Monday, July 14, 2025

ಕಥೆ-790

ಇಬ್ರಾಹಿಂ ಪ್ರಾಮಾಣಿಕತನ


ಒಂದು ಸಲ ಸಂತ ಇಬ್ರಾಹಿಮನು ದೇಶ ಸಂಚಾರಕ್ಕೆ ಹೊರಟನು. 'ಸಂಚರಿಸುತ್ತ ಒಬ್ಬ ಧನಿಕನ ತೋಟಕ್ಕೆ ಬಂದನು. ಆ ಧನಿಕನು ಸಂತ ಇಬ್ರಾಹಿಮನ ಸಾಧಾರಣ ಉಡುಪನ್ನು ಕಂಡು ಅವನನ್ನು ಒಬ್ಬ ಸಾಮಾನ್ಯ ಮನುಷ್ಯನೆಂದು ಭಾವಿಸಿದನು. ಆ ಧನಿಕನಿಗೆ ಅವನ ತೋಟ ಕಾಯಲು ಒಬ್ಬ ಆಳು ಬೇಕಾಗಿದ್ದನು. 'ನೀನು ನನ್ನ ತೋಟದ ಕಾವಲು ಮಾಡುವೆಯಾ?' ಎಂದು ಆ ಧನಿಕನು ಇಬ್ರಾಹಿಮನನ್ನು ಕೇಳಿದನು. ಇಬ್ರಾಹಿಮನಿಗೆ ಆ ತೋಟದ ಶಾಂತ ವಾತಾವರಣ ತುಂಬ ಹಿಡಿಸಿತು. ಏಕಾಂತದಲ್ಲಿ ದೇವರ ಧ್ಯಾನ ಮಾಡಲು ಅವನಿಗೆ ಅದು ಸೂಕ್ತವಾದ ಸ್ಥಳವೆನಿಸಿತು. ಆದ್ದರಿಂದ ಧನಿಕನ ಮಾತನ್ನು ಕೂಡಲೇ ಒಪ್ಪಿಕೊಂಡನು.


ಹೀಗೆ ಬಹಳ ದಿವಸಗಳು ಕಳೆದುಹೋದವು. ಇಬ್ರಾಹಿಮನು ತುಂಬ ಮುತುವರ್ಜಿಯಿಂದ ತೋಟದ ಕಾವಲು ಮಾಡುತ್ತಿದ್ದನು.


ಒಂದು ದಿನ ಆ ಧನಿಕನು ತನ್ನ ಕೆಲವು ಮಿತ್ರರೊಂದಿಗೆ ತನ್ನ ತೋಟಕ್ಕೆ ಬಂದನು. ಮಾವಿನ ಮರದಲ್ಲಿ ಮಾವಿನ ಹಣ್ಣುಗಳಾಗಿದ್ದವು.


ಧನಿಕನು ಇಬ್ರಾಹಿಮನಿಗೆ ಕೆಲವು ಮಾವಿನ ಹಣ್ಣುಗಳನ್ನು ಕಿತ್ತು ತರುವಂತೆ ಹೇಳಿದನು. ಇಬ್ರಾಹಿಮನು ಒಂದು ಮರದಿಂದ ಕೆಲವು ಹಣ್ಣುಗಳನ್ನು ಕಿತ್ತು ತಂದನು. ಆದರೆ ಅವನು ಕಿತ್ತು ತಂದ ಹಣ್ಣುಗಳೆಲ್ಲ ಹುಳಿಯಾಗಿದ್ದವು. ಆಗ ಧನಿಕನು ಇಬ್ರಾಹಿಮನನ್ನು ಕುರಿತು 'ಹಲವು ದಿನಗಳಿಂದ ನನ್ನ ತೋಟದ ಕಾವಲು ಮಾಡುತ್ತಿರುವೆ. ಆದರೆ ಯಾವ ಮರದ ಹಣ್ಣು ಹುಳಿಯಾಗಿದೆ. ಯಾವ ಮರದ ಹಣ್ಣು ಸಿಹಿಯಾಗಿದೆ ಎಂದು ನಿನಗೆ ಗೊತ್ತಿಲ್ಲವೇ?' ಎಂದು ಕೇಳಿದನು.


ಧನಿಕನ ಮಾತನ್ನು ಕೇಳಿ ಇಬ್ರಾಹಿಮನು ನಗತೊಡಗಿದನು. ಅವನು ಏಕೆ ನಗುತ್ತಿರುವನೆಂದು ಧನಿಕನಿಗೆ ತಿಳಿಯಲಿಲ್ಲ.


'ನೀನು ಏಕೆ ನಗುತ್ತಿರುವೆ?' ಎಂದು ಧನಿಕನು ಇಬ್ರಾಹಿಮನಿಗೆ ಕೇಳಿದನು. ಆಗ ಇಬ್ರಾಹಿಮನು 'ಒಡೆಯರೇ, ನೀವು ನನ್ನನ್ನು ನೇಮಿಸಿರುವುದು ತೋಟವನ್ನು ಕಾಯುವುದಕ್ಕೆ. ಮಾವಿನ ಹಣ್ಣುಗಳನ್ನು ತಿನ್ನುವುದಕ್ಕಲ್ಲ. ನಿಮ್ಮ ಆಜ್ಞೆ ಇಲ್ಲದೆ ನಾನು ಹಣ್ಣುಗಳನ್ನು ತಿನ್ನಲು ಹೇಗೆ ಸಾಧ್ಯ? ನಾನು ಹಣ್ಣುಗಳನ್ನು ತಿಂದೇ ಇಲ್ಲ ಎಂದ ಮೇಲೆ ನನಗೆ ಯಾವ ಮರದ ಹಣ್ಣು ಹುಳಿ, ಯಾವ ಮರದ ಹಣ್ಣು ಸಿಹಿ ಎಂದು ಹೇಗೆ ಗೊತ್ತಾದಿತು?' ಎಂದು ಕೇಳಿದನು.


ಇಬ್ರಾಹಿಮನ ಪ್ರಾಮಾಣಿಕತೆಯನ್ನು ಕಂಡು ಧನಿಕನು ತಲೆದೂಗಿದನು ಮತ್ತು ತನ್ನ ನಡವಳಿಕೆಗಾಗಿ ಇಬ್ರಾಹಿಮನಲ್ಲಿ ಕ್ಷಮೆ ಯಾಚಿಸಿದನು.

ಕೃಪೆ:ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು