Tuesday, August 19, 2025

 ಕಥೆ-834

ಅಸಾಧ್ಯವಾದುದು ಯಾವುದೂ ಇಲ್ಲ


ಬೌದ್ಧ ವಿಹಾರವೊಂದರಲ್ಲಿ ಗುರು ಮತ್ತು ವಿಭಿನ್ನ ಹಿನ್ನೆಲೆಯಿಂದ ಬಂದ ಶಿಷ್ಯರು ಬುದ್ಧನ ಬೋಧನೆಗಳನ್ನು ಪಾಲಿಸುತ್ತ ಜನರಿಗೆ ಅವನ್ನು ಬೋಧಿಸುತ್ತ ವಾಸವಾಗಿದ್ದರು. ಅಲ್ಲೊಬ್ಬ ಬಹಳ ಮಾತಾಡುವ ಶಿಷ್ಯನಿದ್ದ. ತಾನು ಬುದ್ಧಿವಂತನೆಂದು ಸಾಬೀತುಪಡಿಸಲು ಸದಾ ಹೆಣಗುತ್ತಿದ್ದ. ತಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಸುಖಭೋಗಗಳನ್ನು ತ್ಯಾಗ ಮಾಡಿ ಬಂದಿರುವುದರಿಂದ ಉಳಿದೆಲ್ಲ ಶಿಷ್ಯರಿಗಿಂತ ತಾನೇ ಉತ್ತಮನೆಂದು ಬೀಗುತ್ತಿದ್ದ.  

ಒಂದು ದಿನ ಗುರುಗಳು ಆಶ್ರಮದ ಎಲ್ಲ ಶಿಷ್ಯರಿಗೂ ಒಂದು ಸವಾಲನ್ನೊಡ್ಡಿದರು. ಅದೆಂದರೆ ಪ್ರತಿಯೊಬ್ಬರೂ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು, ಒಂದು ತಿಂಗಳ ಕಾಲ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು. 

ಎಲ್ಲ ಶಿಷ್ಯರೂ ಶಕ್ತ್ಯಾನುಸಾರ ನಿರ್ಧಾರಗಳನ್ನು ಕೈಗೊಂಡು ಗುರುವಿಗೆ ತಿಳಿಸಿದರು. ಈ ಜಂಭದ ಶಿಷ್ಯನಿಗೆ ತಾನು ಇತರರಿಗಿಂತ ಭಿನ್ನ ಎಂದು ತೋರಿಸಿಕೊಳ್ಳುವ ಹಂಬಲವಿತ್ತಲ್ಲ, ಆತ ಸೀದಾ ಗುರುವಿನ ಬಳಿಗೇ ಹೋದ. “ನನಗೆ ಈ ಚಿಕ್ಕ ಪುಟ್ಟ ಗುರಿಗಳನ್ನು ಇಟ್ಟುಕೊಳ್ಳಲು ಇಷ್ಟವಿಲ್ಲ. ನನ್ನ ಅರ್ಹತೆಗೆ ಯಾವುದಾದರೂ ದೊಡ್ಡ ಗುರಿಯನ್ನು ನೀವೇ ಹೇಳಿ” ಎಂದ. ಗುರುಗಳು ಬೇಡವೆಂದರೂ ಈತ ಪಟ್ಟು ಬಿಡಲಿಲ್ಲ. “ಹಾಗಾದರೆ ಮುಂದಿನ ಒಂದು ತಿಂಗಳು ಮಾತಾಡಬೇಡ, ಒಂದೇ ಒಂದು ಶಬ್ದವನ್ನೂ ಉಸುರಬೇಡ” ಎಂದರು ಗುರುಗಳು. 

ಶಿಷ್ಯ ಒಂದು ದಿನ ಮೌನವಾಗಿದ್ದ. ಎರಡನೇ ದಿನ ಕಸಿವಿಸಿಯಾಗತೊಡಗಿತು. ಸ್ನೇಹಿತರೆಲ್ಲ ಮಾತಾಡುವುದನ್ನು ನೋಡಿ ಆ ಕಸಿವಿಸಿ ಹಿಂಸೆಯಾಗತೊಡಗಿತು. ನಾಲ್ಕನೇ ದಿನ ಆ ಹಿಂಸೆ ಸಹಿಸಲಾಗದ ಭಾರವಾಯಿತು. ಒಂದು ವಾರ ಕಳೆಯುವಷ್ಟರಲ್ಲಿ ಮಾತನಾಡದಿದ್ದರೆ ತಲೆಯೇ ಸಿಡಿದುಹೋಗುತ್ತದೆನ್ನಿಸಿ ಆತ ಗುರುಗಳ ಹತ್ತಿರ ಹೋಗಿ ಬರೆದು ತೋರಿಸಿದ, “ಗುರುಗಳೇ ಮಾತಾಡದೇ ಇರಲು ಸಾಧ್ಯವೇ ಇಲ್ಲ, ನಾನು ಮಾತಾಡುತ್ತೇನೆ.” ಆಗ ಗುರುಗಳು “ಮಾಡಿದ ತೀರ್ಮಾನವನ್ನು ಪೂರ್ಣಗೊಳಿಸುವವನು ಅರಿವಿನ ದಾರಿಯಲ್ಲಿ ಸಾಗುತ್ತಾನೆ. ಈ ತೀರ್ಮಾನವನ್ನು ಮುರಿಯುವುದು ನಿನ್ನಿಷ್ಟ. ಆದರೆ ಇಷ್ಟು ಸಣ್ಣ ವಿಷಯವನ್ನೇ ಪೂರ್ಣಗೊಳಿಸಲಾಗದ ನೀನು ಮುಂದೆ ನಿನ್ನ ಬದುಕನ್ನು ಹೇಗೆ ನಿಭಾಯಿಸುತ್ತೀ” ಎಂದರು. ಶಿಷ್ಯ ಕುಟೀರದೊಳಗೆ ಏಕಾಂಗಿಯಾಗಿ ಧ್ಯಾನಮಗ್ನನಾದ. ದಿನಾಲು ಧ್ಯಾನಮಗ್ನನಾಗಲು ಶುರು ಮಾಡಿದ. ತಿಂಗಳುರುಳಿ ಮತ್ತೆ ಮೂರು ತಿಂಗಳು ಕಳೆಯಿತು. ಶಿಷ್ಯ ಹೊಸಮನುಷ್ಯನಾಗಿದ್ದ. ನೀನು ಅದೇಗೆ ಸಾಧಿಸಿದೆ ಎಂದು ಕೇಳಿದಾಗ... “ಆರಂಭದಲ್ಲಿ ಬಹಳ ಒದ್ದಾಡಿ ಹೊರಗಿನ ಮೌನ ಸಾಧಿಸಿದೆ, ಆದರೆ ನನ್ನೊಳಗೆ ದನಿಗಳು ನೂರು ಪ್ರಶ್ನೆ ಕೇಳುತ್ತಿದ್ದವು. ಮತ್ತೆ ಮೂರು ತಿಂಗಳು ಅವುಗಳಿಗೆ ಉತ್ತರ ಹುಡುಕುತ್ತ ಕಳೆದೆ. ಈಗ ಒಳಗೂ ಹೊರಗೂ ಶಾಂತತೆಯಿಂದಿದ್ದೇನೆ, ಧನ್ಯವಾದಗಳು ಗುರುಗಳೇ“ ಎಂದ. 

ಸಾಧನೆಯ ದಾರಿಯಲ್ಲಿ ಸಾಗುವುದು ಕಷ್ಟವೇ. ಆರಾಮಾಗಿರಲು ಬಯಸುವ ದೇಹ ಮನಸ್ಸುಗಳು ಪರಿಶ್ರಮವನ್ನು ಮೊದಮೊದಲು ತಿರಸ್ಕರಿಸುತ್ತವೆ. ಪ್ರಯತ್ನ ಪಡುವುದನ್ನೇ ನಿಲ್ಲಿಸಿಬಿಡುವಷ್ಟು ಒತ್ತಡ ಹೇರುತ್ತವೆ. ಆದರೆ ಛಲದಿಂದ, ದೃಢಮನೋಭಾವದಿಂದ ಅಭ್ಯಾಸ ಮಾಡಿದರೆ ಒಗ್ಗಿಕೊಳ್ಳುತ್ತವೆ. ಅದು ಓದು ಬರಹ ಇರಬಹುದು, ದೈಹಿಕ ಚಟುವಟಿಕೆ ಇರಬಹುದು ಅಥವಾ ಇನ್ಯಾವುದೇ ಸಾಧನೆ ಇರಬಹುದು. ಪ್ರಯತ್ನಿಸಿದರೆ ಯಾವುದೂ ಕಷ್ಟವಲ್ಲ. ಅಸಾಧ್ಯವೆನ್ನುವುದು ಏನೂ ಇಲ್ಲ. 

-ದೀಪಾ ಹಿರೇಗುತ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು