ಕಥೆ-829
*ನಾವು ಕೊಟ್ಟಿದ್ದೆ ನಮಗೆ ದೊರಕುವುದು.*
ಬೆಳಗಾಯಿತು. ಮುರುಕು ಗುಡಿಸಲಲ್ಲಿ ಮಲಗಿದ ಭಿಕ್ಷುಕನೊಬ್ಬ ಭಿಕ್ಷೆ ಬೇಡಲು ಹೊರಡಬೇಕು ಎಂದುಕೊಂಡು ಹೊದ್ದಿದ್ದ ಹಳೆಯ ಹೊದಿಕೆಯನ್ನು ಚೀಲದಲ್ಲಿ ತುಂಬಿ ಕೊಂಡ , ನೆಗ್ಗು ನುಗ್ಗಾದ ಪಾತ್ರೆ ಹಿಡಿದುಕೊಂಡು ಭಿಕ್ಷೆ ಬೇಡಲು ಹೊರಟ. ಯಾಕೋ ಅವನಿಗೆ ತುಂಬಾ ಬೇಜಾರಾಗಿತ್ತು. ಇದೇನು ಹಣೆಬರಹ ವಯಸ್ಸಾಗುತ್ತಾ ಬಂತು ಮೈಯಲ್ಲಿ ಶಕ್ತಿ ಇಲ್ಲ. ಆದರೆ ಬೇಡಲೇ ಬೇಕು ವಿಧಿಯಿಲ್ಲ. ಯಾರಾದರೂ ಸ್ವಲ್ಪ ಸಹಾಯ ಮಾಡಿ, ನಿತ್ಯವೂ ಭಿಕ್ಷೆ ಬೇಡುವ ವೃತ್ತಿಯಿಂದ ತಪ್ಪಿಸಿದರೆ, ಬೆಚ್ಚನೆ ಗುಡಿಸಲು ಹಾಕಿಕೊಂಡು ನೆಮ್ಮದಿಯಾಗಿ ದಿನಗಳನ್ನು ಕಳೆಯಬಹುದಿತ್ತು. ಯಾರು? ಯಾಕೆ? ಸಹಾಯ ಮಾಡುತ್ತಾರೆ. ಬಿಕ್ಷಾ ವೃತ್ತಿಯಿಂದ ಹೇಗಾದರೂ ಪಾರಾದರೆ ಎಷ್ಟು ಚೆನ್ನಾಗಿರುತ್ತೆ ಎಂದು ಚಿಂತಿಸುತ್ತಲೇ ಸುತ್ತುತ್ತಾ ಒಂದು ಪಟ್ಟಣದ ಬೀದಿಗೆ ಬಂದು ಒಂದು ಬದಿಯಲ್ಲಿ ಕುಳಿತುಕೊಂಡನು. ಇಲ್ಲಿ ಸಾಕಷ್ಟು ಜನ ಓಡಾಡುತ್ತಾರೆ ಏನಾದರೂ ಒಂದಿಷ್ಟು ಸಿಗಬಹುದು ಎಂದುಕೊಂಡ.
ಮುಂಜಾನೆಯ ಕತ್ತಲು ಕಳೆದು ಸೂರ್ಯನು ಅಲ್ಲಲ್ಲೆ ಇಣುಕಿ ಹೊರಗೆ ಬರುತ್ತಿದ್ದಾನೆ. ಇದ್ದಕ್ಕಿದ್ದಂತೆ ಪ್ರಮುಖ ರಸ್ತೆಯಲ್ಲಿ ಜನ ಸಂಚಾರ ಹೆಚ್ಚಿತು, ಮಾತುಕತೆಗಳು ಜೋರಾಯಿತು. ಗಡಿಬಿಡಿ ಹೆಚ್ಚಾಯಿತು. ದೂರದಲ್ಲಿ ಅರಮನೆ ರಕ್ಷಣಾ ಪಡೆಗಳು ಜನರನ್ನು ಆಚೀಚೆ ಸರಿಸುತ್ತಿದ್ದಾರೆ, ಹಿಂದೆ ರಾಜ ದರ್ಬಾರಿನವರು ಬರುತ್ತಿದ್ದಾರೆ. ಮೈಕಿನಲ್ಲಿ ಮಹಾರಾಜರು ಬರುತ್ತಿದ್ದಾರೆ.
ದೂರದಲ್ಲಿ ನಿಂತು ಅವರ ದರ್ಶನ ಮಾಡಿ ಎಂದು ಕೂಗುತ್ತಿದ್ದಾರೆ. ಅಲ್ಲಿದ್ದ ಜನಗಳಲೆಲ್ಲಾ ಸಂಭ್ರಮ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮಹಾರಾಜರನ್ನು ಕಣ್ತುಂಬ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈಗ ಬಿಕ್ಷಕನಿಗೂ
ರಾಜನನ್ನು ನೋಡುವ ಆಸೆ ಆಯಿತು ಕುಳಿತಲ್ಲಿಂದ ಎದ್ದು ಮಹಾರಾಜರು ಬರುವುದು ಕಾಣುವಂತೆ ರಸ್ತೆಯ ತುದಿಯಲ್ಲಿ ನಿಂತ.
ಆತನಿಗೆ ಮಹಾರಾಜರನ್ನು ಕಾಣುವ ಆಸೆ ಒಂದಾದರೆ, ಅಕಸ್ಮಾತ್ ತಾನು ಅವರ ದೃಷ್ಟಿಗೆ ಬಿದ್ದರೆ, ಅವರು ಒಂದಷ್ಟು ಕೈಯೆತ್ತಿ ಕೊಟ್ಟರೆ, ತಾನು ಈಗ ಅಂದುಕೊಂಡ ತನ್ನ ಆಸೆಗಳು ಈಡೇರಬಹುದೆ ಎಂದುಕೊಂಡ, ಮತ್ತೊಂದು ಕ್ಷಣಕ್ಕೆ ಅಯ್ಯೋ ನನ್ನಂತಹ ಭಿಕ್ಷುಕನನ್ನು ಅವರ್ಯಾಕೆ ನೋಡುತ್ತಾರೆ, ನೋಡುವುದಿರಲಿ, ಅವರನ್ನು ನೋಡುವಂಥ ಪುಣ್ಯ ನನಗೆ ಇದ್ದರೆ ಸಾಕು.
ನಾನೆಲ್ಲಿ, ಮಹಾರಾಜರೆಲ್ಲಿ, ಹೀಗಂದುಕೊಂಡು ಏನಾದರಾಗಲಿ ಕಣ್ತುಂಬ ನೋಡುವ ಅವಕಾಶವಾದರೂ ಸಿಕ್ಕರೆ ಸಾಕು ಎಂದು ಎಲ್ಲಾ ಜನಗಳನ್ನು ತಳ್ಳಿಕೊಂಡು ಮುಂದೆ ಬಂದು ನಿಂತನು. ಸ್ವಲ್ಪ ಹೊತ್ತಿಗೆ ದೂರದಲ್ಲಿ ಮಹಾರಾಜ ಬರುತ್ತಿರುವುದು ಕಾಣಿಸಿತು. ಅದೇನು ಮೈತುಂಬ ಜಗಮಗ ಒಡವೆಯ ರಾಶಿ ಅದರ ಮೇಲೆ ಸೂರ್ಯನ ಬೆಳಕು ಬಿದ್ದು ಕಣ್ಣಿಗೆ ಪಳಕ್
ಪಳಕ್ಕೆಂದು ಮಿಂಚಿನಂತೆ ಹೊಳೆಯುತ್ತಿದೆ. ಅದೆಂಥ ವೈಭೋಗ, ಸೂರ್ಯ ತೇಜಸ್ಸು. ಅವರ ದೃಷ್ಟಿ ನನ್ನ ಕಡೆಗೆ ಬಿದ್ದೀತೇ? ಇಷ್ಟೇ ಅಂದುಕೊಂಡ
ಅದೇನು ಬಿಕ್ಷುಕನ ಅದೃಷ್ಟವೂ ಎಂಬಂತೆ, ಮಹಾರಾಜ ಭಿಕ್ಷುಕನ್ನೇ ನೋಡಿದ,
ಇಷ್ಟೆ ಅಲ್ಲ ಭಿಕ್ಷುಕನನ್ನು ನೋಡಿ ಮುಗುಳ್ನಗೆ ಬೀರಿದ. ಅದನ್ನು ಕಂಡು ಬಿಕ್ಷುಕನಿಗೆ ರೋಮಾಂಚನವಾಯಿತು. ಸುತ್ತಲಿದ್ದವರು ಇದೇನಿದು ಮಹಾರಾಜರು ಭಿಕ್ಷುಕನನ್ನು ನೋಡಿ ನಗುವುದು ಎಂದರೇನು?
ಆಶ್ಚರ್ಯಚಕಿತರಾದರು.
ಮಹಾರಾಜನ ಹೊನ್ನಿನ ರಥ ಇನ್ನು ಸ್ವಲ್ಪ ಹತ್ತಿರ ಬಂದಿತು. ನಿಲ್ಲಿಸುವಂತೆ ಸಾರಥಿಗೆ ಹೇಳಿದ. ಮಹಾರಾಜನು ರಥದಿಂದ ಇಳಿದು ನೇರವಾಗಿ ಬಿಕ್ಷುಕನ ಮುಂದೆ ಬಂದು ನಿಂತನು. ಭಿಕ್ಷುಕನಿಗೆ ಒಂದು ಕ್ಷಣ ಎದೆ ದಸಕ್ಕೆಂದಿತು. ಇನ್ನು ನನ್ನ ಕಷ್ಟ ಕಾಲವೆಲ್ಲ ಮುಗಿಯಿತು. ಇದುವರೆಗೂ ಕನಸು ಎಂದು ಕೊಂಡಿದ್ದು ನನಸಾಗುವ ಕಾಲ ಬಂದಿತು ಎಂದು ಸಂತಸಗೊಂಡ. ಆದರೆ ರಾಜ ಭಿಕ್ಷುಕನಿಗೆ ಕೊಡುವ ಬದಲು, ಅವನೇ ಭಿಕ್ಷುಕನ ಮುಂದೆ ಕೈಚಾಚಿ ನನಗೆ ಏನು ಕೊಡ್ತೀಯಾ? ಕೊಡು ಎಂದು ಕೇಳಿದಾಗ, ಒಂದು ಕ್ಷಣ ಕಕ್ಕಾಬಿಕ್ಕಿಯಾದ ಬಿಕ್ಷುಕ, ಇದೇನಿದು ರಾಜರು ನನಗೆ ಕೊಡುತ್ತಾರೆ ಅಂದುಕೊಂಡರೆ ಅವರೇ ನನ್ನಂಥ ಬಿಕ್ಷುಕನ ಮುಂದೆ ಕೈಚಾಚಿ ಕೇಳುತ್ತಾರಲ್ಲ, ನನ್ನ ಹತ್ತಿರ ಏನು ಇಲ್ಲ ಎಂದು ಹೇಳುವುದಾದರೂ ಹೇಗೆ? ಅವರು ಮಹಾರಾಜರು, ಕೊನೆಗೆ ತನ್ನ ಹತ್ತಿರವಿದ್ದ ಭಿಕ್ಷಾ ಪಾತ್ರೆಯನ್ನು ತೆಗೆದು ನೋಡಿದ. ಅದರಲ್ಲಿ ಸಣ್ಣ ಹಿಡಿಯಷ್ಟು ಧಾನ್ಯಗಳಿತ್ತು ಅದನ್ನು ಕೊಡುವ ಮನಸ್ಸು ಅವನಿಗೆ ಇರಲಿಲ್ಲ, ಅದರಲ್ಲೇ ಎರಡು ಕಾಳು ಆರಿಸಿ ಕೊಡಲಾರದ ಮನಸ್ಸಿನಿಂದ ರಾಜನ ಕೈಗೆ ಕೊಟ್ಟ. ರಾಜನು ಮುಗುಳ್ನಕ್ಕು ಅದನ್ನೇ ತೆಗೆದುಕೊಂಡು ಹೋಗಿ ಚಿನ್ನದ ರಥವೇರಿ ಕುಳಿತು ಹೊರಟುಹೋದನು.
ಬಿಕ್ಷುಕನು, ಇವನೆಂಥ ರಾಜ ಕೊಡುವುದರ ಬದಲು ನನ್ನ ಬಿಕ್ಷೆಯಲ್ಲಿ ಬೇಡಿ ಎರಡು ಕಾಳು ತೆಗೆದುಕೊಂಡು ಹೋದ ಎಂದು ಬೇಸರ ಪಟ್ಟುಕೊಂಡು ತನ್ನ ಮುರುಕಲು ಗುಡಿಸಲ ಮನೆಗೆ ಹೋದ. ಗುಡಿಸಲ ಮುಂದೆ ಬೆಳಕಿನಲ್ಲಿ ಕುಳಿತು, ಅಂದು ಬೇಡಿದ ಭಿಕ್ಷೆಯಲ್ಲಿ ಎಷ್ಟು ಬಂದಿದೆ ಎಂದು ನೋಡಲು ತನ್ನ ಜೋಳಿಗೆಯಿಂದ ತೆಗೆದು ಇನ್ನೊಂದು ಪಾತ್ರೆಗೆ ಹಾಕುತ್ತಿದ್ದ. ಹೀಗೆ ಹಾಕುತ್ತಿರುವಾಗ ಕಣ್ಣಿಗೇನು ಪಳಪಳ ಹೊಳೆದಂತೆ ಕಂಡಿತು. ಏನೆಂದು ತೆಗೆದು ನೋಡಲು ಅದು ಬಂಗಾರದ ಧಾನ್ಯವಾಗಿತ್ತು. ಮತ್ತೆ ತೆಗೆದು ನೋಡಿದಾಗ ಇನ್ನೊಂದು ಬಂಗಾರದ ಧಾನ್ಯ ಸಿಕ್ಕಿತು. ಮತ್ತೆ ಮತ್ತೆ ನೋಡಿದರೆ ಏನೂ ಇರಲಿಲ್ಲ. ಎಷ್ಟೇ ಹುಡುಕಿದರೂ ಸಿಗಲಿಲ್ಲ. ಕುಸಿದು ಕುಳಿತು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ. ದೇವರೇ ನಾನು ರಾಜನಿಗೆ ಕೊಟ್ಟಿದ್ದು ಎರಡು ಧಾನ್ಯಗಳು... ಪ್ರತಿಯಾಗಿ ರಾಜರು ನನಗೆ ಗೊತ್ತಾಗದ ಹಾಗೆ ಬಂಗಾರದ ಧಾನ್ಯಗಳನ್ನು ಹಾಕಿದ್ದಾರೆ. ನನ್ನಲ್ಲಿರುವ ಎಲ್ಲಾ ದಾನ್ಯಗಳನ್ನು ಕೊಟ್ಟಿದ್ದರೆ? ಅಯ್ಯೋ ದೇವರೇ ನನ್ನ ಕ್ಷುಲ್ಲಕ ಬುದ್ಧಿಗೆ ತಕ್ಕ ಶಾಸ್ತಿ ಆಯಿತು.
ಎಂದು ದುಃಖಿಸುತ್ತ ಕುಳಿತನು.
ನಾವು ಜಗತ್ತಿಗೆ ಎಷ್ಟು ಕೊಡುತ್ತೇವೆಯೋ ಅಷ್ಟನ್ನೂ ನಾವು ಪ್ರತಿಯಾಗಿ ಪಡೆದಿರುತ್ತೆವೆ....
ಕೃಪೆ:-ಆಶಾ ನಾಗಭೂಷಣ.
No comments:
Post a Comment