ಕಥೆ-897
ಸಂಬಂಧಗಳು ಸದೃಢಗೊಳ್ಳಲಿ
https://basapurs.blogspot.com/
ಮನುಷ್ಯನ ಹೃದಯದಷ್ಟು ಫಲವತ್ತಾದ ಸ್ಥಳ ಇನ್ನೊಂದಿಲ್ಲ, ಅಲ್ಲಿ ಏನನ್ನು ಬೆಳೆಯಬೇಕು ಪ್ರೀತಿಯೋ ದ್ವೇಷವೋ ಆಯ್ಕೆ ಅವರವರದೇ ಆಗಿರುತ್ತದೆ. ಅವಶ್ಯಕತೆ ಇದ್ದಾಗ ನಾವು ಇತರರಿಗೆ ಚೆನ್ನಾಗಿ ಕಾಣುತ್ತೇವೆ. ಅವಶ್ಯಕತೆ ಇಲ್ಲದಿರುವಾಗ ವಿರೋಧಿಗಳಾಗಿ ಕಾಣಿಸುತ್ತೇವೆ. ಬದುಕಿನ ಯಾವ ದಿನವೂ ವ್ಯರ್ಥವಲ್ಲ, ಒಳ್ಳೆಯ ದಿನಗಳಿಂದ ಸಂತೋಷ ಸಿಗುತ್ತದೆ. ಕೆಟ್ಟ ದಿನಗಳಿಂದ ಅನುಭವ ಸಿಗುತ್ತೆ. ವಿದ್ಯೆ ಕಲಿತ ನಂತರ ಗುರುಗಳನ್ನು ಮರೆಯಬಾರದು. ಸಂಪತ್ತು ಬಂದಾಗ ಸ್ನೇಹವನ್ನು ಮರೆಯಬಾರದು. ಹೆಂಡತಿ ಬಂದ ನಂತರ ಹೆತ್ತವರನ್ನು ಮರೆಯಬಾರದು. ಸಮಾಜದಲ್ಲಿ ಗೌರವ ಘನತೆ ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು.
ಮಾತಿಗೆ ಬೆಲೆ ಇಲ್ಲ ಅಂದಾಗ ಮನುಷ್ಯ ಮೌನವಾಗಿರಬೇಕು. ಮೌನಕ್ಕೂ ಬೆಲೆ ಇಲ್ಲ ಅಂದಾಗ ಆ ಜಾಗದಿಂದ ದೂರ ಹೋಗುವುದು ಒಳ್ಳೆಯದು. ಎಲ್ಲಿಯ ತನಕ ಎಲ್ಲವನ್ನು ಸಹಿಸಿ ಸುಮ್ಮನಿರುತ್ತೇವೋ ಅಲ್ಲಿಯತನಕ ನಾವು ಎಲ್ಲರಿಗೂ ಒಳ್ಳೆಯವರಾಗಿ ಇರುತ್ತೇವೆ. ಒಂದು ವೇಳೆ ಅನುಭವಿಸಿದ ಅನ್ಯಾಯವನ್ನು ಬಾಯಿ ಬಿಟ್ಟೆವೋ ಆಗ ಎಲ್ಲರಿಗಿಂತ ನಾವೇ ಹೆಚ್ಚು ಕೆಟ್ಟವರಾಗುತ್ತೇವೆ. ಯಾರ ವಿಷಯದಲ್ಲೂ ಅತಿಯಾದ ಆತ್ಮ ವಿಶ್ವಾಸ, ನಂಬಿಕೆ, ಪ್ರೀತಿ ಒಳ್ಳೆಯದಲ್ಲ, ಯಾಕೆಂದರೆ ಯಾರು ಯಾವಾಗ ಹೇಗೆ ಬದಲಾಗುತ್ತಾರೆ ಎಂದು ಹೇಳುವುದು ಕಷ್ಟ..
ಜೀವನದಲ್ಲಿ ಮನುಷ್ಯ ಎರಡು ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ಯಾರನ್ನೂ ಅತಿಯಾಗಿ ಪ್ರೀತಿಸಬಾರದು. ಎರಡನೆಯದು ಯಾರನ್ನೂ ಅತಿಯಾಗಿ ನಂಬಬಾರದು. ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿನ್ನ ಬೆಲೆ ತಿಳಿಯಬೇಕಾದರೆ ಮೊದಲು ನೀನು ಅವರನ್ನು ನಿರ್ಲಕ್ಷಿಸುವುದು ಒಳ್ಳೆಯದು. ಮನುಷ್ಯನಲ್ಲಿ ಬದಲಾವಣೆ ಇರಬೇಕು. ಆದರೆ ಇನ್ನೊಬ್ಬರನ್ನು ಕಳೆದುಕೊಳ್ಳುವಷ್ಟು ಬದಲಾಗಬಾರದು. ಆಕಾಶ ತಲುಪುವ ಹಂಬಲದ ಗಿಡ ತನ್ನ ಬೇರುಗಳನ್ನು ಅಳಕ್ಕೆ ಇಳಿಸಬೇಕಾಗುತ್ತದೆ. ಮನುಷ್ಯ ದೊಡ್ಡವನೆನಿಸಿಕೊಳ್ಳಲು ಒಳನೋಟ ಹೆಚ್ಚಿಕೊಳ್ಳಬೇಕಾಗುತ್ತದೆ. ತಾನೇ ಸಂಪಾದಿಸಿದ ಸಂಪತ್ತು ಉತ್ತಮ. ತಂದೆ ಗಳಿಸಿದ ಸಂಪತ್ತು ಮಧ್ಯಮ. ಸಹೋದರ ಗಳಿಸಿದ ಹಣ ಕನಿಷ್ಠ
ಮನುಷ್ಯ ಧರ್ಮಕ್ಕೆ ತಲೆಬಾಗಬೇಕೆ ಹೊರತು ಅವಿವೇಕಿಗಳಿಗೆಲ್ಲ ಸಂಬಂಧವೆಂದರೆ ವಯಸ್ಸು ದೂರ. ಸಂಪರ್ಕಗಳನ್ನು ಮೀರಿದ ಸ್ಥಿತಿ. ವಿಶ್ವಾಸ ನಿಷ್ಠೆಗಳಿಂದ ಮಾತ್ರ ನಿಜ. ಸಂಬಂಧ ಉಳಿಯಲು ಸಾಧ್ಯ. ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ನಿನ್ನ ನಂಬಿ ಬಂದವರಿಗೆ ಜೀವ ಕೊಡು. ನಿನ್ನ ಬಿಟ್ಟು ಹೋಗೋರಿಗೆ ದಾರಿ ಬಿಡು. ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯುತ್ತದೆ. ವಿಶ್ವಾಸ ಇಲ್ಲದಿದ್ದರೆ ಸಂಬಂಧ ಮುಗಿಯುತ್ತದೆ. ನಮಗೆ ತೊಂದರೆ ಕೊಟ್ಟವರನ್ನೆಂದೂ ಮರೆಯಬಾರದು. ನಾವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದ್ದೇ ಅಂಥವರಿಂದ.. ಬೆಳಕಿಗೆ ಮಹತ್ವ ಬಂದಿದ್ದೇ ಕತ್ತಲೆಯಿಂದ, ಸುಖಕ್ಕೊಂದು ಅರ್ಥ ಬರುವುದೇ ಕಷ್ಟದಿಂದ. ಬೇಕಾದರೆ ಬೆರೆತು ನಡೆ, ಸಾಕಾದರೆ ಸರಿದು ನಡೆ. ಎರಡೂ ಬೇಡವಾದರೆ ಸುಮ್ಮನೆ ನಡೆ, ಬೇರೆಯವರ ಒಳ್ಳೆಯದಲ್ಲದ ಸ್ವಭಾವವನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ಅಂಥವರಿಂದ ದೂರ ಇರುವುದು ಒಳ್ಳೆಯದು. ಹೂ ಆರಳಿ ಸೌಂದರ್ಯ ಸೂಸುವುದು ಇನ್ನೊಂದು ಹೂವಿನ ಪೈಪೋಟಿಗಲ್ಲ, ಇದು ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೊಂದು ಪಾಠ...
-ರಂಭಾಪುರ ಶ್ರೀಗಳು ಬಾಳೆಹೊನ್ನುರ
No comments:
Post a Comment