Sunday, August 31, 2025

 ಕಥೆ-851                  

ಕನಸು ಕೆಟ್ಟದಾದರೇನು? ಬದುಕು ನೆಟ್ಟಗಿರಲಿ!

ಕನಸುಗಳು ಯಾರಿಗೆ ಬೀಳುವುದಿಲ್ಲ? ಅವು ಅರಮನೆಯಲ್ಲಿನ ಅರಸರನ್ನೂ ಬಿಡುವುದಿಲ್ಲ! ರಸ್ತೆಬದಿಯ ತಿರುಕರನ್ನೂ ಬಿಡುವುದಿಲ್ಲ! ಕೆಟ್ಟ ಕನಸುಗಳು ಬೀಳಬಹುದು. ಒಳ್ಳೆಯ ಕನಸುಗಳೂ ಬೀಳಬಹುದು. ಕೆಟ್ಟ ಕನಸು ಕಂಡವರು ಖಿನ್ನರಾಗುತ್ತಾರೆ. ಒಳ್ಳೆಯ ಕನಸು ಕಂಡವರು ಪ್ರಸನ್ನರಾಗುತ್ತಾರೆ. ಜನಸಾಮಾನ್ಯರು ಆನಂತರ ಅಂಥ ಕನಸುಗಳನ್ನು ಮರೆತೂ ಬಿಡುತ್ತಾರೆ. ಆದರೆ ಅಸಾಮಾನ್ಯರು ಅಂದರೆ ಅರಸರು ಹಾಗೆ ಮಾಡುವುದಿಲ್ಲ! ಅವರೇನು ಮಾಡುತ್ತಾರೆಂಬುದನ್ನು ತಿಳಿಸುವ ಕುತೂಹಲಕಾರಿ ಕತೆಯೊಂದು ಇಲ್ಲಿದೆ. ಮಹಾರಾಜರೊಬ್ಬರಿಗೆ ಮುಂಜಾನೆ ದುಸ್ವಪ್ನವೊಂದು ಬಿದ್ದಿತಂತೆ. ಕರಾಳ ಮುಖದವನು ಬಂದು ಇಂದು ಸಂಜೆಯೊಳಗೆ ನೀವು ಸಾಯುತ್ತೀರೆಂದು ಹೇಳಿದ ಹಾಗೆ ಕನಸು!


ಧೈರ್ಯಶಾಲಿಗಳಾದರೂ ಮಹಾರಾಜರು ಗಾಬರಿಯಾಗಿ ಎದ್ದರು. ತಕ್ಷಣ ತಮ್ಮ ಮಂತ್ರಿಗಳ, ವೈದ್ಯರ, ಪುರೋಹಿತರ, ಸೇನಾಧಿಪತಿಗಳಂಥ ಪ್ರಮುಖರ ತುರ್ತು ಸಭೆ ಕರೆದರು. ತಮ್ಮ ದುಸ್ವಪ್ನವನ್ನು ವಿವರಿಸಿ ಅದರ ಬಗ್ಗೆ ಏನು ಮಾಡಬೇಕೆಂದು ಕೇಳಿದರು. ಪುರೋಹಿತರು ಜಾತಕ-ಕುಂಡಲಿಗಳ ಪ್ರಕಾರ ಮಹಾರಾಜರು ನೂರು ವರ್ಷಗಳಾದರೂ ಬದುಕುತ್ತಾರೆಂದರು. ವೈದ್ಯರು ಮಹಾರಾಜರ ನಾಡಿ ಮುಂತಾದವುಗಳ ಪರೀಕ್ಷೆ ಮಾಡಿ ಅವರ ಆರೋಗ್ಯ ಅತ್ಯುನ್ನತವಾಗಿದೆ. ಸಾವು ಅವರನ್ನು ಮುಟ್ಟುವುದಿಲ್ಲವೆಂದರು. ಮಂತ್ರಿಗಳು ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿ ಸದ್ಯದಲ್ಲಿ ಯುದ್ಧವಿಲ್ಲವಾದುದರಿಂದ ಮಹಾರಾಜರಿಗೆ ಸಾವು ಬರುವುದಿಲ್ಲವೆಂದು ವಾದಿಸಿದರು.


ಸೇನಾಧಿಪತಿಗಳು ತಮ್ಮ ಶಸ್ತ್ರಾಸ್ತ್ರಗಳ ಬಲ ವಿವರಿಸಿ ಸಾವು ಮಹಾರಾಜರ ಬಳಿ ಸುಳಿಯಗೊಡುವುದಿಲ್ಲವೆಂದು ತಿಳಿಸಿದರು. ಎಲ್ಲರೂ ಚರ್ಚೆ ಮಾಡಿದ್ದೇ ಮಾಡಿದ್ದು. ಮಧ್ಯಾಹ್ನವಾದರೂ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಎಲ್ಲರ ಊಟ-ತಿಂಡಿಗಳು ತಣ್ಣಗಾದರೂ ಚರ್ಚೆ ಬಿಸಿಯಾಗಿತ್ತು. ಆಗ ಮಹಾರಾಜರ ಆಪ್ತ ಸೇವಕ ಬಂದು ‘ಮಹಾಸ್ವಾಮಿ, ನಾನು ವಿದ್ಯಾವಂತನಲ್ಲ. ಪಂಡಿತನಲ್ಲ. ಸಾವು ಬರುತ್ತಿರುವುದು

ನಿಮಗೇ ಹೊರತು ಅವರಿಗಲ್ಲ! ಅವರ ಚರ್ಚೆಯಿಂದ ಇಂದು ಸಂಜೆ ಬರಬಹುದಾದ ಸಾವನ್ನು ತಪ್ಪಿಸಬಹುದೇನೋ ಗೊತ್ತಿಲ್ಲ. ಆದರೆ ಸಾವು ಇಂದು ಬಾರದಿದ್ದರೂ ಮತ್ತೆಂದಾದರೂ ಬಂದೇ ಬರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಈಗ ನನ್ನ ನಾಲ್ಕು ಸಲಹೆಗಳನ್ನು ತಾವು ಕೇಳಬಹುದು. 


ಮೊದಲನೆಯದ್ದು-ನೀವು ಮಾಡಲೇಬೇಕಾದ ಕಾರ್ಯಗಳಿದ್ದರೆ, ಸಂಜೆಯೊಳಗೆ ಅವನ್ನು ಮಾಡಿ ಮುಗಿಸಲು ಪ್ರಯತ್ನಿಸಿ. 


ಎರಡನೆಯದ್ದು-ಮನಸ್ಸಿದ್ದರೆ

ಕೊಂಚ ಧ್ಯಾನ, ದೇವರ ಪೂಜೆಗಳನ್ನು ಮಾಡಿ. 


ಮೂರನೆಯದ್ದು- ನಿಮಗಿಷ್ಟವಾದ ಖಾದ್ಯಗಳನ್ನು ಮಾಡಿಸಿಕೊಂಡು ತಿನ್ನಿ. ಹೊಟ್ಟೆ ಹಸಿದುಕೊಂಡು ಸಾಯುವುದಕ್ಕಿಂತ ಹೊಟ್ಟೆ ತುಂಬ ತಿಂದು ಸಾಯುವುದೊಳ್ಳೆಯದಲ್ಲವೇ? 


ನಾಲ್ಕನೆಯದ್ದು- ನಿಮಗುಳಿದಿರುವ ಕೆಲವು ಗಂಟೆಗಳ ಸಮಯವನ್ನು ಇಂಥ ನಿರುಪಯುಕ್ತ ಚರ್ಚೆಗಳಲ್ಲಿ ಕಳೆಯುವ ಬದಲು ನಿಮ್ಮ ಮಕ್ಕಳು, ಮೊಮ್ಮಕ್ಕಳು, ಗೆಳೆಯರೊಂದಿಗೆ ಕಳೆಯಿರಿ. ನಾನು ಹೇಳುತ್ತಿರುವ ವಿಚಾರಗಳು ನಿಮ್ಮ ಸಾವನ್ನು ನಿವಾರಿಸುವುದಿಲ್ಲ. ಆದರೆ ಸಾವಿನ ಮುಂಚಿನ ಸಮಯವನ್ನು ಸದುಪಯೋಗ ಮಾಡಿಸುತ್ತವೆ’ಎಂದನಂತೆ.

ಮಹಾರಾಜರು ಹಾಗೆಯೇ ಮಾಡಿದರಂತೆ. ಹೊಟ್ಟೆ ತುಂಬ ಉಂಡರು. ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲಕಳೆದರು. ತಮ್ಮ ನಂತರ ರಾಜ್ಯದ ವ್ಯವಸ್ಥೆ ಹೇಗಿರಬೇಕೆಂಬುದನ್ನು ಸಂಬಂಧಿಸಿದವರೊಂದಿಗೆ ಚರ್ಚಿಸಿದರು. ಅರಮನೆಯ ಆವರಣದಲ್ಲಿದ್ದ ದೇವಾಲಯಗಳಲ್ಲಿ ಸುತ್ತಾಡಿ ಬಂದರು. ಮಹಾರಾಜರಿಗೆ ಬಳಲಿಕೆ ಆದಂತೆ ಅನಿಸಿತು. ವಿಶ್ರಾಂತಿ ಪಡೆಯಲು ತೆರಳಿದರು. ಅವರಿಗೆ ಎಚ್ಚರವಾದಾಗ ಮರುದಿನ ಮುಂಜಾನೆಯಾಗಿತ್ತು. ಅವರು ಬದುಕಿಯೇ ಇದ್ದರು. ಅವರ ದುಸ್ವಪ್ನ ಸುಳ್ಳಾಗಿತ್ತು. ಅವರು ಸಂತೋಷದಿಂದ ತಮ್ಮ ಆಸ್ಥಾನಕ್ಕೆ ಬಂದರು. ಅಲ್ಲಿ ಪಂಡಿತರ, ವೈದ್ಯರ ಮಂತ್ರಿಗಳ ಚರ್ಚೆ ಇನ್ನೂ ನಡೆಯುತ್ತಲೇ ಇತ್ತು! ಮಹಾರಾಜರು ‘ನನ್ನ ದುಸ್ವಪ್ನ ಸುಳ್ಳಾಯಿತು. ನಾನು ಸತ್ತಿಲ್ಲ. ಇನ್ನಾದರೂ ಚರ್ಚೆ ನಿಲ್ಲಿಸಿ’ಎಂದರು. ಚರ್ಚೆಯಲ್ಲಿದ್ದವರಿಗೆ ಸಣ್ಣಪುಟ್ಟ ಬಹುಮಾನಗಳನ್ನು ಕೊಟ್ಟರು. ತಮ್ಮ ಆಪ್ತ ಸೇವಕನಿಗೆ ಮಾತ್ರ ದೊಡ್ಡ ಬಹುಮಾನ ಕೊಟ್ಟರಂತೆ. 


ಈಗ ಅರಸರನ್ನು ಅವರ ಪಾಡಿಗೆ ಬಿಟ್ಟು ನಮ್ಮ ಬಗ್ಗೆ ಯೋಚಿಸೋಣ. ನಮಗೂ ಅಂಥ ದುಸ್ವಪ್ನಗಳು ಬಿದ್ದರೆ, ನಾವೇನು ಮಾಡಬಹುದೆನ್ನುವುದನ್ನು ಪರಿಶೀಲಿಸೋಣ!


ಕೃಪೆ :ವಿಶ್ವವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು