Saturday, August 16, 2025

 ಕಥೆ-828 ಪ್ರಾಣವನ್ನಾದರೂ ಬಿಟ್ಟೇನು! ತಾಯಿನಾಡನ್ನು ಬಿಡೆನು!

‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ (ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಹೆಚ್ಚಿನದ್ದು ಎಂಬರ್ಥ) ಎಂಬ ಮಾತುಗಳನ್ನು ಭಾರತೀಯರಾದ ನಾವು ಹೇಳುವುದು ಹೆಚ್ಚೇನಲ್ಲ. ಆದರೆ ಅಂತಹದ್ದೇ ಮಾತುಗಳನ್ನು ಸಾವಿರಾರು ವರ್ಷಗಳ ಹಿಂದೆ ಅಥೆನ್ಸಿನಲ್ಲಿ ಸಾಕ್ರೆಟೀಸ್ ತಮ್ಮ ತಾಯಿನಾಡಿನ ಬಗ್ಗೆ ಹೇಳಿದ್ದಾರೆ! ಕುತೂಹಲಕಾರಿಯಾದ ಆ ಪ್ರಸಂಗ ಹೀಗಿದೆ.

ಅತ್ಯಂತ ಶ್ರೇಷ್ಠ ತತ್ವಜ್ಞಾನಿಯಾಗಿದ್ದ ಸಾಕ್ರೆಟೀಸರೊಂದಿಗೆ ಯಾವಾಗಲೂ ಯುವಜನರಿರುತ್ತಿದ್ದರು. ಸಾಕ್ರೆಟೀಸರ ಸತ್ವಭರಿತ ತತ್ವಭರಿತ ಮಾತುಗಳನ್ನು ಆಲಿಸುತ್ತಿದ್ದರು. ಪಾಲಿಸುತ್ತಿದ್ದರು. ಆದರೆ ಸಾಕ್ರೆಟೀಸರ ಕೆಲವು ಮಾತುಗಳು ಹಳೆಯ ತಲೆಮಾರಿನ ಜನಗಳಿಗೆ ಹಿಡಿಸುತ್ತಿರಲಿಲ್ಲ. ಸಾಕ್ರೆಟೀಸ್ ಯುವಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆಂದು ದೂಷಿಸುತ್ತಿದ್ದರು. ಇದೇ ದೋಷಾರೋಪಣೆಯ ಮೇಲೆ ಸಾಕ್ರೆಟೀಸರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತು. ಸಾಕ್ರೆಟೀಸರ ಬಗ್ಗೆ ಬಹಳ ಗೌರವವಿದ್ದ ನ್ಯಾಯಾಧೀಶರು ಸಾಕ್ರೆಟೀಸರನ್ನುದ್ದೇಶಿಸಿ ನಿಮ್ಮ ಪಾಂಡಿತ್ಯದ ಸದುದ್ದೇಶದ ಬಗ್ಗೆ ನಮಗೆ ಗೌರವವಿದೆ. ಆದರೆ ನೀವು ಯುವಜನಾಂಗವನ್ನು ತಪ್ಪು ದಾರಿಗೆ ಎಳೆದೊಯ್ಯುತ್ತಿದ್ದೀರೆಂಬ ಆರೋಪ ಸಾಬೀತಾಗಿದೆ. ಈಗಿರುವ ಕಾನೂನುಗಳ ಪ್ರಕಾರ ನಿಮಗೆ ಸಾವಿನ ಶಿಕ್ಷೆ ವಿಧಿಸಬೇಕಾಗುತ್ತದೆ. ಈಗ ನಿಮಗೊಂದು ಅವಕಾಶವನ್ನು ನಾವು ಕೊಡುತ್ತೇವೆ. ನೀವು ಅಥೆನ್ಸ್ ನಗರವನ್ನು ಬಿಟ್ಟು ದೂರ ಹೊರಟುಹೋಗುವುದಾದರೆ ನಿಮಗೆ ಸಾವಿನ ಶಿಕ್ಷೆಯನ್ನು ವಿಧಿಸುವುದಿಲ್ಲ. ಅಂದರೆ ನೀವಿನ್ನು ಮುಂದೆ ಅಥೆನ್ಸ್ ನಗರದಲ್ಲಿರುವಂತಿಲ್ಲ. ಇದು ನಿಮಗೊಪ್ಪಿಗೆಯೇ? ಎಂದು ಕೇಳಿದರು. ಸಾಕ್ರೆಟೀಸ್ ಒಂದು ಕ್ಷಣವೂ ಯೋಚಿಸಲಿಲ್ಲ. ಖಡಾಖಂಡಿತವಾದ ದನಿಯಲ್ಲಿ ನಗರ ನನ್ನ ತಾಯಿನಾಡು. ನನಗದು ಸ್ವರ್ಗಕ್ಕಿಂತ ಹೆಚ್ಚು. ನಾನು ಪ್ರಾಣವನ್ನಾದರೂ ಬಿಟ್ಟೇನು. ಅಥೆನ್ಸನ್ನು ಬಿಡುವುದಿಲ್ಲ. ನನಗೀಗಾಗಲೇ ವೃದ್ಧಾಪ್ಯ ಬಂದಿದೆ. ನನ್ನ ಜೀವನದ ಕೊನೆಗಾಲದಲ್ಲಿ ತಾಯಿನಾಡನ್ನು ಬಿಟ್ಟು ಬೇರಾವುದೋ ನಾಡಿಗೆ ಹೋಗಿ ಅಲ್ಲಿ ಬದುಕಲು ಮನಸ್ಸೊಪ್ಪುವುದಿಲ್ಲ. ನಾನು ಸತ್ತರೂ ಚಿಂತೆಯಿಲ್ಲ. ಇಲ್ಲಿಯೇ ಬದುಕುತ್ತೇನೆ ಎಂದರು. ಧರ್ಮಸಂಕಟಕ್ಕೊಳಗಾದ ನ್ಯಾಯಾಧೀಶರು, ನಿಮಗೆ ಮತ್ತೊಂದು ಸಲಹೆಯನ್ನು ಕೊಡುತ್ತೇನೆ. ನೀವು ಇಲ್ಲಿಯೇ ಇರಿ. ಆದರೆ ಯುವಜನರಿಗೆ ನಿಮ್ಮ ನಂಬಿಕೆಯ ಮಾತುಗಳನ್ನು ಹೇಳುವುದನ್ನು ನಿಲ್ಲಿಸಿಬಿಡಿ. ಮೌನಕ್ಕೆ ನಿಮಗೆ ವಿಧಿಸುವ ಸಾವಿನ ಶಿಕ್ಷೆಯಿಂದ ಪಾರು ಮಾಡುತ್ತೇವೆ ಎಂದರು.


ಆದರೆ ಸಾಕ್ರೆಟೀಸ್ ಮತ್ತೊಮ್ಮೆ ದೃಢವಾದ ದನಿಯಲ್ಲಿ ನಾನು ನಂಬುವ ತತ್ವದ ಮಾತುಗಳನ್ನು ಆಡದೇ ಇರಲು ನನಗೆ ಸಾಧ್ಯವಿಲ್ಲ. ಪ್ರಾಣಭಯದಿಂದ ನನ್ನ ನಂಬಿಕೆಯನ್ನು ಅದುಮಿಟ್ಟು ಹೇಡಿಯಂತೆ ಬದುಕಲು ನಾನು ಸಿದ್ಧನಿಲ್ಲ. ನನ್ನ ನಂಬಿಕೆಯ ಮಾತುಗಳನ್ನು ಕೇಳಲು ಬಂದವರಿಗೆ ಹೇಳಿಯೇ ಹೇಳುತ್ತೇನೆ. ಅದನ್ನು ಕೇಳಬೇಕೆಂದು ನಾನು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಕೇಳಲು ಬರುವವರನ್ನು ನಾನು ತಡೆಯುವುದೂ ಇಲ್ಲ. ನಾನು ನನ್ನ ನಂಬಿಕೆಗಳನ್ನು ವ್ಯಕ್ತಪಡಿಸಿಯೇ ತೀರುತ್ತೇನೆ. ವಯಸ್ಸಾಗಿದೆ. ನಾನು ಇನ್ನೆಷ್ಟು ದಿನ ಬದುಕಬಹುದು? ಬದುಕಿನ ಕೊನೆಗಾಲದಲ್ಲಿ ಹೇಡಿಯಂತೆ ತಾಯ್ನಾಡನ್ನು ಬಿಟ್ಟು ಓಡಿಹೋಗಿಯಾಗಲೀ, ನನ್ನ ನಂಬಿಕೆಗಳನ್ನು ಅದುಮಿಟ್ಟುಕೊಂಡಾಗಲೀ ನಾನು ಬದುಕಲಾರೆ. ನಿಮ್ಮ ಕೆಲಸ ನೀವು ಮಾಡಿ! ನನ್ನ ಕೆಲಸ ನಾನು ಮಾಡುತ್ತೇನೆ! ಎಂದುಬಿಟ್ಟರಂತೆ. ಸಾಕ್ರೆಟೀಸರಿಗೆ ಶಿಕ್ಷೆ ವಿಧಿಸಲಾಯಿತು. ಅದಾದ ಕೆಲವೇ ದಿನಗಳಲ್ಲಿ ಅವರಿಗೆ ವಿಷವುಣಿಸಿ ಸಾಯಿಸಲಾಯಿತು.


ಸಾವು ಬಂದು ಎದುರಿಗೆ ನಿಂತು ಬೆದರಿಸಿ, ತಾಯಿನಾಡನ್ನು ಬಿಟ್ಟುಹೋಗಲು ಹೇಳುತ್ತಿದ್ದರೂ, ತಾಯಿನಾಡು ಸ್ವರ್ಗಕ್ಕಿಂತ ಹೆಚ್ಚು, ಅದನ್ನು ಬಿಟ್ಟು ಹೋಗಲಾರೆನೆನ್ನುವ, ತಮ್ಮ ಮಾತುಗಳನ್ನಾಡದೆ ಮೌನವಾಗಿರಲು ಒಪ್ಪದ ಸಾಕ್ರೆಟೀಸರ ಧೈರ್ಯ ಮೆಚ್ಚುವಂತಹದ್ದಲ್ಲವೇ? ಸಹಸ್ರಮಾನಗಳೇ ಕಳೆದರೂ ಇಂದಿಗೂ ಜಗತ್ತಿನಾದ್ಯಂತ ಸಾಕ್ರೆಟೀಸರ ನೆನಪಿರುವುದು ಇದೇ ಕಾರಣಕ್ಕಲ್ಲವೇ?


ನಮಗೂ ನಮ್ಮ ತಾಯಿನಾಡಿನ ಬಗ್ಗೆ ಅಂತಹದ್ದೇ ಅದಮ್ಯ ಪ್ರೀತಿ ಮತ್ತು ನಮ್ಮ ನಂಬಿಕೆಗಳ ಬಗ್ಗೆ ಧೈರ್ಯ ಇದೆಯಲ್ಲವೇ. ಕೃಪೆ ಷಡಕ್ಷರಿ .

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು