ಕಥೆ-976
ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕಥನ (ಭಾಗ-2)
(15 ಡಿಸೆಂಬರ್ 2025)
ಬೆಳಗೆದ್ದು ಯಾರ ಮುಖವ ನಾನು ನೋಡಲಿ ಎಂಬಂತೆ ಹಸಿರು ಪ್ರಕೃತಿಯ ಮುಖ ನೋಡೋದೆ ಬಲುಚಂದ.. ಬೆಳಗಿನ ಮಂಜು ಮುಸುಕಿದ ಹಸಿರು ಕಾಡಿನ ಮಧ್ಯೆ ಈ ಫಾರೆಸ್ಟ್ ಟ್ರಿಕಿಂಗ್ ಮನಸ್ಸಿಗೆ ಮುದ ನೀಡುತ್ತದೆ ಮತ್ತು ಹೊಸ ಉತ್ಸಾಹ ತುಂಬಿದ ಅನುಭವ ಆಗುತ್ತದೆ.. ಸ್ನಾನದ ನಂತರ ಸೂರ್ಯನ ಬೆಚ್ಚನೆಯ ರಶ್ಮಿಗಳೊಂದಿಗೆ, ಹಿತಕರ ಶಾಖ ನೀಡುವ ಬೆಂಕಿ ಬಾಜು ಬಿಸಿ ಚಹ ಸೇವನೆ ಎನರ್ಜಿ ಬೂಸ್ಟ್ ಮಾಡಿದಂತಿತ್ತು...
ಮಕ್ಕಳೊಂದಿಗೆ ಉಪಹಾರ ಸೇವನೆ ನಂತರ, ನಮ್ಮ ಬಸ್ಸು ಉಳವಿ ಕಡೆಗೆ ಹೆಜ್ಜೆ ಹಾಕಿ ಸಾಗಿತು... ಕಿರಿದಾದ ತಿರುವುಮರುವುಳ್ಳ ರಸ್ತೆಗಳು, ಎರಡೂ ಬದಿಗಳಲ್ಲಿ ಎತ್ತರದ ಮರಗಳು, ಮಧ್ಯೆ ಮಧ್ಯೆ ಕೇಳಿಸುವ ಹಕ್ಕಿಗಳ ಇಂಪಾದ ಧ್ವನಿ ಮುದ ನೀಡುತ್ತಿತ್ತು..
ಉಳವಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ ಪುಟ್ಟ ಗ್ರಾಮ.. ಸುಂದರ ಪ್ರಕೃತಿ ಮತ್ತು ಶಾಂತತೆಯ ಅನನ್ಯ ಸಂಗಮವಾಗಿದೆ. ಉಳವಿಯ ಪ್ರಮುಖ ಆಕರ್ಷಣೆ ಎಂದರೆ ಚನ್ನಬಸವೇಶ್ವರ ದೇವಸ್ಥಾನ, ಅಲ್ಲದೇ ಬಸವಣ್ಣನವರ ಸಮಕಾಲೀನರಾದ ಚನ್ನಬಸವಣ್ಣನವರು.. ಮಹಾನ್ ಯೋಗಿ ಮತ್ತು ಸಮಾಜ ಸುಧಾರಕರಾದ ಚನ್ನಬಸವಣ್ಣನವರು ಇಲ್ಲೇ ತಪಸ್ಸು ಮಾಡಿದರೆಂಬ ನಂಬಿಕೆ ಇದೆ. "ಮಾನವೀಯತೆಯೇ ಧರ್ಮ, ಶ್ರಮವೇ ಪೂಜೆ"
ಎಂಬ ಬದುಕಿನ ಸಂದೇಶವನ್ನು ಉಳವಿ ಚನ್ನಬಸವಣ್ಣನವರು ಸಾರಿದ್ದಾರೆ.
ದೇವಾಲಯದ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಗುಂಪು ಫೋಟೋ ತೆಗೆಸಿ, ಪ್ರಸಾದ ನಿಲಯಕ್ಕೆ ಭೋಜನಕ್ಕಾಗಿ ಹೋದೆವು.. ಸಾಮಾನ್ಯವಾಗಿ ಪ್ರಸಾದ ಅಂದಾಗ ಅನ್ನ ಸಾರು..., ಆದರೆ ಉಳಿವಿಯಲ್ಲಿ ಚಪಾತಿ, ಸ್ವೀಟ್ ಮತ್ತು ಅನ್ನ-ಸಾರ ಪ್ರಸಾದ.. ಮಕ್ಕಳೊಂದಿಗೆ ಸವಿದು ಕಾರವಾರಕ್ಕೆ ಹೋಗಲು ಮತ್ತೆ ಬಸ್ ಏರಿದೆವು...
ಮಕ್ಕಳ ಸರಿಗಮಪ ಹಾಡುಗಳೊಂದಿಗೆ ಬಸ್ ಕಾರವಾರ ಕಡೆ ಹೆಜ್ಜೆ ಹಾಕಿತು..
ಹಸಿರು ಕಾಡುಗಳ ನಡುವೆ ಸಾಗುವ ರಸ್ತೆಯಲ್ಲಿ ಹಕ್ಕಿಗಳ ಕಲರವ ಜೊತೆಗೆ ನಮ್ಮ ಮಕ್ಕಳ ಸರಿಗಮಪ ಕಲರವ ಸಿಂಕ್ ಆದಂತೆ ಆಗಿತ್ತು...
ಕಾರವಾರಕ್ಕಿಂತ ಮುಂಚೆ ಬರುವ ಸಾದಾಶಿವಗಡದಲ್ಲಿ ಕಾಳಿ ನದಿ ಸಮುದ್ರವನ್ನು ಸೇರುವ ಸ್ಥಳದ ದೃಶ್ಯ ಅತೀ ಮನಮೋಹಕವಾಗಿತ್ತು.
ಮೇಲಿನಿಂದ ಕಾಣುವ ನದಿ–ಸಮುದ್ರದ ಸಂಗಮ ನಮ್ಮ ಮನಸ್ಸಿನಲ್ಲಿ ಉಳಿಯುವಂತಹ ಅನುಭವ ನೀಡಿತು.
ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ಸುಂದರ ನಗರವೇ ಕಾರವಾರ ಸಮುದ್ರ, ಬೆಟ್ಟ, ನದಿ ಹಾಗೂ ಹಸಿರು ಪ್ರಕೃತಿಯ ಸಂಗಮವಾಗಿದೆ. ಕಾರವಾರದಲ್ಲಿ ಮೊದಲು ಮಕ್ಕಳೊಂದಿಗೆ ಚಹಾ ಸೇವನೆ ಮಾಡಿ, ನಂತರ ಭಾರತದ ರಕ್ಷಣಾ ಪಡೆಯ ಮ್ಯೂಸಿಯಂ ಕಡೆ ಪ್ರಯಾಣ ಬೆಳೆಸಿದೆವು..
ಕಾರವಾರವು ನೌಕಾಪಡೆಗೆ ಪ್ರಮುಖ ಕೇಂದ್ರ.. ಕದಂಬ INS ಪ್ರದೇಶದ ಸಮೀಪದಲ್ಲಿರುವ ಮ್ಯೂಸಿಯಂನಲ್ಲಿ ಭಾರತೀಯ ರಕ್ಷಣಾ ಪಡೆಯ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ವಿಮಾನ ಹಾಗೂ ಸಮುದ್ರ ನೌಕೆ ಪ್ರದರ್ಶನದಲ್ಲಿವೆ. ಇವು ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆ.
ಯುದ್ಧ ವಿಮಾನ
ಅದು ಭಾರತೀಯ ವಾಯುಪಡೆಯು ಬಳಕೆ ಮಾಡಿದ ಯುದ್ಧ ವಿಮಾನ.. ಅದನ್ನು 1971ರ ಯುದ್ಧದಲ್ಲಿ ಮತ್ತು ಇತರೆ ಆಪರೇಷನ್ಗಳಲ್ಲಿ ಬಳಸಲಾಗಿದ್ದು, ಅದರ ಅಂದಾಜು ಬೆಲೆ 2700 ನೂರು ಕೋಟಿ ರೂ.ಗಳು ಎಂದು ಗೈಡ್ ಮಾಹಿತಿ ನೀಡಿದರು.. ಪೈಲೆಟ್ ಚೇರ್, ಕಾಕ ಪಿಟ್ ವಿಭಾಗ, ಪೈಲೆಟ್ ಪಕ್ಕದಲ್ಲಿರುವ ಬ್ಲಾಕ್ ಬಾಕ್ಸ್, ರೆಡಾರ್ ಆಪರೇಟಿಂಗ್ ವಿಭಾಗ, ಫೈರಿಂಗ್ ವಿಭಾಗ.. ಯುದ್ಧ ತಂತ್ರಗಳ ಮಾಹಿತಿ ಮತ್ತು ವಿಮಾನದ ಭಾಗ ಮತ್ತು ಕಾರ್ಯಗಳನ್ನು ಮಕ್ಕಳಿಗೆ ತಿಳಿಯುವಂತೆ ಗೈಡ್ ವಿವರಿಸಿದ್ದು ಖುಷಿ ನೀಡಿತು..
ಮಕ್ಕಳಲ್ಲಿ, ದೇಶದ ವಿಮಾನ ರಕ್ಷಣಾ ವ್ಯವಸ್ಥೆ, ಪೈಲಟ್‌ಗಳ ಧೈರ್ಯ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪರಿಚಯ ಮಾಡಿಸಿದಂತಾಯಿತು. ಭಾರತೀಯ ಸೇನೆಯ ಶೌರ್ಯ ಮತ್ತು ತ್ಯಾಗದ ಪ್ರತೀಕ ಈ ಯುದ್ದ ವಿಮಾನ...
ಭಾರತೀಯ ನೌಕಾಪಡೆಯ ಸೇವೆಯಲ್ಲಿ ಇದ್ದ ಯುದ್ಧ ನೌಕೆ ( INS Chapal). ಸಮುದ್ರ ನೌಕೆ (ನೇವಿ ಶಿಪ್)
ಅಲ್ಲಿ ಪ್ರದರ್ಶನದಲ್ಲಿರುವುದು
ಅದು ಸಮುದ್ರ ಗಡಿಗಳ ರಕ್ಷಣೆ, ಶತ್ರು ನೌಕೆಗಳ ಪತ್ತೆ, ಕರಾವಳಿ ಭದ್ರತೆ ಮೊದಲಾದ ಕಾರ್ಯಗಳಲ್ಲಿ ಈ ನೌಕೆ ಮಹತ್ವದ ಪಾತ್ರ ವಹಿಸಿದೆ.
ಈ ಮ್ಯೂಸಿಯಂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಕ್ಷಣಾ ಕ್ಷೇತ್ರದ ಅರಿವು ಬೆಳೆಸಲು ಉಪಯುಕ್ತ ಆಯ್ತು. ಗುಂಪು ಫೋಟೋ ತೆಗೆಸಿ ಮುಂದೆ ಸಾಗಿದಾಗ ಅಲೆಗಳ ಸದ್ದು ಕೇಳುತ್ತಿತ್ತು....
ಅಲೆಯೋ ಅಲೆ ಎದೆಯೊಳಗೆ, ಅರಬ್ಬಿ ಸಮುದ್ರ ಕಿನಾರೆಯೊಳಗೆ.. ಎಂಬಂತೆ ಮ್ಯೂಸಿಯಂ ಪಕ್ಕದಲ್ಲಿನ ಅರಬ್ಬಿ ಸಮುದ್ರದ ಅಲೆಗಳು ನಮ್ಮನ್ನು ಕೈಬೀಸಿ ಕರೆಯುತ್ತಿದ್ದವು...
ಅಲೆಗಳು ದಂಡೆಗೆ ಬಂದು ಅಪ್ಪಳಿಸುವ ಆಟದ ದೃಶ್ಯ ನೋಡುವುದೇ ಒಂತರ ಖುಷಿ... ಮಕ್ಕಳಂತೂ ಸಮುದ್ರದ ದಂಡೆಯ ಅಲೆಗಳ ಜೊತೆ ಆಟವಾಡಿ, ಮರಳಿನ ಮೇಲೆ ಹೆಸರ ಬರೆದು ಸಂಭ್ರಮಿಸಿದರು.. ವಿಶೇಷವಾಗಿ ಜೆಲ್ಲಿ ಫಿಶ್ ಗಳಂತೂ ಆಕರ್ಷಣೀಯವಾಗಿದ್ದವು, ನಂತರ ಕಪ್ಪೆ ಚಿಪ್ಪುಗಳು, ಶಂಕು ಹುಳು ವೀಕ್ಷಣೆ, ಶಂಕುಗಳ ಸಂಗ್ರಹ ಮಾಡಿದರು. ಈ ಕಡಲ ಕಿನಾರೆಯ ಹೆಸರೇ ರಬೀಂದ್ರನಾಥ ಟಾಗೋರ್ ಕಡಲತೀರ..
ಕಡಲ ತೀರದ ಸೂರ್ಯಸ್ತ ವೀಕ್ಷಣೆಗೆ, ನಡುಗೆಡ್ಡೆ ಅಡ್ಡ ಕಾರಣ, ಒಂದು ಕಿಲೋಮೀಟರ್ ಸಮುದ್ರದಂಡೆ ಗುಂಟ ನಡೆಯಬೇಕಾಯಿತು.. ಮಕ್ಕಳೊಂದಿಗೆ ಸುಂದರ ಸೂರ್ಯಾಸ್ತ ನೋಡಲು ಅವಕಾಶ ಒದಗಿ ಬಂತು... ಆಕಾಶವು ಕೇಸರಿ, ಕೆಂಪು, ಹಳದಿ, ನೇರಳೆ ಬಣ್ಣಗಳಿಂದ ಅಲಂಕರಿತವಾಗಿ,
ಸಮುದ್ರದ ಅಲೆಗಳ ಮೇಲೆ ಬೀಳುವ ಸೂರ್ಯಕಿರಣಗಳು ಚಿನ್ನದ ಹಾಳೆಯಂತೆ ಮಿನುಗುತ್ತವೆ. ಆ ಸಮಯದಲ್ಲಿ ಸೂರ್ಯನು ನಿಧಾನವಾಗಿ ಸಮುದ್ರದ ಅಂಚಿಗೆ ಇಳಿಯುವ ದೃಶ್ಯ ನೋಡಿದಾಗ ಮನಸ್ಸು ತಾನೇ ಶಾಂತವಾಗುತ್ತದೆ. ಸೂರ್ಯಾಸ್ತದ ದೃಶ್ಯವನ್ನು ನೋಡುತ್ತಾ, “ಪ್ರಕೃತಿಯ ಮಡಿಲಲ್ಲಿ ಕಳೆದ ಕ್ಷಣಗಳು ಜೀವನಕ್ಕೆ ಹೊಸ ಉತ್ಸಾಹ ನೀಡುತ್ತವೆ.
ಅಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಬೆಳಕಿನ ವಕ್ರೀಭವನ ಮತ್ತು ಬೆಳಕಿನ ಚದುರುವಿಕೆಯ ಒಂದು ಪ್ರಾಯೋಗಿಕತೆಯನ್ನು ಅನುಭವಿಸಿದರು...
ನಂತರ ಸಮುದ್ರ ವ್ಯಾಪಾರ, ಮೀನುಗಾರರು, ಅವರು ಬಳಸುವ ಉಪಕರಣಗಳ ಪರಿಚಯವೂ ಮಕ್ಕಳಿಗೆ ಆಯಿತು.. ಕಣ್ಣಂಚಲ್ಲಿ ಆರದ ಸೂರ್ಯಾಸ್ತದ ಪ್ರತಿಬಿಂಬ ಹೊತ್ತು ಗೋಕರ್ಣದ ಕಡೆ ನಮ್ಮ ಬಸ್ಸು ಪಯಣ ಬೆಳೆಸಿತು..
ಸೂರ್ಯಸ್ತದ ಪ್ರತಿಬಿಂಬದ ಖುಷಿ ಹೊತ್ತ ಮಕ್ಕಳು ತಮ್ಮ ಮನೆಯಿಂದ ತಂಡ ಸ್ನಾಕ್ಸ್ ಸೇವನೆಗೆ ಸಿದ್ದರಾದರು.. ಮೊದಲು ಪ್ರೀತಿಯಿಂದ ಶಿಕ್ಷಕರಿಗೆ ನೀಡಿ, ನಂತರ ಶೇರ್ ಮಾಡಿ ಸ್ವೀಟ್ಸ್ ಮಂಡಕ್ಕಿ ಅವಲಕ್ಕಿಗಳು ಸೇವಿಸಲು ಆರಂಭಿಸಿದರು...
ಗೋಕರ್ಣವು ಅರಬ್ಬೀ ಸಮುದ್ರದ ತೀರದಲ್ಲಿ, ಕಾರವಾರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಪುರಾಣಗಳ ಪ್ರಕಾರ, ರಾವಣನು ಕೈಲಾಸದಿಂದ ತಂದ ಆತ್ಮಲಿಂಗ ಇಲ್ಲಿಯೇ ಸ್ಥಾಪಿತವಾಗಿದೆ ಎಂಬ ನಂಬಿಕೆ ಇದೆ. ಇಲ್ಲಿ ಇರುವ ಮಹಾಬಲೇಶ್ವರ ದರ್ಶನಕ್ಕೆ ಪುರುಷರು ಪಂಚೆ ತೊಟ್ಟರಿಬೇಕೆಂದಾಗ, ಹುಡುಗಿಯರಿಗೆ ಮಾತ್ರ ದರ್ಶನ ಭಾಗ್ಯ ಸಿಕ್ಕಿತು, ಆದರೆ ಹುಡುಗರಿಗೆ ಪ್ರಸಾದ ಭಾಗ್ಯ ಸಾಧ್ಯವಾಯಿತು... ಮಕ್ಕಳಿಗೆ ಸ್ವಲ್ಪ ಸಮಯ ಪರ್ಚೆಸಿಂಗ್ ಅವಕಾಶ ನೀಡಲಾಯಿತು... ನಂತರ ಎಲ್ಲಾ ಮಕ್ಕಳಿಗೂ ಊಟ ಮಾಡಿಸಲೆಂದು ಉತ್ತಮ ಹೋಟೆಲ್ ಹುಡುಕುತ್ತಾ ಬಂದಾಗ ಅಂಕೋಲಾದಲ್ಲಿ ಅನಿಲ್ ಗಾವ್ಕರ್ ಹೋಟೆಲ್ ಮಾಲೀಕ, ಮೂಲತಃ ಶಿಕ್ಷಕರಾದ ಕಾರಣ ನಮ್ಮೆಲ್ಲ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ರಿಜನೇಬಲ್ ರೇಟ್ ನಲ್ಲಿ ಬಿಸಿಬಿಸಿಯಾದ ಊಟದ ವ್ಯವಸ್ಥೆ ಮಾಡಿದರು...ಊಟ ಹೊಟ್ಟೆ ತುಂಬಿತ್ತು, ಕಣ್ಣು ನಿದ್ದೆ ಬಯಸಿತ್ತು.. ನಿದ್ದೆ ಕಂಗಳ ಮಕ್ಕಳನ್ನು ಮೊತ್ತ ಬಸ್ಸು ಘಟ್ಟವನ್ನ ಏರುತ್ತಾ, ಕತ್ತಲೆಯಲ್ಲಿ ಮಲೆನಾಡಿನ ಮಿನುಗು ಹುಳದಂತೆ ಮರಳಿ ಊರಿನ ಕಡೆಗೆ ಪ್ರಯಾಣ ಬೆಳೆಸಿತು.. ಆಗಾಗ ಸ್ವಯಂ ಚಾಲಿತವಾಗಿ ತೆರೆಯುವ ಕಿಡಿಕಿ ಮೂಲಕ ಹೊರಗಿನ ಶೀತ ಗಾಳಿ ಎಲ್ಲರಿಗೂ ನಿದ್ರಾ ಭಂಗವನ್ನು ಮಾಡುತ್ತಿತ್ತು... ನಮ್ಮನ್ನು ಬೆಳಗ್ಗೆ 6 ಗಂಟೆಗೆ ಹಿರೇಮ್ಯಾಗೇರಿ ತಲುಪಿಸಿ.. ಬಸ್ಸು ತನ್ನ ಹಾದಿ ಹಿಡಿಯಿತು..
ಈ ಪ್ರವಾಸ ಜೀವನದಲ್ಲಿ ಸ್ಮರಣೀಯ ಅನುಭವವಾಗಿ ಉಳಿಯಿತು.
-ಶಂಕರಗೌಡ ಬಸಾಪೂರ

No comments:
Post a Comment