Tuesday, December 16, 2025

 ಕಥೆ-975

ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕಥನ (ಭಾಗ-1)

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬುದು ಅನುಭವದ ಮಾತು.... ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪ್ರವಾಸವು ಒಂದು ಪ್ರಮುಖ ಪಾತ್ರ ವಹಿಸುತ್ತದೆ.. ಈ ವರ್ಷ ನಮ್ಮ ಪ್ರೌಢಶಾಲೆ ಪ್ರವಾಸಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಜಲಪಾತಗಳ ತವರೂರಾದ ಉತ್ತರ ಕನ್ನಡ ಜಿಲ್ಲೆಯನ್ನು..


ಉತ್ತರ ಕನ್ನಡ ಜಿಲ್ಲೆಗೂ ನನಗೂ ಒಂದು ಅವಿನಾಭಾವ ಸಂಬಂಧ... ಏಕೆಂದರೆ ನಾನು ಶಿಕ್ಷಕ ವೃತ್ತಿ ಆರಂಭಿಸಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಉತ್ತರ ಕನ್ನಡ ಜಿಲ್ಲೆ ಸಿರ್ಸಿ ತಾಲೂಕಿನ ಸಂತೊಳ್ಳಿ ಎಂಬ ಪುಟ್ಟ ಗ್ರಾಮದಿಂದ.. ಎರಡು ವರ್ಷದ ಸೇವಾ ಭಾಗ್ಯ ಸವಿ ಸವಿ ನೆನಪಾಗಿ ಅಚ್ಚಳಿಯದೆ ಉಳಿದಿದೆ... ಅಲ್ಲಿನ ಶೀತ ವಾತಾವರಣ ಹವಾಮಾನ ಒಗ್ಗದ ಕಾರಣ ನಾನು ನನ್ನ ಜಿಲ್ಲೆಗೆ ಬರಬೇಕಾಯಿತು... ನನ್ನ ಅನುಭವದ ಪ್ರಕಾರ ಅಲ್ಲಿನ ಶೈಕ್ಷಣಿಕ ವಾತಾವರಣಕ್ಕೂ ಮತ್ತು ನಮ್ಮ ಜಿಲ್ಲೆಯ ಶೈಕ್ಷಣಿಕ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ... ನಮ್ಮಲ್ಲಿ ಮಕ್ಕಳ ನಿರಂತರ ಹಾಜರಾತಿಯ ಕೊರತೆ ಶೈಕ್ಷಣಿಕ ಪ್ರಗತಿಗೆ ದೊಡ್ಡ ಹೊಡೆತ.. ಅಲ್ಲಿ ಹಾಗಿಲ್ಲ ಮಕ್ಕಳ ನಿರಂತರ ಹಾಜರಾತಿ ಇದ್ದೇ ಇರುತ್ತದೆ... ಓದಿದರೆ ಓದಲಿ, ಇಲ್ಲದಿದ್ದರೆ ಹೊಲ-ಮನೆ ಮಾಡಿಕೊಂಡು ಹೋಗಲಿ ಎಂಬ ಪಾಲಕರ ಮನೋಭಾವನೆಗಳು, ಮಕ್ಕಳಲ್ಲಿ ಓದಲೇಬೇಕೆಂಬ ಮನೋಭಾವನೆಯ ಕಿಡಿಯನ್ನು ಹೊತ್ತಿಸುವಲ್ಲಿ ವಿಫಲವಾಗುತ್ತವೆ .. ಆದರೆ ಮಲೆನಾಡು ಮತ್ತು ಸಮುದ್ರದ ದಂಡೆಯನ್ನು ಒತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯು ಬೆಳೆಗಳನ್ನು ಬೆಳೆಯಲಿಕ್ಕೆ ಬಯಲು ಪ್ರದೇಶವಲ್ಲ.. ಜಮೀನಿನ ಕೊರತೆ ಇದೆ, ಹೀಗಾಗಿ ಮಕ್ಕಳಲ್ಲಿ ಓದಿ ಒಂದು ದಾರಿ ಹಿಡಿಯಲೇಬೇಕು ಇಲ್ಲವೇ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕೆಂಬ ಮನೋಭಾವನೆಗಳು ಮಕ್ಕಳಲ್ಲಿ ಓದುವ ಮನೋಭಾವನೆಯನ್ನು ಹೆಚ್ಚಿಸುತ್ತವೆ.. ಹೀಗಾಗಿ ಓದುವ ಸ್ಪರ್ಧಾಮನೋಭಾವನೆ ಕಂಡುಬರುತ್ತದೆ.. ಸ್ವಾವಲಂಬಿಯಾಗಿ ಬದುಕಬೇಕೆಂಬ ಛಲವನ್ನು ಮಕ್ಕಳಲ್ಲಿ ಹುಟ್ಟಿಸುತ್ತದೆ...


ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸನ, ಪ್ರಾದೇಶಿಕ ಭಿನ್ನತೆ, ಹೀಗೆ ಹತ್ತು ಹಲವಾರು ಅಂಶಗಳ ಜೊತೆಗೆ, ಮನೋಲ್ಲಾಸಕ್ಕಾಗಿ, ಹಿರೇಮ್ಯಾಗೇರಿ ಪ್ರೌಢಶಾಲೆ, 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಡಿಸೆಂಬರ್ 14 ರಂದು ಬೆಳಿಗ್ಗೆ 6.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಡೆಗೆ ಪ್ರಯಾಣ ಬೆಳೆಸಿತು.. ಹುಬ್ಬಳ್ಳಿ ದಾಟಿದ ಮೇಲೆ ಮಲೆನಾಡ ಸೆರಗನ್ನು ಹೊದ್ದುಕೊಂಡ ಧಾರವಾಡ, ನಂತರ ಮನ್ಸೂರ ಸಮೀಪದ ಹಳ್ಳಿಯ ಮಾವಿನ ತೋಪು ಹೊದ್ದ ಜಮೀನಿನಲ್ಲಿ ಖುಷಿಖುಷಿಯಾಗಿ ಮೊದಲೇ ತಯಾರಿಸಿಕೊಂಡು ಬಂದಿದ್ದ ಉಪಹಾರ ಸೇವಿಸಿ, ದಾಂಡೇಲಿ ಜಾಡು ಹಿಡಿದು ಮಲೆನಾಡಿಗೆ ಪ್ರವೇಶ ಆದೆವು.

 

ದಾಂಡೇಲಿ ಅಂದರೆ ಸಾಹಸ ಮತ್ತು ಸೌಂದರ್ಯದ ಸಂಗಮ..   


ಉತ್ತರ ಕರ್ನಾಟಕದ ಹಸಿರು ಸೆರಗು ಹೊದ್ದಿರುವ ದಾಂಡೇಲಿ.. ದಾಂಡೇಲಿ ಎಂದರೆ ವಿಶ್ರಾಂತಿಗರ ಮತ್ತು ಸಾಹಸಪ್ರಿಯರ ಸ್ವರ್ಗ. ಹಸಿರು ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ, ರೋಮಾಂಚಕ ಆಟಗಳು ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ವಾತಾವರಣದ ಅನುಭವವಾಗುವುದು ದಾಂಡೇಲಿಯಲ್ಲಿ. ಹೆಬ್ಬಾವಿನಂತೆ ಹರಿಯುತ್ತಿರುವ ಕಾಳಿ ನದಿಯು ಅನೇಕ ಜೀವಸಂಕುಲಕ್ಕೆ ಆಸರೆಯಾಗಿದೆ.. ಜೀವವೈವಿಧ್ಯತೆಯ ತಾಣವಾಗಿದೆ.. ನಾಯಿಕೊಡೆಯಂತೆ ಹೇಳುತ್ತಿರುವ ಈ ಕಮರ್ಷಿಯಲ್ ರೆಸಾರ್ಟ್ ಗಳ ಅಬ್ಬರವು ಜೀವವೈವಿಧ್ಯತೆಗೆ ಧಕ್ಕೆ ತರದಿರಲಿ ಎಂದೆನಿಸುತ್ತದೆ.. ಜೀವವೈವಿಧ್ಯತೆ ಸುಸ್ಥಿರ ಪರಿಸರವನ್ನು ನಿರ್ಮಿಸುತ್ತದೆ ನಮಗೆ ವಿವಿಧತೆಯಲ್ಲಿ ಏಕತೆಯನ್ನು ಪಾಠವನ್ನು ಸಾರುತ್ತಿವೆ.. ಬದುಕಿ ಬದುಕಲು ಬಿಡಿ ಎಂಬ ಸಂದೇಶ ನಮಗೆ ಸಾರಿದಂತಿವೆ..

 

ದಾಂಡೇಲಿ ಸುತ್ತಮುತ್ತ ಅಂದಾಜು 430 ರೆಸಾರ್ಟ್ಗಳಿವೆ ಎಂದು ಅಂದಾಜಿಸಲಾಗಿದೆ.. 


ನಮ್ಮ ಪ್ರಯಾಣ ಆರಂಭವಾದುದು ಕಾಳಿ ನದಿಯ ಸಮೀಪದಲ್ಲಿರುವ ಒಂದು ಸುಂದರ ರೆಸಾರ್ಟ್ನಲ್ಲಿ. ಎತ್ತರದ ಮರಗಳು, ಪಕ್ಷಿಗಳ ಕಲರವ, ತಾಜಾ ಗಾಳಿ—ಎಲ್ಲವೂ ಮನಸ್ಸನ್ನು ಮುದಗೊಳಿಸಿತು. ಮಧ್ಯಾಹ್ನದ ಊಟ ಮಾಡಿ ಅಡ್ವೆಂಚರಸ್ ಆಕ್ಟಿವಿಟೀಸ್ ಕಡೆ ಪಯಣ ಸಾಗಿತು...


 ಲೈಫ್ ಜಾಕೆಟ್ ನೊಂದಿಗೆ ಮಕ್ಕಳ ಜೊತೆ ಕಾಳಿ ನದಿಯ ಬೋಟಿಂಗ್ ವಿಶೇಷ ಅನುಭವ ನೀಡಿತು.. ಶಾಂತವಾಗಿ ಹರಿಯುವ ನದಿಯಲ್ಲಿ ಬೋಟು ಸಾಗುತ್ತಿದ್ದಂತೆ ಎರಡೂ ಬದಿಯ ಕಾಡು, ಕೆಲವೊಮ್ಮೆ ಕಾಣಿಸುವ ಮೊಸಳೆಗಳಿವೆ ಎಚ್ಚರಿಕೆಯ ಬೋರ್ಡು, ಪಕ್ಷಿಗಳ ಹಾರಾಟ—ಎಲ್ಲವೂ ಒಂದು ನೈಸರ್ಗಿಕ ಚಲನಚಿತ್ರದಂತೆ ಕಂಡಿತು.

ನೀರಿನ ಮೇಲಿನ ಪ್ರತಿಬಿಂಬ, ತಂಪಾದ ಗಾಳಿ ಮತ್ತು ನಿಶ್ಶಬ್ದ… ಮನಸ್ಸಿಗೆ ಅದ್ಭುತವಾದ ಶಾಂತಿ ಮತ್ತು ಉತ್ಸಾಹವನ್ನು ನೀಡಿತು. 


ನಂತರದ ರಾಪ್ಟಿಂಗ ಮೈ ಜುಮ್ ಎನ್ನಿಸುವಂಥದ್ದು .. ಈ ಅಡ್ವೆಂಚರ್ ಆಕ್ಟಿವಿಟೀಸ್ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊ ಎಂಬ ಸಂದೇಶ ನೀಡಿದಂತಿತ್ತು...


ಪ್ರಕೃತಿ ಪ್ರೀತಿಸುವವರು & ಸಾಹಸ ಪ್ರವೃತ್ತಿಯುಳ್ಳವರಿಗೆ ಉತ್ತಮ ಸ್ಥಳ ಈ ದಾಂಡೇಲಿ... ರೆಸಾರ್ಟ್‌ನಲ್ಲಿ ದೊರಕಿದ ತರ ತರಹದ ಆಹಾರ, ಬೆಂಕಿ, ಸುತ್ತಲಿನ ರಾತ್ರಿ ಮಾತುಕತೆ, ಚೆಸ್ ಕೇರಂ ಬಿಲ್ವಿದ್ಯೆ, ಇತರೆ ಕಲಾತ್ಮಕ ಆಟಗಳು ಮಕ್ಕಳ ಸ್ಪರ್ಧಾತ್ಮಕ ಮನೋಭಾವನೆ ಉಳಿಸಿಕೊಳ್ಳಿ ಎಂಬ ಸಂದೇಶ ಸಾರಿದವು.. ತಲೆಯ ಮೇಲಿನ ಆಗಸದ ಹೊದಿಕೆಯಲ್ಲಿನ ನಕ್ಷತ್ರಗಳ ಚೆಲುವು ಪ್ರವಾಸವನ್ನು ಇನ್ನಷ್ಟು ವಿಶೇಷಗೊಳಿಸಿದವು...ರಾತ್ರಿ 12 ಆಗಿತ್ತು, ನಿದ್ರೆಗೆ ಶರಣು ಎಂದೆವು.. 

*(ಮುಂದುವರಿಯುವುದು*)

-ಶಂಕರಗೌಡ ಬಸಾಪೂರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು