ಕಥೆ-754
ಕಲಿಸುವಿಕೆಯಲ್ಲಿ ಜಯದ ಸಂಪತ್ತು- ನಮ್ಮ ಜಯಶ್ರೀ ಮೇಡಂ
ಬೀಳ್ಕೊಡುಗೆ ಎಂಬುದು ನೇರವಾಗಿ ಹೃದಯವನ್ನು ತಟ್ಟುವಂತದ್ದು, ಮನಸ್ಸನ್ನು ಭಾರವಾಗಿಸುವ ಕಾರ್ಯಕ್ರಮ... ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಈ ಮಾತು ಬದುಕಿಗೂ ಅನ್ವಯಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಹಂತವನ್ನು ದಾಟಲೇಬೇಕು. ಅದರಲ್ಲೂ ಶಿಕ್ಷಕ ವೃತ್ತಿ ಪವಿತ್ರವಾದದ್ದು.. ಆ ವೃತ್ತಿಯಲ್ಲಿ ಸಾರ್ಥಕ ಬದುಕು ಕಂಡುಕೊಂಡ ಹೆಮ್ಮೆಯ ಶಿಕ್ಷಕಿಯ ಕಥೆ ಇದು...
ಕಂಬನಿಯಲ್ಲೂ ಸಂಭ್ರಮವಿರುತ್ತದೆ... ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆ ಇರಬೇಕು.
ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಇರಬೇಕು”ಎಂಬ ಈ ಮಾತುಗಳು ನಮ್ಮ ಹಿರೇಮ್ಯಾಗೇರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಯಶ್ರೀ ಮೇಡಂ ಅವರಿಗೆ ಅನ್ವಯಿಸುತ್ತದೆ. ಇಂದಿನ ಅವರ ಬೀಳ್ಕೊಡುವ ಸಮಾರಂಭ ದುಃಖವೆನಿಸಿದರೂ ಸುದೀರ್ಘ ಸೇವೆ ಸಾರ್ಥಕತೆಯ ಭಾವಕ್ಕೆ ಸಾಕ್ಷಿಯಾಯಿತು.
ಹೆಸರಿಗೆ ತಕ್ಕಂತೆ ಕಲಿಸುವಿಕೆಯಲ್ಲಿ ಜಯದ ಸಂಪತ್ತನ್ನು ಪಡೆದವರು, ಶಾಂತಸ್ವಭಾವ, ಕ್ರಿಯಾಶೀಲ ವ್ಯಕ್ತಿತ್ವ. ಅವರ ನಲಿ-ಕಲಿ, ವಚನವಾಚನ ಮತ್ತು ನೀತಿ ಪಾಠಗಳು ಮೃದು ಮನಸ್ಸಿನ ಮಕ್ಕಳಿಗೆ ಮುದ ನೀಡುತ್ತಿದ್ದವು.. ಪ್ರಾಮಾಣಿಕತೆ, ಸಹಬಾಳ್ವೆ, ಸಹಕಾರ, ಸದಾಚಾರ, ಸುಕೋಮಲತೆ ಇತ್ಯಾದಿ ಮೌಲ್ಯಗಳಿಂದ ಕೂಡಿದ ಅನನ್ಯ ವ್ಯಕ್ತಿತ್ವ ಇವರದು.. ಇವರ ನಿವೃತ್ತಿ ಕೇವಲ ಹಿರೇಮ್ಯಾಗೇರಿ ಶಾಲೆಗೆ ಮಾತ್ರವಲ್ಲ, ಶಿಕ್ಷಣ ಇಲಾಖೆಗೆ ನಷ್ಟ ಎನ್ನಬಹುದು...
ವೃತ್ತಿ ಯಾವುದೇ ಇರಲಿ ಅದನ್ನು ಇಷ್ಟಪಟ್ಟು ಪ್ರೀತಿಸಿ ಆನಂದಿಸಿ ಕೈಕೊಳ್ಳುವುದರಿಂದ ಆ ವೃತ್ತಿಗೆ ಮತ್ತು ವ್ಯಕ್ತಿಗೆ ಗೌರವ ತಂತಾನೇ ಬರುತ್ತದೆ.. ಆ ರೀತಿ ನಡೆದುಕೊಂಡು ಇತರರಿಗೆ ಮಾದರಿಯಾದವರು ಇವರು.
ಅವರು ಪ್ರಾಥಮಿಕ ಶಾಲೆಯಲ್ಲಿ ಇದ್ದರೂ ಸಹ ನನಗೆ ಪ್ರಭಾವಿ ವ್ಯಕ್ತಿಗಳು ಆಗಿದ್ದರು, ಅವರಲ್ಲಿರುವ ಕೆಳಗಿನ ಗುಣಗಳು ನನಗೆ ಅನುಕರಣೀಯ..
ಮಾತೃ ಹೃದಯ,ಇತರರಿಗೆ ಸಮಾಧಾನ ನೀಡುವ ಮಾತುಗಳು..ಸಮಯ ಪಾಲನೆ, ವೃತ್ತಿ ಗೌರವ,ವಚನವಾಚನ,ಕಥೆಗಳ ಮೂಲಕ ಮಕ್ಕಳು ಮಾರ್ಕ್ಸ್ ಪಡೆಯದಿದ್ದರೂ ಪರವಾಗಿಲ್ಲ, ಸಂಸ್ಕಾರ ಪಡೆಯಬೇಕೆಂಬ ಹಂಬಲ,60 ವಯಸ್ಸಾದರೂ ಸಹ ನಿರಂತರ ಕಲಿಸಬೇಕೆಂಬುದು.. ನಿಜಕ್ಕೂ ಶ್ಲಾಘನೀಯ...
ಸರ್ಕಾರಿ ನೌಕರಿಗೆ ವಯೋನಿವೃತ್ತಿ ಸಹಜ... ಅಂಥವರ ಜಾಗ ತುಂಬುವುದು ಕಷ್ಟ... ಅವರ ಮುಂದಿನ ಜೀವನ ಸುಖ-ಸಂತೋಷಗಳಿಂದ ತುಂಬಿರಲಿ ಎಂದು ಹೃದಯ ತುಂಬಿ ಹಾರೈಸುತ್ತೇನೆ..
- ಶ್ರೀ ಶಂಕರಗೌಡ ಬಸಾಪೂರ
GHS Hiremyageri

No comments:
Post a Comment