ಕಥೆ-893- ಆಯುಧ ಪೂಜೆ
https://basapurs.blogspot.com/
ನವರಾತ್ರಿಯ ಕೊನೆಯ ದಿನದ ಆಚರಣೆ ಮಹಾನವಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವ. ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆಗಾಗಿ ಬಳಸಲಾಗುವ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕೂಡ ಆಯುಧ ಪೂಜೆಯಂದು ಪೂಜಿಸಲಾಗುತ್ತದೆ.
ಮೈಸೂರಿನ ವಿಜಯ ದಶಮಿಗೆ ವಿಶೇಷ ಪಾರಂಪರಿಕ ಇತಿಹಾಸವಿದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿದ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.
ಮಹಾಭಾರತದ ಉಲ್ಲೇಖ-
ಇನ್ನು ಮಹಾಭಾರತದಲ್ಲಿ ಆಯುಧ ಪೂಜೆಯ ಸ್ಪಷ್ಟ ಉಲ್ಲೇಖವಿದ್ದು, ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸುತ್ತಾರೆ. ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸುತ್ತಾರೆ. ಈ ಅಜ್ಞಾತವಾಸದ ಅಂತಿಮ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ. ಅಂದರೆ ತಮ್ಮ ಅಜ್ಞಾತವಾಸ ಮುಗಿದ ದಿನದಂದು ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.ಎಂಬ ನಂಬಿಕೆಯ ದ್ಯೋತಕವಾಗಿದೆ...
ಇನ್ನು ಆಯುಧ ಪೂಜೆಯ ಆರಂಭ ನೋಡುವುದಾದರೆ, ಮೊದಲೆಲ್ಲ ಯುದ್ಧಕ್ಕೆ ಹೋಗುತ್ತಿದ್ದ ರಾಜಕುಟುಂಬಸ್ಥರು, ನವರಾತ್ರಿಯ ಒಂಭತ್ತನೇ ದಿನದಂದು ಆಯುಧಗಳು ದೈವ ಸಮಾನ ಎಂಬ ಭಾವನೆಯಿಂದ ಪೂಜೆ ಸಲ್ಲಿಸುತ್ತಿದ್ದರು.
ಆಯುಧಗಳು ಕೇವಲ ಹೊರಗಡೆ ಮಾತ್ರ ಇಲ್ಲ ನಮ್ಮ ಒಳಗೂ ಇವೆ..
ಅಂದರೆ ನಮ್ಮೊಳಗೆ ನ್ಯೂನತೆ ಮತ್ತು ಆಯುಧಗಳು ಎರಡೂ ಇವೆ, ನಮ್ಮ ನ್ಯೂನತೆಗಳಿಂದಾಗಿ ಆಯುಧಗಳು ನಮಗೆ ಗೋಚರಿಸುತ್ತಿಲ್ಲ...
ಬೂದಿ ಮುಚ್ಚಿದ ಕೆಂಡದಲ್ಲಿ ಕೆಂಡ ಆಯುಧವಾದರೆ ಬೂದಿ ಅದರ ನ್ಯೂನತೆ.. ನಮ್ಮ ಕೆಂಡದಂತಹ ಆಯುಧಗಳ ಮೇಲೆ ಬೂದಿಯಂತಹ ನ್ಯೂನತೆಗಳ ಪೊರೆ ಆವರಿಸಿಕೊಂಡಿವೆ.. ನಮ್ಮಲ್ಲಿರುವ ನ್ಯೂನತೆಗಳು ನಮ್ಮಲ್ಲಿನ ಆಯುಧಗಳನ್ನು ಆವರಿಸಿಕೊಂಡಿರುವುದರಿಂದ ಆಯುಧಗಳ ಇದ್ದು ಇಲ್ಲದಂತಾಗಿರುತ್ತದೆ...
ಭಯ, ಸಂಕೋಚ & ಆಲಸ್ಯ ಇತ್ಯಾದಿಗಳು ನಮ್ಮ ನ್ಯೂನತೆಗಳಾದರೆ... ಧೈರ್ಯ, ಉತ್ಸಾಹ, ಪರಿಶ್ರಮ ಇತ್ಯಾದಿಗಳು ನಮ್ಮ ಆಯುಧಗಳಾಗಿರುತ್ತವೆ..
ನ್ಯೂನತೆಗಳನ್ನು ಸರಿಸಿದರೆ ಆಯುಧಗಳಿಗೆ ಬಲ ಸಿಗುತ್ತದೆ.. ಆಗ ಅಂದುಕೊಂಡ ಕಾರ್ಯ ಸರಳವಾಗುತ್ತದೆ....
ಎಲ್ಲರಿಗೂ ಆಯುಧ ಪೂಜೆಯ ಶುಭಾಶಯಗಳು🙏💐💐
-ಶಂಕರಗೌಡ ಬಸಾಪೂರ
💐💐💐💐💐
No comments:
Post a Comment