ಕಥೆ-932
ಜೀವನವೇ ಒಂದು ಹಬ್ಬ
https://basapurs.blogspot.com/
ಒಂದು ಊರಲ್ಲಿ ಜಾತ್ರೆಯನ್ನು ಮಾಡುವಾಗ ನೆಲದಲ್ಲಿ ಒಂದು ಹಸಿತಳದ ಗಡಿಗೆಯನ್ನು ಹುಗಿಯುತ್ತಾರೆ. ಜನರೆಲ್ಲ ಬಂದು ಆ ಗಡಿಗೆಗೆ ನೀರು ಹಾಕುತ್ತಾರೆ. ಅದರಿಂದ ಗಡಿಗೆಯ ಹಸಿತಳ ಕರಗಿ ಹೋಗುತ್ತದೆ. ಆಗ ಜಾತ್ರೆಯಲ್ಲಿದ್ದ ಜನರೆಲ್ಲರೂ ನೀರು ಹಾಕಿದರೂ ಆ ಗಡಿಗೆ ತುಂಬುವುದೇ ಇಲ್ಲ.
ನಮ್ಮ ಆಸೆಗಳೆಂದರೆ ತಳವಿಲ್ಲದ ಗಡಿಗೆ ಇದ್ದಂತೆ. ಜೀವನದ ತುಂಬ ಗಳಿಸಿದರೂ ಅದೇನು ತುಂಬುವುದಿಲ್ಲ. ನಮಗೇನು ಸಂತಸ ಸಂತೃಪ್ತಿ ಕೊಡುವುದಿಲ್ಲ. ನಮ್ಮ
ಮನಸ್ಸು ಒಂದು ಅರೆಬೆಂದ ಕೊಡ ಇದ್ದಹಾಗೆ!
ನಮ್ಮ ಭೂಮಿಯು ಎಕರೆಗೆ ನೂರು ಟನ್ ಬೆಳೆದರೂ ನಮಗೆ ಸಮಾಧಾನವಿಲ್ಲ. ವ್ಯಾಪಾರದಲ್ಲಿ ಕೋಟಿ ಸಂಪಾದಿಸಿದರು ಸಂತೃಪ್ತಿ ಎನ್ನುವುದು ಇಲ್ಲ.. ನಮಗಾಗಿ ಸತ್ಯಂ ಶಿವಂ ಸುಂದರಂ ಆಗಿರುವ ಸೃಷ್ಟಿ ಇದ್ದರೂ, ಪಶುಪಕ್ಷಿಗಳಿಗೆ ಇಲ್ಲದಿರುವ ತನು, ಮನ, ಬುದ್ಧಿ, ಬಲ ಎಲ್ಲ ನಮಗೆ ಇದ್ದರೂ ನಾವು ಬೇಡುವುದನ್ನು ಬಿಡುವುದಿಲ್ಲ ಮತ್ತು ಸಾಕೆನ್ನುವುದಿಲ್ಲ...
“ತುಂಬಿದ ಕೆರೆ ಬಾವಿಗಳು ತುಂಬಿದಂತಿರುವವೇ ನಂಬಿರಬೇಡ ಲಕ್ಷ್ಮೀಯನ್ನು ಬಡತನವು ಬೆಂಬಿಡದೆ ಬಹುದು ಸರ್ವಜ್ಞ!”
ವರಕವಿ ಸರ್ವಜ್ಞ ಹೇಳುವಂತೆ ಈ ಜಗತ್ತಿನಲ್ಲಿ ಸಿರಿಸಂಪದ ಯಾವುದೂ ಸ್ಥಿರವಲ್ಲ. ಇದರರ್ಥ ನಾವು ಸಂಪತ್ತು
ಗಳಿಸಬಾರದೆಂದಲ್ಲ. ಆದರೆ ಅತಿಯಾಸೆ ಇರಬಾರದಷ್ಟೇ. ಗಣ್ಯರ ಮಾನ್ಯರ ತುಲಾಭಾರ ಮಾಡಿ ಅವರ ದೇಹವನ್ನು ತೂಗುತ್ತೇವೆ. ನಮ್ಮ ಬದುಕಿಗೆ ಎಂದಾದರೂ ತೂಗಿ ಬೆಲೆ
ಕಟ್ಟಲಾದೀತೆ. ನಮ್ಮ ಬದುಕೇ ಒಂದು ಅಮೂಲ್ಯ ಸಿರಿ ಎಂದು ನಾವು ಸದಾ ಸಂತೃಪ್ತಿಯಿಂದ ಸಂತಸದಿಂದ ಇರಬೇಕಿದೆ. ಆಗ ನಮ್ಮ ಜೀವನವೇ ಒಂದು ಹಬ್ಬವಾಗುತ್ತದೆ. ನಾವಿರುವ ಈ ಭೂಮಂಡಲ ಸ್ವರ್ಗದಂತಾಗುತ್ತದೆ.
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment