ಕಥೆ-860
ನಿಸರ್ಗದ ಕೌತುಕವನ್ನು ಸವಿಯಲು ಚಂದ್ರಗ್ರಹಣವನ್ನು ನೋಡಲೇಬೇಕು ಮತ್ತು ಅದರಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಇಲ್ಲ.
ಗ್ರಹಣ ಎಂದ ಕೂಡಲೇ ಬಹುತೇಕ ಜನರಲ್ಲಿ ಭಯ, ಆತಂಕ, ಅದು ಶುಭದಿನವಲ್ಲ, ಆದಿನ ಶುಭಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆ ಈಗಲೂ ಇದೆ. ಒಂದು ವಸ್ತುವನ್ನು ಮತ್ತೊಂದು ವಸ್ತು ಮರೆಮಾಡುವ ಅಥವಾ ಒಂದು ವಸ್ತುವಿನ ನೆರಳು ಮತ್ತೊಂದು ವಸ್ತುವಿನ ಮೇಲೆ ಬೀಳುವ ಕ್ರಿಯೆಯೇ ಗ್ರಹಣ! ಎಂದು ವಿಜ್ಞಾನಿಗಳು, ಅನುಭವಿಗಳು, ಸಂಶೋಧಕರು ಸತತವಾಗಿ ಹೇಳುತ್ತಾ ಬಂದಿದ್ದರೂ ಇಂದಿಗೂ ಅನೇಕರಲ್ಲಿ ಈ ಭಯ ಮತ್ತು ತಪ್ಪು ಗ್ರಹಿಕೆ ಮನೆ ಮಾಡಿದೆ. ನಮ್ಮ ವಿಶ್ವದಲ್ಲಿ ಎಲ್ಲವೂ ಚಲನೆಯಿಂದ ಕೂಡಿದೆ. ಅದರಲ್ಲಿ ನಾವಿರುವ ಆಕಾಶ ಗಂಗೆ ಗೆಲಾಕ್ಸಿ, ಅದರಲ್ಲಿರುವ ನಮ್ಮ ಸೌರವ್ಯೂಹ, ಈ ಸೌರವ್ಯೂಹದಲ್ಲಿ ಗ್ರಹಗಳು, ನಕ್ಷತ್ರಗಳು ಎಲ್ಲವೂ ಚಲನೆಯಿಂದ ಕೂಡಿವೆ. ಇದರ ಭಾಗವಾಗಿಯೇ ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ತಿರುಗುತ್ತಿವೆ. ಸೂರ್ಯನ ಸುತ್ತ ಭೂಮಿ ಒಂದು ಸುತ್ತು ಬರಲು ಒಂದು ವರ್ಷ ಬೇಕಾದರೆ ಭೂಮಿಯ ಸುತ್ತ ಚಂದ್ರ ಸುತ್ತಲು ಅಂದಾಜು ಒಂದು ತಿಂಗಳು ಸಾಕು. ಈ ತಿರುಗುವಿಕೆಯ ಕಾರಣದಿಂದಾಗಿಯೇ ಹಗಲು ರಾತ್ರಿ. ಗ್ರಹಣಗಳು ಮತ್ತು ಸಂಕ್ರಮಣಗಳು ಸಂಭವಿಸುತ್ತವೆ. ಚಂದ್ರನ ಮೇಲೆ ಮಾನವ ಕಾಲಿಟ್ಟು ವರ್ಷಗಳೇ ಕಳೆದಿವೆ. ಭಾರತ ಚಂದ್ರಯಾನ ಮೂರರ ಮೂಲಕ ಚಂದ್ರನಿಗೆ ಸಂಬಂಧಿಸಿದ ಅನೇಕ ಅಧ್ಯಯನಗಳನ್ನು ಕೈಗೊಂಡಿದೆ. ಆದರೆ ಗ್ರಹಣದ ಸಂದರ್ಭಬಂದಾಗ ಮಾತ್ರ ಬಹುತೇಕ ಜನರ ಚಿಂತನೆ ಬೇರೆಯದೇ ಆಗುತ್ತದೆ. ಇಂದಿಗೂ ಚಂದ್ರನ ಮೇಲೆ ಯಾರೂ ಹೋಗಿಯೇ ಇಲ್ಲ ಎಂದೂ ವಾದಿಸುವವರಿದ್ದಾರೆ.
ಇಂದು ಸೆಪ್ಟೆಂಬರ್ 7ರಂದು ಸಂಭವಿಸುವ ಸಂಪೂರ್ಣ ಅಥವಾ ಖಗ್ರಾಸ ಚಂದ್ರಗ್ರಹಣ ಒಂದು ಅಪರೂಪದ ಖಗೋಳ ವಿದ್ಯಾಮಾನವಾಗಿದೆ. ರಾತ್ರಿ 9.57 ಗಂಟೆಗೆ ಪ್ರಾರಂಭವಾಗುವ ಚಂದ್ರಗ್ರಹಣ ನಡುರಾತ್ರಿ 1.26ಕ್ಕೆ ಮುಕ್ತಾಯವಾಗಲಿದೆ.
ಗ್ರಹಣದ ಮೂಢನಂಬಿಕೆಯ ಭಾಗವಾಗಿರುವ ಗ್ರಹಣ ಕಾಲದಲ್ಲಿ ರಾಹು ಕೇತುಗಳು ಸೂರ್ಯ-ಚಂದ್ರರನ್ನು ನುಂಗುತ್ತವೆ, ವಿಶೇಷವಾದ ಕಿರಣಗಳು ಬರುವುದರಿಂದ ಆ ಸಂದರ್ಭದಲ್ಲಿ ಗ್ರಹಣ ವೀಕ್ಷಿಸಬಾರದು, ಗ್ರಹಚಾರ ಫಲದಿಂದಾಗಿ ಕೆಲವು ರಾಶಿಯವರಿಗೆ ಕೆಟ್ಟದ್ದಾಗುತ್ತದೆ. ಅದರಿಂದ ಪಾರಾಗಲು ಶಾಂತಿ ಮಾಡಿಸಿಕೊಳ್ಳಿ, ಭೂಮಿಯ ಮೇಲೆ ಪ್ರಳಯವಾಗುತ್ತದೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಹರಡಿ ಜನರನ್ನು ಭಯಭೀತರನ್ನಾಗಿ ಮಾಡುವ ಪ್ರಯತ್ನ ಇಂದಿನಿಂದ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ವಿಜ್ಞಾನಿಗಳು, ವಿಜ್ಞಾನಾಸಕ್ತರು, ಜನ ವಿಜ್ಞಾನ ಚಳುವಳಿ ಕಾರ್ಯಕರ್ತರು, ವಿಚಾರವಾದಿಗಳು ಜನರಿಗೆ ವಾಸ್ತವ ಸಂಗತಿಯನ್ನು ವಿವರಿಸಿ ಭಯರಹಿತವಾಗಿ ಚಂದ್ರ ಗ್ರಹಣವನ್ನು ವೀಕ್ಷಿಸುವಂತೆ ಪ್ರೇರೇಪಿಸಲಿದ್ದಾರೆ. ಚಂದ್ರಗ್ರಹಣವನ್ನು ಬರಿ ಕಣ್ಣಿನಿಂದ ನೋಡಬಹುದು ಮತ್ತು ಅದರಿಂದ ಕಣ್ಣಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ರಾಹು ಕೇತುಗಳ ಕಥೆ ಪುರಾಣವಾಗಿದ್ದು ಆಕರ್ಷಕವಾಗಿದೆಯಷ್ಟೆ ಆದರೆ ಅದು ವಾಸ್ತವವಲ್ಲ.
ಗ್ರಹಣ ಕಾಲದಲ್ಲಿ ಆಹಾರವಾಗಲಿ, ನೀರಾಗಲಿ ಯಾವುದೂ ವಿಷವಾಗುವುದಿಲ್ಲ. ಈ ಭಯವನ್ನು ಹೋಗಲಾಡಿಸಲು ಗ್ರಹಣವನ್ನು ಸುರಕ್ಷಿತವಾಗಿ ತೋರಿಸುವುದರ ಜೊತೆಗೆ ಸಾಮೂಹಿಕವಾಗಿ ಆಹಾರವನ್ನು ಸೇವಿಸುವ ವ್ಯವಸ್ಥೆಯನ್ನು ಸೆಪ್ಟೆಂಬರ್ 7ರಂದೂ ಸಹ ಮಾಡಬಹುದಾಗಿದೆ. ನಿಸರ್ಗದ ಈ ಅಪರೂಪದ ಘಟನೆಯನ್ನು ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ವೀಕ್ಷಿಸಿ ನಿಸರ್ಗದ ಕೌತುಕವನ್ನು ಸವಿಯಲಿ ಎಂಬುದು ನಮ್ಮೆಲ್ಲರ ಆಶಯವಾಗಲಿ. ಮೂಢನಂಬಿಕೆಯಿಂದ ಹೊರಬರೋಣ, ತಯಾರಾಗಿ ರಾತ್ರಿ 9:57 ಕ್ಕೆ ತಪ್ಪದೇ ಚಂದ್ರಗ್ರಹಣ ವೀಕ್ಷಿಸಿ ....
ಕೃಪೆ-ಈ ಬಸವರಾಜ್
ಸಂಗ್ರಹ- ಶಂಕರಗೌಡ ಬಸಾಪೂರ

No comments:
Post a Comment