Friday, August 8, 2025

 ಕಥೆ-818 

 ಕ್ಷಮಾಗುಣದ ಮಹತ್ವ

ಸಂತ ಸಮರ್ಥ ರಾಮದಾಸರು ಒಮ್ಮೆ ಪ್ರಿಯಶಿಷ್ಯ ಶಿವಾಜಿಯ ಕುಶಲ ವಿಚಾರಿಸಲು ಶಿಷ್ಯರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಬೇಸಿಗೆಯ ಪ್ರಖರ ಬಿಸಿಲು ಸುಡುತ್ತಿತ್ತು. ಜತೆಗೆ ಬಾಯಾರಿಕೆಯಿಂದ ಬಸವಳಿದು ಬೆಂಡಾದ ಶಿಷ್ಯರಿಗೆ ಹಾದಿಯ ಅಕ್ಕಪಕ್ಕ ಸಮೃದ್ಧವಾಗಿ ಬೆಳೆದಿದ್ದ ಕಬ್ಬಿನ ಗದ್ದೆ ಕಂಡಿತು. ನಿಧಿಯೇ ಸಿಕ್ಕಂತಾಗಿ ಗದ್ದೆಗೆ ನುಗ್ಗಿ ಸಾಕಷ್ಟು ಕಬ್ಬು ಕಿತ್ತು ರಸ ಹೀರಿದರು. ಇನ್ನೇನು ಅಲ್ಲಿಂದ ಕಾಲ್ತೆಗೆಯಬೇಕು ಎನ್ನುವಾಗ, ಕಬ್ಬಿನ ಗದ್ದೆಯ ಮಾಲೀಕ ಆಗಮಿಸಿದ. ಅಪ್ಪಣೆಯಿಲ್ಲದೆ ನುಗ್ಗಿದ್ದು ಮಾತ್ರವಲ್ಲದೆ ಕಬ್ಬನ್ನು ಮನಸೋಇಚ್ಛೆ ಕಿತ್ತಿದ್ದಕ್ಕಾಗಿ ರಾಮದಾಸರೂ ಸೇರಿದಂತೆ ಎಲ್ಲ ಶಿಷ್ಯರಿಗೂ ತನ್ನ ಆಳುಗಳ ಮೂಲಕ ಥಳಿಸಿದ.


ಕೆಲ ಹೊತ್ತಿನ ನಂತರ ಅವರೆಲ್ಲ ಶಿವಾಜಿಯ ಅರಮನೆ ತಲುಪಿದರು. ಎಲ್ಲರನ್ನೂ ಸ್ವಾಗತಿಸಿದ ಶಿವಾಜಿ, ಸಮರ್ಥ ರಾಮದಾಸರಿಗೆ ಸ್ವತಃ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಲು ಮುಂದಾದಾಗ, ಅವರ ಮೈಮೇಲಿನ ಬಾಸುಂಡೆಗಳನ್ನು ಕಂಡು ದಿಗ್ಭ್ರಮೆಗೊಂಡ. ಶಿಷ್ಯರಿಂದ ವಿಷಯ ತಿಳಿದು ಕಬ್ಬಿನ ಗದ್ದೆಯ ಮಾಲೀಕನನ್ನು ಆಸ್ಥಾನಕ್ಕೆ ಕರೆಸಿದ. ತನ್ನಿಂದ ಥಳಿತಕ್ಕೊಳಗಾದ ಸ್ವಾಮೀಜಿ ಮತ್ತು ಶಿಷ್ಯರು ಶಿವಾಜಿಯಿಂದ ಗೌರವಿಸಲ್ಪಡುತ್ತಿರುವುದನ್ನು ಕಂಡು ಕಂಗಾಲಾದ ಆತ, ತನ್ನ ತಪ್ಪನ್ನು ಕ್ಷಮಿಸುವಂತೆ ರಾಮದಾಸರಲ್ಲಿ, ಶಿವಾಜಿಯಲ್ಲಿ ಮೊರೆಯಿಟ್ಟ. ‘ಈತನಿಗೆ ಏನು ಶಿಕ್ಷೆ ವಿಧಿಸಬೇಕೆಂಬುದನ್ನು ನೀವೇ ಹೇಳಿ ಗುರುಗಳೇ’ ಎಂದು ಶಿವಾಜಿ ಬಿನ್ನವಿಸಿಕೊಂಡಾಗ ರಾಮದಾಸರು ನಗುತ್ತ, ‘ಬಿಸಿಲಿನಿಂದ ಬಳಲಿ ಬೆಂಡಾಗಿ, ಬಾಯಾರಿಕೆಯಿಂದ ಚಡಪಡಿಸುತ್ತಿದ್ದ ನನ್ನ ಶಿಷ್ಯರಿಗೆ ಅಮೃತಸಮಾನ ಕಬ್ಬಿನರಸ ದೊರೆಯುವಂತಾಗುವುದಕ್ಕೆ ಅನುವುಮಾಡಿಕೊಟ್ಟ ಈ ಮಾಲೀಕನಿಗೆ ನೀನು ಹತ್ತು ಗ್ರಾಮಗಳನ್ನು ಉಂಬಳಿಯಾಗಿ ನೀಡಬೇಕು’ ಎಂದು ಸಲಹೆಯಿತ್ತರು. ರಾಮದಾಸರ ದಯಾಗುಣಕ್ಕೆ ಶಿವಾಜಿ ಮತ್ತು ಆಸ್ಥಾನಿಕರು ಮೂಕವಿಸ್ಮಿತರಾಗಿದ್ದರ ಜತೆಗೆ ಅವರ ನ್ಯಾಯತತ್ಪರತೆಯನ್ನೂ ಮೆಚ್ಚಿದರು. ತನ್ನ ತಪ್ಪಿಗೆ ಒದಗಬೇಕಿದ್ದ ಶಿಕ್ಷೆ ತಪ್ಪಿಸಿ, ಬದಲಿಗೆ ಉಂಬಳಿ ಗ್ರಾಮಗಳ ಬಹುಮಾನ ದೊರಕಿಸಿಕೊಟ್ಟ ರಾಮದಾಸರಿಗೆ ಕಬ್ಬಿನ ಗದ್ದೆಯ ಮಾಲೀಕ ಸಾಷ್ಟಾಂಗ ನಮಸ್ಕರಿಸಿದ. ಶಿಷ್ಯರು ಕಬ್ಬು ತಿಂದಿದ್ದಕ್ಕೆ ಗದ್ದೆಯ ಮಾಲೀಕನಿಂದ ಥಳಿತಕ್ಕೆ ಒಳಗಾಗುವಾಗಲೇ ರಾಮದಾಸರು ತಮ್ಮ ಗುರುತನ್ನು ಅವನಿಗೆ ಹೇಳಿಕೊಳ್ಳಬಹುದಿತ್ತು; ಆದರೆ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂಬುದನ್ನು ಸಾಕ್ಷೀಕರಿಸಲೆಂಬಂತೆ ಶಿಷ್ಯರೊಂದಿಗೆ ಅವರೂ ಶಿಕ್ಷೆ ಸ್ವೀಕರಿಸಿದರು. ತರುವಾಯ ಶಿವಾಜಿಯ ಆಸ್ಥಾನದಲ್ಲಿರುವಾಗ, ತಮ್ಮ ಪ್ರಭಾವ ಬಳಸಿ ಕಬ್ಬಿನ ಗದ್ದೆಯ ಮಾಲೀಕನಿಗೆ ಘೋರಶಿಕ್ಷೆಯನ್ನೇ ಕೊಡಿಸಲು ಅವರಿಗೆ ಸಾಧ್ಯವಿದ್ದರೂ, ‘ಎಂಥ ಅನಿವಾರ್ಯ ಪ್ರಸಂಗದಲ್ಲೂ ಕಳ್ಳತನ ಸಲ್ಲ’ ಎಂಬ ಜೀವನಪಾಠ ಹೇಳಿಕೊಟ್ಟ ಆತ ಬಹುಮಾನಕ್ಕೆ ಅರ್ಹನೇ ಹೊರತು ಪ್ರತೀಕಾರಕ್ಕಲ್ಲ ಎಂಬ ಉದಾತ್ತತೆ ಮೆರೆಯುವ ಮೂಲಕ ‘ಮಾನವೀಯತೆ’ ಮತ್ತು ‘ಕ್ಷಮೆ’ಯಂಥ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿದರು.


ದಯೆ, ಕರುಣೆ, ಕ್ಷಮೆ, ಮಾನವೀಯತೆಯಂಥ ಅನುಪಮ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಲ್ಲಿ, ಸ್ವಸ್ಥ ಸಮಾಜ ಎಂದು ತೋರಿಸಿಕೊಟ್ಟವರು ಸಂತ ರಾಮದಾಸರು...


ಕೃಪೆ:ವಿಜಯ ವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು