ಕಥೆ-826 ಅರ್ಥಪೂರ್ಣವಾದ ಬದುಕು
ಒಮ್ಮೆ ಸಂತರೊಬ್ಬರು ನದೀತೀರಕ್ಕೆ ತೆರಳಿ ಜರಡಿಯಿಂದ ನೀರನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದರು. ಅವರು ಹಲವಾರು ಬಾರಿ ಈ ರೀತಿ ಯತ್ನಿಸಿದರೂ, ಕೆಲವೇ ಹನಿಗಳಷ್ಟು ನೀರು ಮಾತ್ರವೇ ಉಳಿದು, ಮಿಕ್ಕ ನೀರೆಲ್ಲ ಜರಡಿಯಿಂದ ಹಾಗೇ ಸೋರಿಹೋಗುತ್ತಿತ್ತು. ಸಂತರ ಜತೆಗಿದ್ದ ಶಿಷ್ಯರಲ್ಲೊಬ್ಬ ‘ಇದೇನು ಗುರುಗಳೇ, ಜರಡಿಯಿಂದ ನೀರನ್ನು ಸಂಗ್ರಹಿಸಲು ಸಾಧ್ಯವೇ? ನೀವೇಕೆ ವೃಥಾ ಶ್ರಮಪಡುತ್ತಿದ್ದೀರೋ ನನಗರ್ಥವಾಗುತ್ತಿಲ್ಲ’ ಎಂದ.
ಅದಕ್ಕೆ ಸಂತರು, ‘ನನ್ನ ಈ ವರ್ತನೆಯ ಹಿಂದಿರುವ ಉದ್ದೇಶವೇ ಬೇರೆ. ಇದರ ಮೂಲಕ ನಿನಗೊಂದು ತತ್ತ್ವವನ್ನು ತಿಳಿಸಲಿಕ್ಕಿದೆ. ‘ತತ್ತ್ವಶಾಸ್ತ್ರವನ್ನು ಎಷ್ಟೇ ಓದಿದರೂ ಅರ್ಥವೇ ಆಗುತ್ತಿಲ್ಲ’ ಎಂದು ನೀನು ಯಾವಾಗಲೂ ಹೇಳುತ್ತಿದ್ದೆ, ಆಗ ನಾನು, ‘ಅದನ್ನು ಮತ್ತೆಮತ್ತೆ ಓದಿ ತಿಳಿದುಕೋ’ ಎನ್ನುತ್ತಿದ್ದೆ. ಈಗ ಗಮನವಿಟ್ಟು ಕೇಳು-‘ನಾನು ಜರಡಿಯನ್ನು ಹೀಗೆ ನದಿಯಲ್ಲಿ ಅದ್ದಿ ತೆಗೆಯುತ್ತಿರುವುದು ನೀರನ್ನು ಸಂಗ್ರಹಿಸುವುದಕ್ಕಲ್ಲ; ಬದಲಿಗೆ, ಅದರಲ್ಲಿ ಕಟ್ಟಿಕೊಂಡಿರುವ ಕೊಳೆ, ಜಿಡ್ಡನ್ನು ತೊಡೆಯುವುದಕ್ಕಾಗಿ. ಜರಡಿಯನ್ನು ಹಲವಾರು ಬಾರಿ ನೀರಿನಲ್ಲಿ ಮುಳುಗಿಸಿ ಮೇಲಕ್ಕೆತ್ತಿದರೆ ಕಲ್ಮಷ ಕಳೆದು ಅದು ಶುದ್ಧವಾಗುತ್ತದೆ. ಇದೇ ರೀತಿಯಲ್ಲಿ, ವಿಭಿನ್ನ ಪ್ರಲೋಭನೆಗಳಿಗೆ, ದುರಾಲೋಚನೆಗಳಿಗೆ ಸಿಲುಕಿ ನಮ್ಮ ಈ ಜಡ ಮನಸ್ಸು ಮಲಿನವಾಗಿರುತ್ತದೆ. ಶ್ರವಣ, ಮನನ, ಮತ್ತು ಜ್ಞಾನಪೂರಿತ ಗ್ರಂಥಗಳ ನಿರಂತರ ಅಧ್ಯಯನದ ಮೂಲಕ ಅದು ಪರಿಶುದ್ಧವಾಗುತ್ತದೆ’ ಎಂದು ಉಪದೇಶಿಸಿದರು.
ಇದು ಶಾಲಾ ವಿದ್ಯಾರ್ಥಿಗಳಿಗೆ, ಮತ್ತು ಕಲಿಯಬೇಕೆನ್ನುವವರಿಗೆ ಅನ್ವಯವಾಗುತ್ತದೆ... ಸತತ ಅಭ್ಯಾಸ ಮತ್ತು ಜ್ಞಾನಾರ್ಜನೆಯಿಂದ ಬದುಕು ಸಾರ್ಥಕವಾಗುತ್ತದೆಯೇ ಹೊರತು ಸಂಪತ್ತಿನ ಸಂಗ್ರಹದಿಂದಲ್ಲ. ಒಂದೊಮ್ಮೆ ಪರಿಶ್ರಮದ ಫಲವಾಗಿಯೋ, ಹೆಚ್ಚಿನ ಸಂಪತ್ತು ನಮ್ಮ ವಶಕ್ಕೆ ಬಂದರೂ, ಅಗತ್ಯವಿದ್ದಷ್ಟನ್ನು ಮಾತ್ರವೇ ಬಳಸಿ, ಮಿಕ್ಕದ್ದನ್ನು ಅಗತ್ಯವಿರುವವರಿಗೆ, ಅಶಕ್ತರಿಗೆ, ಬಡವರಿಗೆ ನೆರವಾಗಲೆಂದು ಬಳಸುವುದು ಆದರ್ಶಪ್ರಾಯವೆನಿಸುತ್ತದೆ. ಸಂಪತ್ತನ್ನು ಸ್ವತಃ ಅನುಭವಿಸುವುದರಲ್ಲಿ ಸಿಗುವ ಸುಖಕ್ಕಿಂತ, ಅದನ್ನು ನೀಡುವುದರಲ್ಲಿನ ಸುಖ ಹೆಚ್ಚು... ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸುವುದರಿಂದ ಅದು ಹೆಚ್ಚಳವಾಗುತ್ತದೆ... ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ತೆರೆದಿಟ್ಟ ಜ್ಞಾನ ಅಳೆಯುತ್ತದೆ...
ಕೃಪೆ:ಎಂ.ಕೆ.ಮಂಜುನಾಥ.
No comments:
Post a Comment