ಕಥೆ-853
ಗೆಲ್ಲುವುದು ಕಷ್ಟವಾದ ಕೆಲಸ, ಆದರೆ ಅಸಾಧ್ಯವೇನಲ್ಲ.
https://basapurs.blogspot.com
ಪ್ರತೀ ಸಲ ನಾವು ಏನನ್ನಾದರೂ ಮಾಡಬೇಕೆಂದು ಹೊರಟು ವಿಫಲರಾದಾಗ ಆ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುತ್ತೇವೆ. ಬೆಳಿಗ್ಗೆ ವಾಕ್ ಹೋಗುವುದಿರಬಹುದು, ಸಿಹಿ ತಿನ್ನುವುದನ್ನು ನಿಲ್ಲಿಸಲು ಸಾಧ್ಯವಾಗದಿರುವುದಿರಬಹುದು, ಓದಬೇಕೆಂದರೂ ಓದದೇ ಮೊಬೈಲ್ ನೋಡುವುದಿರಬಹುದು ಅದನ್ನು ಮಾಡಲು ಸಾಧ್ಯವಾಗದೇ ಇದ್ದಾಗ ಅದಕ್ಕೆ ನೆಪಗಳನ್ನು ಹುಡುಕುತ್ತೇವೆ. ಯಾರನ್ನಾದರೂ ಕಾರಣರನ್ನಾಗಿ ಮಾಡಬಹುದೇ ಎಂದು ನೋಡುತ್ತಿರುತ್ತೇವೆ. ಕಾರಣ ನಮ್ಮ ಸೋಲಿನ ಕಾರಣಗಳನ್ನು ಬೇರೆಯವರ ಮೇಲೆ ಹಾಕಿಬಿಟ್ಟರೆ ನಾವು ಗಿಲ್ಟ್ ನಿಂದ ತಪ್ಪಿಸಿಕೊಳ್ಳಬಹುದಲ್ಲ ! ಏಕೆಂದರೆ ನಮ್ಮ ವೈಫಲ್ಯಕ್ಕೆ ಬಹುತೇಕ ಸಂದರ್ಭದಲ್ಲಿ ನಾವೇ ಕಾರಣ ಎಂಬುದು ನಮಗೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಬೆಳಿಗ್ಗೆ ಎದ್ದು ಓದಲಿಲ್ಲ, ವಾಕ್ ಹೋಗಲಿಲ್ಲ ಎಂದರೆ ತಪ್ಪು ಅಲಾರಾಮ್‌ದ್ದಲ್ಲ, ಏಳದ ನಮ್ಮದು, ಎಬ್ಬಿಸಲೇ ಇಲ್ಲ ಎಂದು ಮನೆಯ ಸದಸ್ಯರ ಮೇಲೆ ದೂರುವುದು ಕೂಡ ಒಂದು ನೆಪ.
ಪ್ರತೀ ದಿನ ಬೇರೆಯವರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುತ್ತೇವೆ, ಸ್ಪರ್ಧೆ ಮಾಡುತ್ತೇವೆ. ಆದರೆ ದಿನವೂ ನಾವು ಸ್ಪರ್ಧೆ ಮಾಡಬೇಕಿರುವುದು ನಮ್ಮೊಂದಿಗೇ ಎನ್ನುವುದನ್ನು ಮರೆತೇ ಬಿಡುತ್ತೇವೆ. ದಿನವೂ ಬೆಳಿಗ್ಗೆ ಎದ್ದಾಗ ನಮ್ಮೆದುರು ಎರಡು ಆಯ್ಕೆಗಳಿರುತ್ತವೆ. ನಿನ್ನೆಗಿಂತ ಉತ್ತಮ ವ್ಯಕ್ತಿಯಾಗುವುದು, ಅಥವಾ ಹಾಗೆಯೇ ಇರುವುದು. ಬೇರೆಯವರೊಂದಿಗಿನ ಸ್ಪರ್ಧೆಯಲ್ಲಿ ನಾವು ಸೋಲಬಹುದು, ಆದರೆ ನಮ್ಮೊಂದಿಗಿನ ಸ್ಪರ್ಧೆಯಲ್ಲಿ ಸೋಲಬೇಕೋ ಗೆಲ್ಲಬೇಕೋ ಎಂಬ ನಿರ್ಧಾರ ನಮ್ಮದೇ ಆಗಿರುತ್ತದೆ. ಅಷ್ಟಕ್ಕೂ ನಿರಂತರವಾದ ದೊಡ್ಡ ಯುದ್ಧಗಳು ನಡೆಯುವುದು ನಮ್ಮೊಳಗೆ, ನಮ್ಮ ಪುಟ್ಟ ಮಿದುಳಿನಲ್ಲಿ. ಹೇ ಆರಾಮಾಗಿರು ಎಂದು ಹೇಳುವ ಧ್ವನಿ ಒಂದೆಡೆ, ಪ್ರಯತ್ನ ಪಡು ಎನ್ನುವ ಧ್ವನಿ ಇನ್ನೊಂದೆಡೆ. ಮೊದಲನೆಯ ದನಿ ಜೋಗುಳ ಹಾಡಿದಂತೆ ಹಿತವಾಗಿರುತ್ತದೆ. ಹಾಗಾಗಿ ಅದನ್ನು ಕೇಳುವವರು ಜಾಸ್ತಿ. ಪ್ರಯತ್ನಿಸು ಎನ್ನುವ ಧ್ವನಿ ಒರಟೆನಿಸುತ್ತದೆ. ಅದನ್ನು ಕೇಳುವವರು ಕಮ್ಮಿ. ಆದರೆ ಯಾವುದನ್ನು ಕೇಳಿದರೆ ಒಳ್ಳೆಯದು, ಅದರ ಪರಿಣಾಮ ಏನು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಇಲ್ಲಿ ಸೈನಿಕರೂ ನಾವೇ ಆದೇಶ ಕೊಡುವ ಕರ್ನಲ್ ಕೂಡ ನಾವೇ. ಹಾಗಾಗಿಯೇ ನನ್ನೊಳಗಿನ ಹೋರಾಟವನ್ನು ಗೆಲ್ಲುವುದು ಅತ್ಯಂತ ಕಷ್ಟವಾದ ಕೆಲಸ . ಆದರೆ ಅಸಾಧ್ಯವೇನಲ್ಲ.
ದೀಪಾಹಿರೇಗುತ್ತಿ
No comments:
Post a Comment