ಕಥೆ-789
ಕಾಯಕದಲ್ಲಿ ಶ್ರೇಷ್ಠ-ಕನಿಷ್ಠ ಎನ್ನುವ ಭೇದವಿಲ್ಲ
ಒಂದೂರಿನಲ್ಲಿ ಒಬ್ಬ ಚಮ್ಮಾರ ಇದ್ದ. ಆತ ಅಷ್ಟೇನು ಶ್ರೀಮಂತನಲ್ಲದಿದ್ದರೂ ಎರಡು ಹೊತ್ತಿನ ಊಟಕ್ಕೆ ಕೊರತೆಯೇನು ಇರಲಿಲ್ಲ. ಈತನ ಸಹಾಯಕ್ಕೆ ಹೆಂಡತಿ ಹಾಗೂ ಮಗನಿದ್ದರು. ಮೂವರೂ ಸೇರಿ ಹತ್ತಾರು ವರ್ಷಗಳಿಂದ ಚಪ್ಪಲಿ ಹೊಲಿದರೂ ಸ್ವಂತ ಮನೆ ಮಾಡಿಕೊಳ್ಳಲು ಅವರಿಂದ ಆಗಿರಲಿಲ್ಲ. ಆದರೂ ಚಮ್ಮಾರ ಇದ್ದುದರಲ್ಲೇ ಸುಖವಾಗಿದ್ದ.
ಒಮ್ಮೆ ಚಮ್ಮಾರ ಚಪ್ಪಲಿ ಹೊಲಿಯುತ್ತಾ ಕುಳಿತಿದ್ದಾಗ ಸಾಹುಕಾರನೊಬ್ಬ ಅಲ್ಲಿಗೆ ಬಂದ. ಹಣದ ಗಂಟನ್ನು ಚಮ್ಮಾರನ ಚೋಪಡಿಯಲ್ಲಿಟ್ಟು 'ನಾನು ಕೊಟ್ಟ ಹಣದಿಂದ ಸುಖವಾಗಿರು. ವೃಥಾ ಯಾಕೆ ಕಷ್ಟ ಪಡುತ್ತೀಯ' ಎಂದರು. ಆದರೆ ಚಮ್ಮಾರ, ಅವನ ಹೆಂಡತಿ ಮತ್ತು ಮಗ ಯಾರೊಬ್ಬರೂ ಸಾಹುಕಾರ ಕೊಟ್ಟ ಹಣವನ್ನು ಕಣ್ಣೆತ್ತಿಯೂ ನೋಡಲಿಲ್ಲ. ಬದಲಿಗೆ ಅವರು ತಮ್ಮ ಕಾರ್ಯದಲ್ಲಿ ನಿರತರಾದರು.
ಕೆಲ ದಿನಗಳ ನಂತರ ಸಾಹುಕಾರ ಮತ್ತೆ ಚಮ್ಮಾರನ ಬಳಿ ಬಂದ. ಏನೂ ಬದಲಾಗದ ಅವನ ದುಸ್ಥಿತಿಯನ್ನು ನೋಡಿ ಮರುಗಿದ. ನಾನು ಕೊಟ್ಟ ಹಣವನ್ನು ಏನು ಮಾಡಿದೆ ಎಂದು ಪ್ರಶ್ನಿಸಿದ. ಆಗ ಚಮ್ಮಾರ ಶಾಂತಮನಸ್ಸಿನಿಂದ 'ಸಾಹುಕಾರರೇ ಕಷ್ಟಪಟ್ಟು ದುಡಿದರೆ ಮಾತ್ರವೇ ಕೈಗೆ ಹತ್ತುವುದು ಎನ್ನುವ ಸತ್ಯ ನನಗೆ ತಿಳಿದಿದೆ. ಆ ಕಾರಣ ನೀವು ಕೊಟ್ಟ ಹಣದ ಗಂಟನ್ನು ಹಾಗೇ ಇಟ್ಟಿದ್ದೇನೆ. ನನ್ನ ದೃಷ್ಟಿಯಲ್ಲಿ ಬಡವನಿಗೆ ಮಾತ್ರ ಹಸಿವಿನ ಬೆಲೆ ಗೊತ್ತಿರುತ್ತದೆ. ನಿಜವಾದ ಸಿರಿ ಅದರಲ್ಲೇ ಇದೆ' ಎನ್ನುತ್ತಾನೆ.ಅಪ್ಪನ ಮಾತಿಗೆ ಮಗ, ಧರ್ಮಪತ್ನಿ ಧ್ವನಿಗೂಡಿಸಿದರು. ಕಾಯಕವೇ ಕೈಲಾಸ ಎಂಬ ಬಸವಣ್ಣನ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು ಎಂದರು.
ಆಗ ಸಾಹುಕಾರರು 'ಕೀಳಾದ ಚಮ್ಮಾರ ವೃತ್ತಿಯನ್ನು ಮಾಡುವ ಬದಲು ಚೆನ್ನಾಗಿ ದುಡ್ಡು ಬರುವ ಬೇರೆ ವೃತ್ತಿಯನ್ನೇಕೆ ಮಾಡಬಾರದು?' ಎಂದು ಪ್ರಶ್ನಿಸಿದರು.
ಸಾಹುಕಾರರ ಮಾತಿನಿಂದ ಚಮ್ಮಾರನಿಗೆ ಸಿಟ್ಟು ಬಂತು. 'ಸ್ವಾಮಿ ಯಾವುದೇ ವೃತ್ತಿಯೂ ನಿಕೃಷ್ಟವಲ್ಲ. ಕಾಯಕದಲ್ಲಿ ಶ್ರೇಷ್ಠ-ಕನಿಷ್ಠ ಎನ್ನುವ ಭೇದವಿಲ್ಲ. ಕಾಯಕ ಮಾಡುವವರ ಭಾವನೆ ಶ್ರೇಷ್ಠವಾಗಿರಬೇಕು ಅಷ್ಟೇ' ಎಂದ ಚಮ್ಮಾರ.
ಚಮ್ಮಾರನ ಕಾಯಕ ನಿಷ್ಠೆಯನ್ನು ಕಂಡು ಸಾಹುಕಾರ ಕ್ಷಣಕಾಲ ವಿಸ್ಮಿತನಾದ. ನಿಜವಾದ ಸುಖ ಎಲ್ಲಿದೆ ಎಂಬುದನ್ನು ತೋರಿದ ಚಮ್ಮಾರನ ಕುಟುಂಬಕ್ಕೆ ನಮಿಸಿ ಆಲ್ಲಿಂದ ಹೊರನಡೆದ..
ಕೃಪೆ:ನೆಟ್
No comments:
Post a Comment