ಕಥೆ-795
ನಮ್ಮಂತೆ ಜಗತ್ತು
ಹಿಂದಿನ ದಿವಸಗಳಲ್ಲಿ ಮನೆಯಲ್ಲಿ ಮಕ್ಕಳಿದ್ದರೆ ಚೆನ್ನ ಎನ್ನುತ್ತಿದ್ದರು. ಆದರೆ ಇಂದು ವಿಶೇಷವಾಗಿ ನಗರಗಳಲ್ಲಿ, ಮನೆಯಲ್ಲಿ ನಾಯಿ, ಬೆಕ್ಕು ಇದ್ದರೆ ಚೆನ್ನ ಎನ್ನುವ ಪರಿಸ್ಥಿತಿ. ನಾಯಿ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವುದು ನಮಗೆಲ್ಲ ತಿಳಿದೇ ಇದೆ. ಅದೇ ರೀತಿ ಜಾನ್ಸನ್ ಎನ್ನುವ ಶ್ರೀಮಂತನು ಮನೆಯಲ್ಲಿ ಒಂದು ಉತ್ತಮ ತಳಿಯ ನಾಯಿಯನ್ನು ಸಾಕಿದ್ದನು. ಆ ನಾಯಿ ಜಾನ್ಸನ್‌ಗೆ ಅಚ್ಚುಮೆಚ್ಚಿನದಾಗಿತ್ತು. ಆದ್ದರಿಂದ ಕೋಣೆಯೊಂದನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಿ ಬೇಕಾದರೂ ನಾಯಿಗೆ ಓಡಾಡುವ ಸ್ವಾತಂತ್ರ್ಯವಿತ್ತು. ಆ ಚಿಕ್ಕಕೋಣೆಯಲ್ಲಿ ತುಂಬಾ ದೊಡ್ಡ ದೊಡ್ಡ ಗಾಜಿನ ಕನ್ನಡಿಯನ್ನು ಅಳವಡಿಸಲಾಗಿತ್ತು. ಒಮ್ಮೆ ಜಾನ್ಸನ್ ಕಾರ್ಯಕ್ರಮಕ್ಕೆಂದು ಹೊರಗೆ ಹೋದನು. ಸ್ವಲ್ಪ ಸಮಯದಲ್ಲೇ ಅವನಿಗೆ ಆ ಚಿಕ್ಕ ಕೋಣೆಯ ಬೀಗ ಹಾಕಿರುವುದೋ, ಇಲ್ಲವೋ ಎಂಬ ಸಂಶಯ ಉಂಟಾಯಿತು. ಕೂಡಲೇ ಜಾನ್ಸನ್ ಮನೆಗೆ ಧಾವಿಸಿದನು. ಆದರೆ ಅಷ್ಟರೊಳಗೆ ನಾಯಿಯು ಆ ಕೋಣೆಯನ್ನು ಪ್ರವೇಶಿಸಿ, ನೆಚ್ಚಿನ ನಾಯಿ ರಕ್ತಕಾರಿ ಸತ್ತುಹೋಗಿತ್ತು. ಕಾರಣ ಆ ನಾಯಿ ಕೋಣೆಗೆ ಪ್ರವೇಶಿಸಿದಾಗ, ತನ್ನ ಪ್ರತಿಬಿಂಬವನ್ನು ಕಂಡಿತ್ತು. ಬೇರೆಯ ನಾಯಿ ಎಂದು ಭಾವಿಸಿ ಬೊಗಳಿ, ಅದರ ಮೇಲೆ ಹಾರಲು ಪ್ರಯತ್ನಿಸಿತ್ತು. ಅದರಿಂದ ಗಾಜು ಒಡೆದು ನಾಯಿಯ ಮುಖ ಹಾಗೂ ಇತರ ಭಾಗಗಳಿಗೆ ಚುಚ್ಚಿ, ರಕ್ತಕಾರಿ ನಾಯಿಯು ಸತ್ತುಹೋಗಿತ್ತು. ನಾಯಿಯು ಕೋಪದಿಂದ ಬೊಗಳಿತ್ತು. ಇನ್ನೊಂದು ನಾಯಿ ಎಂಬ ಭ್ರಮೆಯಿಂದ ಅದರ ಮೇಲೆ ಹಾರಿ ಅದನು ಬೀಳಿಸುವ ಪ್ರಯತ್ನ ಮಾಡಿತು..
ಆದ್ದರಿಂದ ಈ ಅನಾಹುತವಾಯಿತು. ಬದಲಾಗಿ ನಾಯಿ ಮುಗುಳುನಗೆಯಿಂದ ನಕ್ಕಿದ್ದರೆ, ಪ್ರೀತಿಯಿಂದ ಗಾಜಿನಲ್ಲಿ ಕಂಡ ಆ ನಾಯಿಯು, ನನ್ನಂತೆ ಅಲ್ಲವೇ ಎಂದು ಭಾವಿಸಿದ್ದರೆ, ಗಾಜು ಒಡೆಯುತ್ತಿರಲಿಲ್ಲ, ಅದು ಸಾಯುತ್ತಿರಲಿಲ್ಲ. ಅದೇ ರೀತಿ ನಮ್ಮ ಸ್ವಭಾವ, ವರ್ತನೆ, ಗುಣ, ವ್ಯಕ್ತಿತ್ವಕ್ಕೆ ತಕ್ಕಂತೆ ನಮಗೆ ಇತರರಿಂದ ಪ್ರತಿಕ್ರಿಯೆ ಬರುತ್ತದೆ. ಆದ್ದರಿಂದ ನಮ್ಮಂತೆ ಜಗತ್ತು.
ಸ್ವಾಮಿ ಶಾಂತಿವ್ರತಾನಂದ, ಅಧ್ಯಕ್ಷರು ರಾಮಕೃಷ್ಣ
ವೇದಾಂತ ಕೇಂದ್ರ, ಐರ್ಲೆಂಡ್
No comments:
Post a Comment