ಕಥೆ-889
ದೊಡ್ಡವರಾಗೋದು ಗುಣಗಳಿಂದ
https://basapurs.blogspot.com/
ಮನುಷ್ಯ ದೊಡ್ಡದೊಡ್ಡ ಮಾತುಗಳನ್ನು ಆಡುವುದರಿಂದ ದೊಡ್ಡವರಾಗುವುದಿಲ್ಲ. ಯಾರನ್ನೋ ಟೀಕಿಸುವುದರಿಂದ ದೊಡ್ಡವನಾಗಲಾರ. ದುಡ್ಡಿನ ಬಲದಿಂದ, ಅಡ್ಡದಾರಿಯಿಂದ ದೊಡ್ಡವರಾಗಲು ಸಾಧ್ಯವಿಲ್ಲ. ದೊಡ್ಡ ಮನಸ್ಸು ಮತ್ತು ಗುಣಗಳಿಂದ ದೊಡ್ಡತನ ಪ್ರಾಪ್ತವಾಗುತ್ತದೆ. ಸಮಾಜದಲ್ಲಿ ಸೇವಾ ಸತ್ಕಾರ್ಯಗಳನ್ನು ಮಾಡುವುದರಿಂದ ದೊಡ್ಡವರೆನಿಸಿಕೊಳ್ಳಲು ಸಾಧ್ಯವಾದೀತು. ನೀರು ಎರೆದವರಿಗೂ, ಕಡಿಯ ಬಂದವರಿಗೂ ಭೇದಭಾವ ಎಣಿಸದೇ ಮರ ಹಣ್ಣು, ನೆರಳು ನೀಡುವುದನ್ನು ಕಾಣುತ್ತೇವೆ. ನೀರು ಉಣಿಸಿದ ಕಡಿಯ ಬಂದವನಿಗೂ ಮುಳ್ಳನ್ನೇ ಕೊಡುವ ಕಂಟಿಯ ಬುದ್ದಿ ಯಾರಲ್ಲಿಯೂ ಬರಬಾರದು. ನೆರವು ನೀಡಿದವರಿಗೆ ನೆರವು ನೀಡುವುದು ಧರ್ಮ. ನೆರವು ನೀಡಿದವರಿಗೆ ಕೆಡುಕು ಮಾಡುವ ದುಷ್ಟ ಬುದ್ದಿ ಯಾರಲ್ಲಿಯೂ ಬರಬಾರದು.
ಯಾವ ವಿಶ್ವಾಸ ಹೋದರೂ ಚಿಂತೆಯಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅಷ್ಟೆಶ್ವರ್ಯ ಹೋದರೂ ಹೋಗಲಿ, ಆದರೆ ಧೈರ್ಯವನ್ನು ಕಳೆದುಕೊಳ್ಳಬಾರದು. ದೇಹದ ಶಕ್ತಿ ಉಡುಗಿದರೂ ಛಲ ಉಡುಗಬಾರದು. ಕೀರ್ತಿ ಗಳಿಸದಿದ್ದರೂ ಚಿಂತೆಯಿಲ್ಲ, ಆದರೆ ಸ್ಫೂರ್ತಿ ಕಳೆದುಕೊಳ್ಳಬಾರದು. ಸ್ವಾವಲಂಬಿಗಳಾಗಿ ಜನರನ್ನು ಬೆಳೆಸದೇ ಪರಾವಲಂಬಿಯಾಗಿ ಬಾಳಲು ಕಲಿಸುತ್ತಿರುವುದು ಒಳ್ಳೆಯದಲ್ಲ. ಕೊಟ್ಟಹಣ ಕರಗಿ ಹೋಗುತ್ತದೆ. ಕಟ್ಟಿಕೊಟ್ಟ ಮನೆ ಬೀಳುತ್ತದೆ. ಇತ್ತ ಬಟ್ಟೆ ಹರಿಯುತ್ತದೆ. ಕೆಟ್ಟ ಹವ್ಯಾಸಗಳು ಬೆಳೆಯುತ್ತಿವೆ. ಸೋಮಾರಿತನದಲ್ಲಿ ಮನುಷ್ಯ ಮುಳುಗಿ ಸಾಹಸ ಸಾಧನೆಯನ್ನು ಮರೆಯುತ್ತಿದ್ದಾನೆ. ತತ್ವರಹಿತ ರಾಜಕಾರಣ, ಶ್ರಮವಿಲ್ಲದ ಸಂಪತ್ತು, ನೀತಿಹೀನ ವ್ಯಾಪಾರ, ಶೀಲಶೂನ್ಯ ಶಿಕ್ಷಣ, ಮನಸ್ಸಾಕ್ಷಿಯಿಲ್ಲದ ಭೋಗ, ಮನುಷ್ಯತ್ವ ರಹಿತ ವಿಜ್ಞಾನ, ತ್ಯಾಗವಿಲ್ಲದ ಪೂಜೆ ಇರಬಾರದೆಂದು ಗಾಂಧೀಜಿಯವರ ಮಾತನ್ನು ಮರೆತುದನ್ನು ಕಾಣುತ್ತೇವೆ. ವಿಷಮತೆಯ ವಿಷವೃಕ್ಷ ಕಡಿದಷ್ಟು ಬೆಳೆಯುತ್ತಿದೆ. ಅಸ್ಪ ದೃಶ್ಯತೆಯ ನಂಜಿನ ಬೆಳೆ ಕತ್ತರಿಸಿದಷ್ಟು ಮತ್ತೆ ಮತ್ತೆ ಚಿಗುರುತ್ತಿದೆ. ಬಡತನದ ರಕ್ತ ಬೀಜ ತುಂಡರಿಸಿದಷ್ಟು ಉದ್ದಂಡವಾಗಿ ಬೆಳೆಯುತ್ತಿದೆ.
ಎಲ್ಲವೂ ತುಟ್ಟಿಯಾದರೂ ಮನುಷ್ಯ ಮಾತ್ರ ಅಗ್ಗವಾಗುತ್ತಿದ್ದಾನೆ. ಭೂಮಿ ಆಕಾಶದ ನಡುವಣ ಅಂತರ ಕಡಿಮೆಯಾಗುತ್ತಿದ್ದರೂ ಮನುಷ್ಯ ಮನುಷ್ಯನ ನಡುವಿನ ಅಂತರ ಹೆಚ್ಚುತ್ತಿದೆ. ಜ್ಞಾನ ವಿಜ್ಞಾನಗಳು ಬೆಳೆಯುತ್ತಿದ್ದರೂ ಜನರಲ್ಲಿ ಪ್ರೀತಿ ವಿಶ್ವಾಸಗಳು ಇಲ್ಲದಂತಾಗಿವೆ. ಕಲೆ ಸಾಹಿತ್ಯಗಳ ವ್ಯಾಪ್ತಿ ಹೆಚ್ಚುತ್ತಿದ್ದರೂ ಅವುಗಳ ಗುಣ ಘನತೆ ಕಡಿಮೆಯಾಗುತ್ತಿವೆ. ಅರ್ಥ ಅಕ್ಷರ ಬೆಳಗುವಂತೆ, ಪ್ರೀತಿ ಬಾಳನ್ನು ಬೆಳಗುವಂತೆ, ಧೈರ್ಯ ಶೌರ್ಯವನ್ನು ಬೆಳಗುವಂತೆ, ವಿನಯ ವಿದ್ಯೆ ಬೆಳಗುವಂತೆ, ದಾನ ಧನಿಕರನ್ನು ಬೆಳಗುವಂತೆ,ಆಡಳಿತ-ಆಚರಣೆಯಲ್ಲಿ ಪ್ರಾಮಾಣಿಕತೆ ಬೆಳೆಯಲಿ.
-ರಂಭಾಪುರಿ ಶ್ರೀಗಳು ಬಾಳೆಹೊನ್ನೂರು
No comments:
Post a Comment