Wednesday, August 13, 2025

 ಕಥೆ-825

ಬೇವಿನ ಮರ ನುಡಿದ ಸಾಕ್ಷಿ

ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಸಿದ್ದಪ್ಪ ಹೊಸಮನಿ ಎಂಬ ಒಬ್ಬ ವಕೀಲರಿದ್ದರು. ಅನ್ಯಾಯದ ವಿರುದ್ದ ಸಿಡಿದೇಳುತ್ತಿದ್ದ ಅವರು ಬಡವರ ಬಗೆಗೆ, ಶೋಷಣೆಗೆ ಒಳಗಾದವರ ಬಗೆಗೆ, ಅನುಕಂಪ ಮೃದು ಭಾವನೆಗಳನ್ನು ಹೊಂದಿದ್ದರು. ತುಳಿತಕ್ಕೆ ಒಳಗಾದವರ ನೆರವಿಗೆ ಅವರು ಧಾವಿಸುತ್ತಿದ್ದರು.

ಒಂದು ಸಲ ಹೀಗಾಯಿತು. ಒಬ್ಬ ಬಡ ರೈತನು ಮಾರವಾಡಿಯೊಬ್ಬನ ಬಳಿ ಸಾಲ ತಂದಿದ್ದನು. ತಾನು ಪಡೆದ ಸಾಲವನ್ನು ಅವನು ಆ ಮಾರವಾಡಿಗೆ ಕೊಟ್ಟು ಮುಟ್ಟಿಸಿದ್ದನು. ಆದರೆ ಆ ಮಾರವಾಡಿ ಸಾಲ ಮರುಪಾವತಿ ಆದ ಬಗೆಗೆ, ರೈತನಿಗೆ ದಾಖಲೆ ಏನನ್ನೂ ನೀಡಿರಲಿಲ್ಲ. ತನ್ನ ಲೆಕ್ಕದ ಪುಸ್ತಕದಲ್ಲಿ ಸಾಲದ ಬಾಕಿ ಹಾಗೆಯೇ ಇದೆಯೆಂದು ತೋರಿಸಿ ಸಾಲ ವಸೂಲಿಯ ಬಗೆಗೆ, ಆ ರೈತನ ವಿರುದ್ಧ ದಾವಾ ಹೂಡಿದ್ದನು.  

ಆ ಬಡ ರೈತ, ವಕೀಲರ ಸಂಘಕ್ಕೆ ಬಂದು ತನ್ನ ಪರವಾಗಿ ವಕಾಲತ್ತು ವಹಿಸಬೇಕೆಂದು ಅನೇಕರನ್ನು ಅಂಗಲಾಚಿ ಬೇಡಿಕೊಂಡ. “ನೀನು ಸಾಲವನ್ನು ಹಿಂತಿರುಗಿಸಿದ ಬಗೆಗೆ ನಿನ್ನ ಬಳಿ ಸಾಕ್ಷಿ ಪುರಾವೆಗಳು ಏನಾದರೂ ಇವೆಯೇ?” ಎಂದು ಅವರೆಲ್ಲರೂ ಅವನನ್ನು ಕೇಳಿದ್ದರು. “ನಾನು ದೇವರ ಪ್ರಮಾಣ ಮಾಡಿ ಹೇಳುತ್ತೇನೆ. ನಮ್ಮ ಹೊಲದ ಸಮೀಪದಲ್ಲಿ ಇರುವ ಬೇವಿನ ಮರದ ಕೆಳಗೆ, ಎಲ್ಲ ಸಾಲ ಚುಕ್ತಾ ಮಾಡಿದ್ದೇನೆ” ಎಂದು ಹೇಳಿದಾಗ, ಅವರೆಲ್ಲರೂ ನಕ್ಕು, “ಹುಚ್ಚಪ್ಪ, ಕೋರ್ಟು, ನಿನ್ನ ದೇವರನ್ನೂ ಕೇಳುವುದಿಲ್ಲ, ನಿನ್ನ ಬೇವಿನ ಮರವನ್ನೂ ಕೇಳುವುದಿಲ್ಲ, ಅದು ಕಾಗದ ಪತ್ರ, ಸಾಕ್ಷಿ, ಪುರಾವೆಗಳನ್ನು ಮಾತ್ರ ನೋಡುತ್ತದೆ” ಎಂದು ಅವನಿಗೆ ಹೇಳಿದ್ದರು.

ಆ ಬಡ ರೈತನಿಗೆ ಅವರ ಮಾತನ್ನು ಕೇಳಿ ಆಕಾಶವೇ ಹರಿದು ತಲೆಯ ಮೇಲೆ ಬಿದ್ದಂತಾಯಿತು. ರಕ್ಷಕರು ಯಾರೂ ಇಲ್ಲವೆನ್ನುವ ಅಸಹಾಯ ಸ್ಥಿತಿಯಲ್ಲಿ ಅವನು ತೊಳಲಾಡುತ್ತಿದ್ದ. ತನ್ನ ವಯಸ್ಸಿಗಿಂತಲೂ ಅವನಿಗೆ ಒಮ್ಮೆಲೇ ಹೆಚ್ಚು ವರ್ಷಗಳು ಆದಂತಾಗಿದ್ದವು.  

ಅಷ್ಟರಲ್ಲಿ ಹೊಸಮನಿಯವರು ವಕೀಲರ ಸಂಘಕ್ಕೆ ಬಂದರು. ಅವರನ್ನು ಕೇಳಿದರೆ ತನಗೆ ರಕ್ಷಣೆ ಸಿಕ್ಕಬಹುದೆಂದು ಅವನು ಭಾವಿಸಿದ. ಮುಳುಗುವ ಮನುಷ್ಯನು ಬದುಕಬೇಕೆನ್ನುವ ಆಸೆಯಿಂದ ಒಂದು ಹುಲ್ಲು ಕಡ್ಡಿಗಾದರೂ ತೆಕ್ಕೆ ಬೀಳಬೇಕೆನ್ನುತ್ತಾನೆ. ಅವನು ಹೊಸಮನಿಯವರೆದುರು ತನ್ನ ಅಳಲನ್ನು ತೋಡಿಕೊಂಡು, “ಯಪ್ಪಾ, ನೀವು ನನ್ನನ್ನು ಉಳಿಸಿರಿ” ಎಂದು ಬೇಡಿಕೊಂಡ. ಅವರು ವಕೀಲ ಪತ್ರದ ಮೇಲೆ ಅವನ ಸಹಿ ತೆಗೆದುಕೊಂಡರು.

“ಅಲ್ಲ ಸಾರ್, ಅವನ ಬಾಯಿಮಾತಿನ ವಿನಾ ಅವನ ಬಳಿ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ನೀವು ಅವನ ವಕೀಲಿ ಹೇಗೆ ನಡೆಸುತ್ತೀರಿ?” ಎಂದು ವಕೀಲರೊಬ್ಬರು ಹೊಸಮನಿಯವರನ್ನು ಕೇಳಿದರು. “ಅವನು ಬೇವಿನ ಮರದ ಕೆಳಗೆ ಸಾಲ ಹಿಂತಿರುಗಿ ಕೊಟ್ಟಿರುವುದಾಗಿ ಹೇಳುತ್ತಾನೆ. ಅದನ್ನು ಕಂಡವರು ಯಾರಿದ್ದಾರೆ? ಯಾರು ಸಾಕ್ಷಿ ಹೇಳುತ್ತಾರೆ?” ಎಂದು ಅವರು ಅವರನ್ನು ಪ್ರಶಿಸಿದರು.

“ಬೇವಿನ ಮರದಿಂದಲೇ ಸಾಕ್ಷಿ ಹೇಳಿಸಿದರಾಯಿತು” ಎಂದು ಹೊಸಮನಿಯವರು ಅವರಿಗೆ ಹೇಳಿದರು. ಅದನ್ನು ಕೇಳಿದ ವಕೀಲರೆಲ್ಲರೂ, ಅವರು ಇಂಥ ಹಾಸ್ಯಾಸ್ಪದ ಕೇಸನ್ನು ಹಿಡಿದು ತಮ್ಮ ಹೆಸರು ಕೆಡಿಸಿಕೊಳ್ಳುವರೆಂದು, ತಮ್ಮ ಮನಸ್ಸಿನಲ್ಲಿಯೇ ಮಿಡುಕಿದರು.

ನ್ಯಾಯಾಧೀಶರು ಸ್ಥಳ ಪರಿಶೀಲನೆಯ ದಿನವನ್ನು ಗೊತ್ತು ಮಾಡಿದರು. ಎತ್ತಿನ ಗಾಡಿ ಕಟ್ಟಿಸಿಕೊಂಡು ಎಲ್ಲರೂ ಆ ಬೇವಿನ ಮರದ ಕಡೆಗೆ ಹೊರಟರು. ನ್ಯಾಯಾಧೀಶರೊಂದಿಗೆ, ಇಬ್ಬರೂ ಪಕ್ಷಗಾರರೂ, ಅವರ ವಕೀಲರೂ ಇದ್ದರು.

ಅವರು, ಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಒಂದು ಬೇವಿನ ಮರವನ್ನು ಸಮೀಪಿಸಿದ್ದರು. “ಆ ರೈತ ಹೇಳಿದ ಬೇವಿನ ಮರ ಇದೇ ಅಲ್ಲವೇನು?” ಎಂದು ಹೊಸಮನಿಯವರು ಆ ಮಾರವಾಡಿಯನ್ನು ಕೇಳಿದರು. ಅವರ ಪ್ರಶ್ನೆಗೆ ಆ ಮಾರವಾಡಿಯು “ಇದಲ್ಲ, ಆ ಮರ ಇನ್ನೂ ಮುಂದೆ ಇದೆ” ಎಂದು ಹೇಳಿದ.

ಆಗ ಹೊಸಮನಿಯವರು ನ್ಯಾಯಾಧೀಶರಿಗೆ “ಸ್ವಾಮಿ, ನಿಮ್ಮೆದುರು ನನ್ನ ಪಕ್ಷಕಾರನ ಪರವಾಗಿ ನಿವೇದಿಸುವುದು ಇನ್ನೇನೂ ಇಲ್ಲ” ಎಂದು ಹೇಳಿದರು. ಬೇವಿನ ಮರದಿಂದ ಅವರು ಸಾಕ್ಷಿ ಹೇಳಿಸಿದರೆನ್ನುವ ಮಾತು ಜನರ ಬಾಯಲ್ಲಿ ಇಂದೂ ಉಳಿದುಕೊಂಡಿದೆ.

ಅನಾಥರಿಗೆ ದೇವರೇ ರಕ್ಷಕನೆಂದು ಹೇಳುತ್ತಾರೆ. ಸಂಕಟದಲ್ಲಿ ಸಿಲುಕಿಕೊಂಡವರನ್ನು ಸಂಕಟದಿಂದ ಪಾರು ಮಾಡಲು ದೇವರಂಥ ಒಬ್ಬರು ಸಮಾಜದಲ್ಲಿ ಯಾರಾದರೂ ಇದ್ದೇ ಇರುತ್ತಾರೆ.


ಡಾ. ಪಾಟೀಲ ಪುಟ್ಟಪ್ಪನವರು

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು