Saturday, August 9, 2025

 ಕಥೆ-819

ಜೀವನ ಮೌಲ್ಯ


 ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಜನಸಾಮಾನ್ಯರ ಸಂಕಷ್ಟಗಳ ಅರಿವು ಮೂಡಿಸಬೇಕೆಂದು ಹಳ್ಳಿಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಹಳ್ಳಿಯಲ್ಲಿ ಹೊಲದ ಬದುವಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಶಿಷ್ಯರಿಗೆ ಒಂದೆಡೆ ಹರಿದು ಹೋದ ಒಂದು ಜೊತೆ ಚಪ್ಪಲಿ ಮತ್ತು ಊಟದ ಡಬ್ಬಿಯಿರುವ ಚೀಲ ಕಾಣಿಸುತ್ತದೆ. ಅವರು ಗುರುಗಳ ಹತ್ತಿರ, “ಸರ್‌ ಇವು ಇಲ್ಲಿ ಕೆಲಸ ಮಾಡುತ್ತಿರುವವರದ್ದು ಅನ್ನಿಸುತ್ತದೆ, ಒಂದು ಕೆಲಸ ಮಾಡುತ್ತೇವೆ, ನಾವು ಇವೆರಡನ್ನೂ ಅಡಗಿಸಿಡುತ್ತೇವೆ. ಮರದ ಮರೆಯಲ್ಲಿ ಕುಳಿತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡೋಣ” ಎಂದರು ಹುಡುಗಾಟಿಕೆಯಿಂದ. 

ಶಿಕ್ಷಕರು ಏನನ್ನೂ ಹೇಳಲಿಲ್ಲ. ಈ ರೀತಿಯ ಕಿತಾಪತಿ ಏಕೆಂದು ಶಿಷ್ಯರನ್ನು ಬಯ್ಯಲೂ ಇಲ್ಲ. ಅದರ ಬದಲು ಮಾಮೂಲಿ ಧ್ವನಿಯಲ್ಲಿ, “ಅಲ್ಲ, ನೀವು ಹೇಳಿದ್ದನ್ನು ಸ್ವಲ್ಪ ಬದಲಾಯಿಸೋಣ. ಅವನ್ನು ಅಡಗಿಸಿಡುವ ಬದಲು ಆ ಚೀಲದಲ್ಲಿ 50 ರೂಪಾಯಿಯ ಎರಡು ನೋಟು ಹಾಕಿಡೋಣ. ಮತ್ತು ಮರೆಯಲ್ಲಿ ಕುಳಿತು ನೋಡೋಣ” ಎಂದರು. 

ಊಟದ ಸಮಯವಾಯಿತು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಂದವನು ಚೀಲದಲ್ಲಿದ್ದ ಹಣವನ್ನು ನೋಡಿ ಒಂದು ಕ್ಷಣ ಗಾಬರಿಯಾದ. ಸುತ್ತಮುತ್ತಲೂ ನೋಡಿದ. ಯಾರೂ ಇಲ್ಲ. ಆತ ಕಣ್ಣಲ್ಲಿ ನೀರು ತುಂಬಿಕೊಂಡು ಆಕಾಶದತ್ತ ಮುಖ ಮಾಡಿ ಜೋರಾಗಿ ಹೇಳಿದ, “ದೇವರೇ, ನೀನು ನನ್ನ ಮೊರೆ ಕೇಳಿದೆ. ಹೆಂಡತಿಯ ಮಾತ್ರೆಗೂ ಇವತ್ತು ನನ್ನ ಹತ್ತಿರ ದುಡ್ಡಿರಲಿಲ್ಲ, ಧನ್ಯವಾದಗಳು ನಿನಗೆ.” 

ಗುರುಗಳು ಮುಗುಳ್ನಗುತ್ತ ಶಿಷ್ಯರ ಕಡೆ ನೋಡಿದರು. ಶಿಷ್ಯರೆಲ್ಲ ಮೌನವಾಗಿದ್ದರು. ಅವರ ಕಣ್ಣಂಚಿನಲ್ಲಿ ನೀರಿತ್ತು. ಗುರುಗಳ ಹತ್ತಿರ “ಸರ್‌, ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕಿಂತ ಸಹಾಯ ಮಾಡುವುದರಲ್ಲಿ ಹೆಚ್ಚಿನ ಸಂತೋಷವಿದೆ ಎಂಬುದನ್ನು ಎಷ್ಟು ಸರಳವಾಗಿ ಹೇಳಿಕೊಟ್ಟಿರಿ” ಅಂದರು.

ಇನ್ನೊಬ್ಬರ ಪಾಲಿಗೆ ದೇವರಾಗುವ ಅವಕಾಶ ಪ್ರತಿಯೊಬ್ಬರಿಗೂ ಸಿಗುತ್ತದೆ. ಅದಕ್ಕಾಗಿ ಬಹಳ ದೊಡ್ಡ ದೊಡ್ಡ ಕೆಲಸಗಳನ್ನೇನೂ ಮಾಡಬೇಕೆಂದಿಲ್ಲ. ಸಣ್ಣ ಸಣ್ಣ ಸಹಾಯಗಳನ್ನು ನಮ್ಮ ನಮ್ಮ ವ್ಯಾಪ್ತಿಯಲ್ಲೇ ಮಾಡುವುದರ ಮೂಲಕ ಇತರರ ಮುಖದಲ್ಲಿ ಮುಗುಳ್ನಗೆ ಮೂಡಿಸಬಹುದು. 


ಇವತ್ತಿನ ಕಾರ್ಯಭಾರದ ಒತ್ತಡದಲ್ಲಿ ಮತ್ತು ಪಠ್ಯಕ್ರಮದ ಒತ್ತಡದಲ್ಲಿ ಅಂಕಗಳ ಬೆನ್ನು ಹತ್ತಿ, ಪಠ್ಯೆತರ ಜೀವನ ಮೌಲ್ಯಗಳ ವಿಷಯಗಳಿಗೆ ಅವಕಾಶ ಇಲ್ಲದಂತಾಗಿದೆ.. 


ಜೀವನ ಶಿಕ್ಷಣ ಮತ್ತು ನೀಡುವಂತಹ ಶಿಕ್ಷಕರ ಅವಶ್ಯಕತೆ ಬಹಳ ಇದೆ..

 ಹುಡುಗಾಟದಲ್ಲಿ ತರಲೆ ಮಾಡಹೊರಟಾಗ ಅವರನ್ನು ಬಯ್ಯದೇ , “ನೀನು ಮಾಡಬೇಕೆಂದಿರುವುದನ್ನೇ ಇನ್ನೂ ಉತ್ತಮವಾಗಿ, ವಿಭಿನ್ನವಾಗಿ ಹೇಗೆ ಮಾಡಬಹುದು ನೋಡು” ಎಂದು ತಿದ್ದಿ ಹೇಳಿಕೊಡುವವರು ಬೇಕಾಗಿದ್ದಾರೆ. ನಾವು ನಿಮ್ಮ ವಯಸ್ಸಿನಲ್ಲಿರುವಾಗ ಹಾಗೆ ಮಾಡುತ್ತಿದ್ದೆವು ಹೀಗೆ ಮಾಡುತ್ತಿದ್ದೆವು ಎಂಬ ಹಳೆಯ ಕಥೆಯನ್ನೇ ಮತ್ತೆ ಮತ್ತೆ ಹೇಳುತ್ತ, ಹೊಸ ಪೀಳಿಗೆಯನ್ನು ದೂಷಿಸುವ ಬದಲು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಬದುಕಿನ ದೈನಂದಿನ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಅವರಿಗೆ ಸರಳವಾಗಿ ಹೇಳಿಕೊಡುವ ಮಾರ್ಗದರ್ಶಕರು ಬೇಕಾಗಿದ್ದಾರೆ. ಮತ್ತು ಆ ಜವಾಬ್ದಾರಿಯನ್ನು ನಾವೆಲ್ಲ ನಿರ್ವಹಿಸಬೇಕಾಗಿದೆ. 

-ದೀಪಾ ಹಿರೇಗುತ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು