಸಿಯೇಬಿಟ್ಟರು.
ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ ಇದನ್ನು ಸಾಧ್ಯವಾಗಿಸಿದ ಆ ಪ್ರತಿಭಾವಂತರು. ಜಗತ್ತಿನ ಎಲ್ಲ ಮಾಹಿತಿ, ಆಗುಹೋಗುಗಳನ್ನು ಒಂದೆಡೆ ಕ್ರೋಢೀಕರಿಸಿ ನಮ್ಮ ದಿನನಿತ್ಯದ ಬದುಕನ್ನು ಸರಳಗೊಳಿಸಿದ ಶ್ರೇಯಸ್ಸೂ ಇವರಿಗೆ ಸಲ್ಲುತ್ತದೆ. ಜ್ಞಾನ, ಮಾಹಿತಿಯನ್ನು ಪಡೆಯುವ ವಿಧಾನವನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿದ ಕೀರ್ತಿಯೂ ಇವರದ್ದೇ. ಜಗತ್ತಿಗೆ ಉಪಕಾರ ಮಾಡಿದರೆ ಅದರ ಪಾಲು ಉಪಕಾರಿಗಳಿಗೂ ವಾಪಾಸು ಸಿಗುತ್ತದಂತೆ. ಸಮಯವಿಲ್ಲದೇ ಓಡುತ್ತಿರುವ ಜನರ ಅಂಗೈನಲ್ಲಿರುವ ಪುಟ್ಟ ಉಪಕರಣದಲ್ಲಿ ಜಗತ್ತನ್ನೇ ತೆರೆದಿಡುವ ಅದ್ಭುತ ಪರಿಕಲ್ಪನೆಯ ಜನಕರಾದ ಈ ಹುಡುಗರು ಯಶಸ್ವೀ ಉದ್ಯಮಿಗಳೂ ಆಗಿದ್ದು ಹೀಗೆ.
ಪಿಎಚ್‌ಡಿ ಮಾಡುವಾಗ ಸ್ನೇಹಿತರಾಗಿ ಹೊಸದೊಂದನ್ನು ಪ್ರಯತ್ನಿಸುವಾ ಎಂದು ಹೊರಟ ಈ ಹುಡುಗರು ವರ್ಚುವಲ್ ಮಾಹಿತಿ ಲೋಕದ ಅನಭಿಷಕ್ತ ದೊರೆಗಳಾದ ಕಥೆ ನಿಜಕ್ಕೂ ಸೋಜಿಗವೇ. ನಮಗೇನಾದರೂ ಗೊತ್ತಿಲ್ಲ ಎಂದರೆ ನಾವು ಮಾಡುವ ಕೆಲಸ ಗೂಗಲಿಸುವುದು! ಗೂಗಲ್‌ಗೂ ಮುಂಚೆ ಮಾಹಿತಿ ಹುಡುಕುವುದು ಎಂದರೆ ಅತೀ ಪ್ರಯಾಸದ ಕೆಲಸವಾಗಿತ್ತು. ಅತ್ಯಂತ ನಿಧಾನವಾಗಿ ತೆರೆದುಕೊಳ್ಳುವ ಅಂತರ್ಜಾಲದ ಪೇಜುಗಳು ರೇಜಿಗೆ ಹುಟ್ಟಿಸುತ್ತಿದ್ದವು. ಇಂದು ಒಂದು ಶಬ್ದ, ವಾಕ್ಯಕ್ಕೆ ಸಾವಿರ, ಲಕ್ಷದಷ್ಟು ಮಾಹಿತಿಯ ಮಹಾಪೂರವೇ ತೆರೆದುಕೊಳ್ಳುವುದೊಂದು ನಮಗೆಲ್ಲ ಅಚ್ಚರಿ. ಇನ್ನು ಇಂತಹ ಅಚ್ಚರಿಯ ಜನಕರಿಗೆ ನಮ್ಮ ಗೌರವ, ಪ್ರೀತಿ ಸಲ್ಲದೇ ಇರುತ್ತದೆಯೇ?
(ನನ್ನ ʼ ಬ್ರ್ಯಾಂಡ್ ಬಿಲ್ಡರ್ಸ್ʼ ಪುಸ್ತಕದಿಂದ ಆಯ್ದ ಭಾಗ)
ಗೂಗಲ್ ಜನಕರು
ಕೃಪೆ :ನೆಟ್

No comments:
Post a Comment