ಕಥೆ-720
ದುಃಖ ತಡೆದುಕೊಳ್ಳುವ ಶಕ್ತಿ ಸಿಗಲೆಂದು ನಮ್ಮ ಪ್ರಾರ್ಥನೆ
ಒಂದು ಕುಟುಂಬಕ್ಕೆ ಪ್ರವಾಸ ಎಂದರೆ ಅದೆಷ್ಟು ಸಡಗರ. ಅದರಲ್ಲೂ ಹೆಣ್ಣುಮಕ್ಕಳು ಹಾಗೂ ಮಕ್ಕಳಿಗೆ ಅದೊಂದು ಬಹುದೊಡ್ಡ ಸಂಭ್ರಮದ ವಿಷಯ. ಪತಿ ತನ್ನ ಕೆಲಸದ ನಡುವೆ ಕುಟಂಬದ ಜತೆ ಸಮಯ ಕಳೆಯಲು ರಜಾ ಪಡೆಯುತ್ತಿದ್ದಾನೆ ಎನ್ನುವುದೇ ಒಂದು ಖುಷಿ. ವಾಹನ ಬುಕ್ಕಿಂಗ್, ಎಲ್ಲೆಲ್ಲಿ ಏನೇನು ನೋಡಬೇಕು, ಏನೇನು ಶಾಪಿಂಗ್ ಮಾಡಬೇಕು ಎಂಬುದೆಲ್ಲ ಪಟ್ಟಿ ಮಾಡಿಕೊಳ್ಳುವ ಪತ್ನಿ ಸಾಕಷ್ಟು ತಯಾರಿ ನಡೆಸಿರುತ್ತಾಳೆ.
ಪ್ರವಾಸದಲ್ಲಿ ಹೊಸ ಊರು, ಸಂಸ್ಕೃತಿ, ಐತಿಹಾಸಿಕ ಸ್ಥಳಗಳನ್ನು ನೋಡಿ ವಾಪಸ್ ಬಂದಾಗ ಹೊಸ ಲವಲವಿಕೆ, ಉತ್ಸಾಹದ ನಿರೀಕ್ಷೆ ಇರುತ್ತದೆ. ಹೀಗೆ ಹತ್ತು ಹಲವು ಕನಸು ಹೊತ್ತು ಹೋದ ಪ್ರವಾಸ ಮನೆಯ ಯಜಮಾನನ್ನು ಪಾಪಿಗಳು ಸಾವಿನ ಮನೆಗೆ ದೂಡಿದರೆ ಉಳಿದ ಕುಟುಂಬಸ್ಥರ ದುಃಖ ತಡೆಯುವುದಾದರೂ ಹೇಗೆ?
ಕಣ್ಣ ಮುಂದೆಯೇ ಪತಿ-ಅಪ್ಪ ಉಗ್ರರ ಗುಂಡಿಗೆ ಬಲಿಯಾದದ್ದನ್ನು ಕಣ್ಣಾರೆ ನೋಡಿದ ಪತ್ನಿ- ಪುತ್ರ, ಪುತ್ರಿಯರ ಮನಸ್ಥಿತಿ ಹೇಗಾಗಿರಬೇಡ..
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಅಮಾಯಕ ಪುರುಷರು ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಈ ದುರಂತ ಎಲ್ಲರಿಗೂ ನೋವನ್ನು ನೀಡಿದ ಕ್ಷಣ ಮತ್ತು ದುಃಖದ ವಿಷಯ.. ಸಂತಸದ ಕ್ಷಣಗಳು ಕ್ಷಣಾರ್ಧದಲ್ಲಿ ಭಯಾನಕ ಮತ್ತು ದುಃಖದ ಕ್ಷಣಗಳಾಗಿ ಬಿಟ್ಟವು. ಆ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ಸಿಗಲೆಂದು ನಮ್ಮ ಪ್ರಾರ್ಥನೆ..
No comments:
Post a Comment