ಕಥೆ-876 ನಿಸರ್ಗದಿಂದ ಪ್ರತಿ ಕ್ಷಣವೂ ಹೊಸ ಪಾಠದ ಅನುಭವ.
https://basapurs.blogspot.com
ಅನುಭಾವಿ ಗುರು ಹಾಗೂ ಜ್ಞಾನದ ಹಸಿವೆಯುಳ್ಳ ಶಿಷ್ಯ. ಇವರ ಮಧ್ಯದಲ್ಲಿ ಅಮೂಲ್ಯವಾದ ಆಧ್ಯಾತ್ಮವಿದ್ಯೆ ಪ್ರವಹಿಸಿತ್ತು. ಇದು ಅವರ ಬಾಳನ್ನು ಬೆಳಗಲಿರುವ ವಿದ್ಯೆ. ವಸ್ತುಗಳನ್ನು ನಿರ್ಮಿಸುವ, ಸಂಗ್ರಹಿಸುವ, ವಿದ್ಯೆಯಿಂದ ಬದುಕಲು ಬರುತ್ತದೆಂದು ಹೇಳಲಾಗದು. ಬದುಕುವುದು ಒಂದು ಅದ್ಭುತ ಕಲೆ. ಅದನ್ನು ನಾವು ಬಲ್ಲ ಗುರುಗಳಿಂದಲೇ ಕಲಿಯಬೇಕು.
ಸತ್ಯ, ಶಮೆ, ದಮೆ, ಜಪ, ತಪ ಎಲ್ಲವನ್ನು ಸದ್ಗುರುಗಳು ತಮ್ಮ ಪ್ರವಚನದಲ್ಲಿ ಹೇಳಿಕೊಡುತ್ತಾರೆ. ಇದುವೇ ಅಧ್ಯಾತ್ಮವಿದ್ಯೆ. ನಿಸರ್ಗವು ಕೂಡಾ ಕ್ಷಣ ಕ್ಷಣವೂ ನಮಗೆ ಹೊಸ ಹೊಸ ಪಾಠ ಕಲಿಸಿಕೊಡುತ್ತದೆ. ಉದಯಿಸುವ ರವಿಯು ಕತ್ತಲೆಯ ಕೂಪದಲ್ಲಿ ಕೂತು ಕೊಳೆಯಬೇಡ ಎಂದು ಹೇಳುತ್ತದೆ. ಅರಳುವ ಹೂವು, ನಮ್ಮ ಬದುಕು ಮೃದು-ಮಧುರವೂ, ಸುಂದರವೂ ಸುಗಂಧಿತವೂ ಆಗಿರಲಿ ಎಂದು ಹೇಳುತ್ತದೆ. ಹೀಗೆ ನಾವು ಗುರುಗಳಿಂದ, ನಿಸರ್ಗದಿಂದ ಕಲಿತ ವಿದ್ಯೆಯು ನಮಗೆ ಹೆಜ್ಜೆ-ಹೆಜ್ಜೆಗೂ ಉಪಯೋಗಕ್ಕೆ ಬರುತ್ತದೆ. ಇದ್ದುದರಲ್ಲಿಯೇ ಸಂತಸದಿಂದ ಬದುಕುವುದನ್ನು ಕಲಿಸುತ್ತದೆ. ಶಾಲೆಯಲ್ಲಿ ಲೌಕಿಕ ವಿದ್ಯೆಗಳಾದ ಗಣಿತ ರಸಾಯನಶಾಸ್ತ್ರ, ಭೌತಶಾಸ್ತ್ರ ಮೊದಲಾದವುಗಳು ಅಪರೂಪಕ್ಕೆ ಬಳಸುತ್ತೇವೆ ವಿನಾ, ಕ್ಷಣ ಕ್ಷಣಕ್ಕೂ ಬಳಸುವುದಿಲ್ಲ!
ನಾವು ಹೇಗೆ ಬದುಕಬೇಕೆಂಬುದನ್ನು ಈಶಾವಾಸ್ಯೋಪನಿಷತ್ತಿನ ಒಂದು ಮಂತ್ರವು ತುಂಬಾ ಸ್ವಾರಸ್ಯಕರವಾಗಿ ತಿಳಿಸುತ್ತದೆ. ಈ ಪ್ರಪಂಚದಲ್ಲಿ ಯಾವುದಕ್ಕೂ ಅತಿಯಾಶೆ ಮಾಡಬೇಡ. ಇಲ್ಲಿರುವ ಸಿರಿಸಂಪದವೆಲ್ಲವೂ ಯಾರದೆಂದು ತಿಳಿದಿರು? ಎರಡು ಕೈಗಳಿರುವಾಗ, ನಾಲ್ಕು ಕೈಗಳನ್ನು, ಎರಡು ಕಣ್ಣುಗಳಿರುವಾಗ ನಾಲ್ಕು ಕಣ್ಣುಗಳನ್ನು ಬಯಸಿದರೆ ಹೇಗೆ? ಇದರರ್ಥ ನಾವು ಹೆಚ್ಚಿನದನ್ನು ಗಳಿಸಬಾರದು ದುಡಿಯಬಾರದು ಎಂದಲ್ಲ. ಮೊದಲು ಇದ್ದುದರಲ್ಲಿ ಸಂತಸದಿಂದ ಇರಲು ಕಲಿಯಬೇಕು.
ಕೃಪೆ- ನೆಟ್
No comments:
Post a Comment