ಕಥೆ-971
ಅಹಂಕಾರ ನಮ್ಮನ್ನು ಅಜ್ಞಾನದಲ್ಲಿ ಉಳಿಸುತ್ತದೆ.
https://basapurs.blogspot.com
ಒಮ್ಮೆ ಜೋರಾಗಿ ಬಿರುಗಾಳಿ ಬೀಸಿತು . ಸೊಕ್ಕಿನಿಂದ ನೆಟ್ಟಗೆ ನಿಂತಿದ್ದ ದೊಡ್ಡ ದೊಡ್ಡ ಹೆಮ್ಮೆರಗಳು ಗಾಳಿಯ ಆರ್ಭಟಕ್ಕೆ ಸಿಕ್ಕಿ ಕೆಳಗುರುಳಿದವು. ಆದರೆ ಚಿಕ್ಕ ಚಿಕ್ಕ ಸಸಿಗಳು ಬಿರುಗಾಳಿಯೊಂದಿಗೆ ಸೆಣಸಾಡದೇ ಬಾಗುತ್ತಿದ್ದವು. ಸ್ವಲ್ಪ ಸಮಯದಲ್ಲಿ ಬಿರುಗಾಳಿ ನಿಂತಿತು . ದೊಡ್ಡ ದೊಡ್ಡ ಮರಗಳು ಬೇರು ಸಹಿತವಾಗಿ ಕೆಳಗೆ ಬಿದ್ದವು. ಬಾಗಿದ ಚಿಕ್ಕ ಸಸಿಗಳು ಪುನಃ ನೆಟ್ಟಗೆ ನಿಂತು ಕೊಂಡವು.
ಹೀಗೆ ಬಿರುಗಾಳಿ ಸಣ್ಣ ಸಸಿಗಳಿಗೆ ಜೀವನವನ್ನು ಕೊಟ್ಟು ಹೋಗುತ್ತದೆ. ಸೊಕ್ಕಿನಿಂದ ಅಹಂಕಾರದಿಂದ ನಿಂತಿದ್ದ ಮರಗಳನ್ನು ಉರುಳಿಸಿ ಹೋಗುತ್ತದೆ. ತಲೆ ಬಾಗಿದವು ಬದುಕುತ್ತವೆ, ಅಹಂಕಾರದಿಂದ ಎತ್ತರಕ್ಕೆ ಬೆಳೆದ ಶಕ್ತಿಶಾಲಿಗಳು,ಬಾಗದೇ , ಮುರಿದು ಬೀಳುತ್ತವೆ.
ಇದೆಷ್ಟು ವಿಚಿತ್ರವಲ್ಲವೇ? ಗಾಳಿ ಬಂದಾಗ ತಾವು ಬಹಳ ಬಲಶಾಲಿಗಳೆಂದು ಹೆಮ್ಮರಗಳು ಸ್ವಲ್ಪವೂ ಭಾಗದೇ ನೇರವಾಗೇ ನಿಂತಿದ್ದವು. ಬಿರುಗಾಳಿ ಬರಲಿ, ನಾವೇನು ಹೆದರುವುದಿಲ್ಲ ಸೋಲುವುದಿಲ್ಲ, ಮುರಿದುಬಿದ್ದರೂ
ಸೇರಿಯೇ , ನಾವು ಮಾತ್ರ ತಲೆಬಾಗುವುದಿಲ್ಲ, ಎಂದುಕೊಂಡು ಅವು ನೆಟ್ಟಗೇ ನಿಂತಿದ್ದವು. ಚಿಕ್ಕ ಚಿಕ್ಕ ಸಸಿಗಳು ಯಾವುದೇ ಬಗೆಯ ಅಹಂಕಾರವನ್ನೂ ಸೊಕ್ಕನ್ನು ತೋರಿಸಲಿಲ್ಲ, ಬಿರುಗಾಳಿಯೊಂದಿಗೆ ಸೆಣಸಾಡಲೂ ಇಲ್ಲಾ, ಅವು ಬಿರುಗಾಳಿಯೊಂದಿಗೆ ಆಟವಾಡಿದವಷ್ಟೇ, ಬಿರುಗಾಳಿ ಅವುಗಳನ್ನು ಬಗ್ಗಿಸಿದಾಗ ಅವು ಬಗ್ಗಿದವು, ಪ್ರೇಮದಿಂದ ಗಾಳಿಯೊಡನೆ ವಾಲಿದವು. ಅವು ಯಾವುದೇ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಬಿರುಗಾಳಿ ಅವುಗಳಲ್ಲಿದ್ದ ಧೂಳು ಕೊಳಕುಗಳನ್ನೆಲ್ಲಾ, ಜಾಡಿಸಿ ತೆಗೆದು ಅವುಗಳನ್ನು ಶುದ್ಧಗೊಳಿಸಿತಷ್ಟೇ.ಅವುಗಳಲ್ಲಿದ್ದ ಒಣಗಿದ ಎಲೆಗಳು ಉದುರಿದವಷ್ಟೇ . ನಂತರ ಬಿರುಗಾಳಿ ಹೊರಟುಹೋಯಿತು. ಪುನಃ ಇವೆಲ್ಲವೂ ತಲೆಯೆತ್ತಿ ನಿಂತವು. ಮೊದಲಿಗಿಂತ ಹೆಚ್ಚಿನ ಉತ್ಸಾಹದಿಂದ ಹರ್ಷದಿಂದ ಆಕಾಶದೆಡೆಗೆ ತಮ್ಮ ತಲೆಯನ್ನು ಎತ್ತಿ ನಿಂತವು.
ಕೆಲವು ಸಲ ಯಾವುದು ಅಶಕ್ತವೆಂದು ತೋರುವವೊ ಅವೇ ಶಕ್ತಿಶಾಲಿಗಳೆಂದು ಸಾಬೀ ತಾಗುವುದು. ಯಾವುದು ಮಹಾ ಶಕ್ತಿಶಾಲಿ ಎಂದು ಅಹಂಕಾರದಿಂದ ಬೀಗುತ್ತಿದ್ದವೊ ಅವೇ ಅಶಕ್ತರಾಗಿ ಮೇಲೇಳಲಾಗದಂತೆ ನೆಲಕುರುಳುವವು. ಅವುಗಳ ಅಹಂಕಾರವೇ ಅವುಗಳನ್ನು ನಾಶಪಡಿಸಿದ್ದು. ಬಿರುಗಾಳಿಯು ಬೇಕೆಂದೇ , ಅವುಗಳನ್ನು ನಾಶಪಡಿಸಲಿಲ್ಲ. ಅದು ಅದರ ಪಾಡಿಗೆ ಬೀಸಿತಷ್ಟೇ. ಹೆಮ್ಮರಗಳು ತಲೆತಗ್ಗಿಸದೇ ಉರುಳಿ ಬಿದ್ದವು, ಚಿಕ್ಕ ಚಿಕ್ಕ ಸಸಿಗಳು, ತಲೆತಗ್ಗಿಸಿ ಗಾಳಿಯೊಂದಿಗೆ ತಲೆಯಲ್ಲಾಡಿಸಿದವು, ಬದುಕಿದವು.
ಈ ಜಗತ್ತಿನಲ್ಲಿ ತಲೆತಗ್ಗಿಸುವುದು ಎಂದರೆ ಅಶಕ್ತತೆ ಎಂದು ಭಾವಿಸಲಾಗಿದೆ .ಏನೇ ಆಗಲಿ ತಲೆತಗ್ಗಿಸಬಾರದೆಂದು ತಿಳಿದಿರುತ್ತಾರೆ, ಆಧ್ಯಾತ್ಮದಲ್ಲಿ ತಲೆಬಾಗುವುದು ಎಂದರೆ, ಶಕ್ತಿಯನ್ನು ಆಮಂತ್ರಿಸಿದಂತೆ, ಯಾರು ತಲೆ ಬಾಗಲು ಒಪ್ಪುವರೋ ಅವರು ಎಲ್ಲಾ ಬಗೆಯಲ್ಲೂ ತುಂಬಿ ತುಳುಕುತ್ತಾರೆ. ಇಡೀ ಜಗತ್ತಿನ ಶಕ್ತಿ ಅವರೆಡೆಗೆ ಬರಲಾರಂಬಿಸುತ್ತದೆ. ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹ ಸಮರ್ಥರಾಗುತ್ತಾರೆ.
ಯಾರು ಹಠದಿಂದ ತಲೆತಗ್ಗಿಸದೆ, ಎಲ್ಲವೂ ಗೊತ್ತಿದೆ ಎಂಬ ಅಹಂಕಾರದಿಂದ ಇರುವರೊ ಅವರು ತಮ್ಮ ಶಕ್ತಿಯನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ . ತಲೆಬಾಗದ ಶಿಖರದಂತೆ ಆಗಿಬಿಡುತ್ತಾರೆ. ಮಳೆ ಬಂದಾಗ ಶಿಖರದ ಮೇಲೂ ಮಳೆ ಬೀಳುತ್ತದೆ, ಆದರೆ ಅದರ ಮೇಲೆ ನೀರು ನಿಲ್ಲುವುದಿಲ್ಲ. ಮಳೆಯ ನೀರಿಲ್ಲವೂ ಖಾಲಿಯಾದ ತಗ್ಗಿದ ಸರೋವರಗಳಿಗೆ, ನದಿಗಳಿಗೆ ಹೋಗಿ ಸೇರುತ್ತದೆ. ಅವೆಲ್ಲವೂ ಬಗ್ಗಿವೆ ,ಖಾಲಿಯಾಗಿವೆ , ಶಿಖರ ಯಾವಾಗಲೂ ಕೊಬ್ಬಿನಿಂದ ಉಬ್ಬಿರುತ್ತದೆ. ಹಾಗಾಗಿ ಅಲ್ಲಿ ಏನೂ ನಿಲ್ಲುವುದಿಲ್ಲ.
ಎಲ್ಲಿ ತಲೆ ಖಾಲಿ ಇರುವುದೊ , ಅಲ್ಲಿ ಏನಾದರೂ ತುಂಬಲು ಸಾಧ್ಯ.
ಗುರು ಹಿರಿಯರೊಂದಿಗೆ, ಖಾಲಿ ತಲೆಯಿಂದ ,ತಲೆ ಬಾಗಿ, ವಿನಮ್ರನಾಗುವುದರಿಂದ, ಅವರಿಗೆ ಸಮರ್ಪಿತನಾಗುವುದರಿಂದ ,ಅವರ ಆಶೀರ್ವಾದದಿಂದ ನಿನ್ನ ಕಾಲ ಮೇಲೆ ನೀನು ನಿಲ್ಲಲು ಸಮರ್ಥನಾಗುವೆ.ಜ್ಞಾನದ ಅರಿವು ಮೂಡುವುದು.
ತಾವೇ ಮಹಾ ಜ್ಞಾನವಂತರು , ಯಾರಿಗೂ ತಲೆ ಬಾಗ ಬಾರದೆಂದು ಅಹಂಕಾರದಿಂದ ತಲೆಯೆತ್ತಿದವರು, ಅಜ್ಞಾನಿಗಳಾಗಿಯೇ,. ಉಳಿಯುತ್ತಾರೆ.
ಕೃಪೆ :ಸುವರ್ಣಾ ಮೂರ್ತಿ.
No comments:
Post a Comment