Sunday, August 24, 2025

 ಕಥೆ-841

ಬೆಲೆ ಕೊಡುವ ಸ್ಥಳದಲ್ಲಿ ಹೆಚ್ಚು ಮೌಲ್ಯ ಕಂಡುಕೊಳ್ಳಬೇಕು


ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು "ಮಗಳೇ, ನಾನು ನಿನ್ನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ ಆಸ್ತಿಯನ್ನೂ ಮಾಡಲಿಲ್ಲ. ದುಡಿದ ಹಣವೆಲ್ಲಾ ನಿನ್ನನ್ನು ಓದಿಸಲು ಖರ್ಚಾಯಿತು. ಆದರೆ ನನ್ನ ಬಳಿ ಉಳಿದದ್ದು ಮಾತ್ರ ಮನೆಯ ಹೊರಗೆ ಮೂಲೆಯಲ್ಲಿ ನಾನು ನಿಲ್ಲಿಸಿರುವ ಆ ಹಳೆಯ ಕಾರು ಮಾತ್ರ. ಅದು ಸ್ವಲ್ಪ ಹಳೆಯದ್ದು. ನೀನು ಅದನ್ನು ಮಾರಾಟ ಮಾಡುವ ಮೊದಲು ಆ ಕಾರನ್ನು ತೆಗೆದುಕೊಂಡು ಹೋಗಿ ಹೊರಗೆ ಜನರಿಗೆ ನೀನು ಆ ಕಾರನ್ನು ಮಾರಲು ತಂದಿರುವುದಾಗಿ ಹೇಳು. ನೋಡೋಣ ಜನರು ಆ ಕಾರಿಗೆ ಎಷ್ಟು ಬೆಲೆ ಕಟ್ಟುತ್ತಾರೆ?" ಎಂದು ತಂದೆ ಮಗಳಿಗೆ ಹೇಳಿದ.


ತಂದೆಯ ಮಾತಿನಂತೆ ಆ‌ ಹಳೆಯ ಕಾರನ್ನು ತೆಗೆದುಕೊಂಡು ಮಗಳು ಪೇಟೆಗೆ ಬಂದಳು. ಹಳೆಯ ಕಾರುಗಳ ಡೀಲರುಗಳು ಎಲ್ಲಿದ್ದಾರೆ ಎಂದು ವಿಚಾರಿಸುತ್ತಾ ಒಬ್ಬ ಕಾರ್ ಡೀಲರ್ ಬಳಿಗೆ ಬಂದು, ತನ್ನ ತಂದೆಯ ಆ ಹಳೆಯ ಕಾರಿನ ಈಗಿನ ಬೆಲೆಯನ್ನು ವಿಚಾರಿಸಿ, ಮನೆಗೆ ವಾಪಸ್ ಬಂದಳು. "ಅಪ್ಪಾ, ಒಬ್ಬ ಹಳೆಯ ಕಾರ್ ಡೀಲರ್ ನಮ್ಮ ಕಾರನ್ನು ನೋಡಿ ಇದು ತುಂಬಾ ಹಳೆಯ ಕಾರಿನಿಂತೆ ಕಾಣುತ್ತಿದೆ. ಹಾಗಾಗಿ 50 ಸಾವಿರ ರೂಪಾಯಿಗೆ ನಮ್ಮ ಕಾರನ್ನು ಕೊಳ್ಳುವುದಾಗಿ ಹೇಳಿದ" ಎಂದಳು.


ಸರಿ, "ಈಗ ಈ ಕಾರನ್ನು ಪೇಟೆಯಲ್ಲಿ ನಾವು ಕಿರಾಣಿ ಸಾಮಾನುಗಳನ್ನು ತರುವ ಆ ಅಂಗಡಿಯ ಮಾಲೀಕನಿಗೆ ತೋರಿಸಿ, ಅಪ್ಪ ಈ ಕಾರನ್ನು ಮಾರಲು ಹೇಳಿದ್ದಾರೆ, ನೀವು ಕೊಳ್ಳುವುದಾದರೆ ಎಷ್ಟು ಬೆಲೆಗೆ ಕೊಳ್ಳುವಿರಿ ಎಂದು ಕೇಳಿಕೊಂಡು ಬಾ" ಎಂದು ಹೇಳುತ್ತಾ ಆತ ತನ್ನ ಮಗಳನ್ನು ಮತ್ತೆ ಪೇಟೆಗೆ ಕಳುಹಿಸಿದ.


ಆ ಕಿರಾಣಿ ಅಂಗಡಿ ಮಾಲೀಕ ಈ ಕಾರನ್ನ ನೋಡುತ್ತಾ "ಏನಮ್ಮಾ ನಿಮ್ಮ ಹಳೆಯ ಕಾರನ್ನು ಯಾವ ಬೆಲೆಗೆ ಕೊಳ್ಳಲಿ? ನೀವು ಯಾವಾಗಲೂ ನಮ್ಮ ಅಂಗಡಿಯಲ್ಲಿಯೇ ಕಿರಾಣಿ ಸಾಮಾನುಗಳನ್ನು ಖರೀದಿ ಮಾಡುವುದರಿಂದ, ನಿಮಗೆ ಅನುಕೂಲ ಆಗಲಿ ಅಂತಾ ಈ ಕಾರನ್ನು 75 ಸಾವಿರ ರೂಪಾಯಿಗೆ ಕೊಳ್ಳುವೆ. ನಿನ್ನ ತಂದೆಯ ಒಪ್ಪಿಗೆಯನ್ನು ಒಮ್ಮೆ ಕೇಳಿಕೊಂಡು ಬಾ" ಎಂದು ಆತ ಹೇಳಿದ. ಮಗಳು ತನ್ನ ತಂದೆಗೆ ನಡೆದದ್ದನ್ನು ಮಗಳು ವಿವರಿಸಿದಳು.


ಸರಿ "ಈಗ ಆ ಕಾರನ್ನು ಪಕ್ಕದ ನಗರದಲ್ಲಿರುವ ಮ್ಯೂಸಿಯಂಗೆ ತೆಗೆದುಕೊಂಡು ಹೋಗಿ, ಅವರು ಈ ಕಾರನ್ನು ಎಷ್ಟು ಬೆಲೆಗೆ ಕೊಳ್ಳುತ್ತಾರೆ ಕೇಳಿ ನೋಡು" ಎಂದು ತಂದೆ ಮತ್ತೆ ಮಗಳನ್ನು ಕಾರಿನ ಬೆಲೆ ತಿಳಿದುಕೊಂಡು ಬರಲು ಸಲಹೆ ನೀಡಿದ.


ಮಗಳು ಅಪ್ಪ ಹೇಳಿದಂತೆ ಪಕ್ಕದ ನಗರದಲ್ಲಿದ್ದ ಮ್ಯೂಸಿಯಂಗೆ ಬಂದ ಮಗಳು ಆ ಮ್ಯೂಸಿಯಂನ ಕ್ಯೂರೇಟರ್ ಬಳಿಗೆ ಹೋಗಿ "ನಮ್ಮ ಈ ಕಾರನ್ನು ಮಾರಲು ನಿರ್ಧಾರ ಮಾಡಿದ್ದೇವೆ. ನಿಮ್ಮ ಮ್ಯೂಸಿಯಂಗೆ ಕೊಳ್ಳುವುದದಾದರೆ ನೀವು ಈ ಕಾರಿಗೆ ಎಷ್ಟು ಬೆಲೆ ಕೊಡಬಹುದು" ಎಂದು ಕೇಳಿಕೊಂಡು ವಾಪಸ್ ಮನೆಗೆ ಬಂದಳು.


ಅಪ್ಪ, ಇದು ತುಂಬಾ ಹಳೆಯ ಹೋಲ್ಡೆನ್ ಟೊರಾನ (Holden Torana) ಕಂಪನಿಯ ಕಾರ್ ಆಗಿರುವುದರಿಂದ ಇದು ಆ ದಿನದ ಅತ್ಯುತ್ತಮ ದರ್ಜೆಯ ಕಾರಂತೆ, ಹಾಗಾಗಿ ಆ ಮ್ಯೂಸಿಯಂನವರು ಈ ಕಾರು ತಮಗೇ ಬೇಕು, ಯಾರಿಗೂ ಮಾರಬೇಡಿ, ನಾವು 10 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದರು. ನನಗಂತೂ ನಿಜವಾಗಿಯೂ ಆಶ್ಚರ್ಯ ಆಯಿತು" ಎಂದು ಆತುರಾತುರವಾಗಿ ಮಗಳು ಉಬ್ಬೇರಿಸಿ ಅಪ್ಪನ ಮುಂದೆ ಹೇಳಿದಳು.


ಮಗಳ ಮುಖದ ಮೇಲಿನ ಖುಷಿ ನೋಡಿ ಅಪ್ಪ, "ಸೂಕ್ತವಾದ ಸ್ಥಳದಲ್ಲಿ ಮಾತ್ರ ಸೂಕ್ತವಾದ ಬೆಲೆ ಸಿಗುತ್ತದೆ. ಹೋದಲ್ಲೆಲ್ಲಾ ನಮಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಕೈಚೆಲ್ಲುವುದಾಗಲೀ ಅಥವಾ ಸಿಟ್ಟಿಗೇಳುವದಾಗಲೀ ಮಾಡಬಾರದು. ಆ ರೀತಿ ನಮಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರೆ ನಾವು ಇರುವುದು ಸೂಕ್ತವಾದ ಸ್ಥಳವಲ್ಲಾ ಎಂದು ಅರ್ಥ. ನಮಗೆ ಸೂಕ್ತ ಬೆಲೆ ಕೊಡುವವರು ನಮ್ಮನ್ನು ಮತ್ತು ನಮ್ಮ ಮೌಲ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೆ. ನಮಗೆ ಬೆಲೆ ಸಿಗದ ಕಡೆ ಹೆಚ್ಚು ಕಾಲಹರಣ ಮಾಡಬಾರದು. ನಮಗೆ ಬೆಲೆ ಕೊಡುವ ಸ್ಥಳಗಳನ್ನು ಗುರುತಿಸಿ ಅಲ್ಲಿಯೇ ಹೆಚ್ಚು ಮೌಲ್ಯ ಕಂಡುಕೊಳ್ಳಬೇಕು" ಎಂದ.


ಈ ಕಥೆಯನ್ನು ಓದಿದ ಮೇಲೆ ಅದರೊಳಗಿನ ಅರ್ಥ ಸರಳವಾಗಿರುವ ಕಾರಣ ಎಲ್ಲರಿಗೂ ಬಹಳ ಬೇಗ ಅರ್ಥ ಆಗುತ್ತದೆ. ಅವರು ನನಗೆ ಬೆಲೆ ಕೊಡಲಿಲ್ಲ, ಅವರು ನನ್ನನ್ನು ನೋಡಿ ಮಾತನಾಡಿಸಲಿಲ್ಲ, ಅವರು ನನ್ನ ಕಡೆ ತಿರುಗಿ ನೋಡುತ್ತಿಲ್ಲ, ಅವರು ನನ್ನನ್ನು ಉದಾಸೀನ ಮಾಡಿದರು ಅಂತೆಲ್ಲಾ ಗೊಣಗುತ್ತಾ ಕಾಲಹರಣ ಮಾಡಿಕೊಂಡು ಮನೋ ವೇದನೆ ಅನುಭವಿಸುವ ಬದಲು ನಮಗೆ ಯಾರು ಬೆಲೆ ಕೊಡುತ್ತಾರೋ, ನಮ್ಮನ್ನು ಯಾರು ಗೌರವದಿಂದ ಕಾಣುತ್ತಾರೋ ಅಥವಾ ಯಾರು ನಮ್ಮೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೋ ಅವರಿಗೆ ಉದಾರವಾಗಿ ನಮ್ಮ ಸಮಯ ಕೊಡೋಣ. ಅಂತವರ ಸಂಗವ ಮಾಡಿದರೆ ಯಾವ ಸಮಸ್ಯೆಯೂ ನಮಗೆ ಎದುರು ಬರುವುದಿಲ್ಲ.


 ನಮ್ಮನ್ನು ಎಲ್ಲರೂ ಮೆಚ್ಚಿಕೊಳ್ಳಲಿ ಎಂದು ಹಪಹಪಿಸುವ ಬದಲು ನಮಗೆ ಬೆಲೆ ಕೊಡುವವರನ್ನು ಸದಾ ಪ್ರೀತಿಯಿಂದ ಗೌರವಿಸಿಕೊಂಡು, ಕೊನೆಯವರೆಗೂ ಅಂತವರ ಸಂಗದಲ್ಲಿಯೇ ಉಳಿದುಕೊಳ್ಳುವುದು ಜಾಣತನ. ಒಂದು ಮಾತು ಮಾತ್ರ ಸತ್ಯ ಎಲ್ಲರೂ ಮೆಚ್ಚಿಕೊಳ್ಳಲಿ ಅಂತಾ ಅಥವಾ ಎಲ್ಲರೂ ಮೆಚ್ಚುವಂತೆ ಬಾಳುತ್ತೇನೆ ಅನ್ನುವ ಭ್ರಮೆಯಲ್ಲಿ ಬದುಕಬಾರದು.‌ಆ ರೀತಿ ಮಾಡಲು ಒಂದು ಇಡೀ ಜನ್ಮವಾದರೂ‌ ಸಾಲದು...

ಸಂಗ್ರಹ : ಸೌಜನ್ಯ ಹೊಟ್ಟಿನ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು