ಕಥೆ-983
ಮಾಯಾ ಲೋಕದ ಅತಿಥಿಗಳ ಬಲೆಯೊಳಗೆ
ಅದೊಂದು ಸುಂದರ ಸುಭದ್ರ ಅರಮನೆ. ಅದರ ಒಡೆಯನಾದ ರಾಜ ದಯಾಳು- ಧರ್ಮವಂತ ! ಮುಗ್ಧಮರಗುಳಿ! ಒಂದು ದಿನ ಒಂದು ಗೆದ್ದಲು ಜೋಡಿ ಅರಮನೆಗೆ ಬಂದು ಅರಸನಿಗೆ ವಂದಿಸಿ ಹೇಳಿತು-“ಮಹಾಪ್ರಭು ನಾವು ನಿರಾಶ್ರಿತರು. ಮೊನ್ನೆ ನಡೆದ ಅತಿವೃಷ್ಟಿಯಿಂದ ಮನೆ ಮಾರು ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ನಮಗೆ ಈ ಅರಮನೆಯಲ್ಲಿ ಒಂದಿಷ್ಟು ಆಶ್ರಯ ಕೊಟ್ಟು ಕಾಪಾಡಿರಿ. ರಾಜ- “ನೀವೇಷ್ಟು
ಜನರು?” ಗೆದ್ದಲ ಜೋಡಿ- “ನಾವಿಬ್ಬರೇ ದಂಪತಿಗಳು!” ರಾಜ-“ಹಾಗಾದರೆ ನೀವು ಈ ಅರಮನೆಯಲ್ಲಿ ನಿಮಗೆ ಇಷ್ಟ ಬಂದಲ್ಲಿ
ಇರಬಹುದು.” ಅಲ್ಲೇ ಇದ್ದ ಒಂದು ಗುಬ್ಬಿ ಪಕ್ಷಿ ನುಡಿಯಿತು-“ರಾಜನೇ, ನೀನು ಅವರಿಗೆ ಆಶ್ರಯ ಕೊಡುವುದು ಒಳ್ಳೆಯದಲ್ಲ. ರಾಜ-
“ಅತಿಥಿಗಳನ್ನು ಆದರಿಸುವುದು ನನ್ನ ಕರ್ತವ್ಯವಲ್ಲವೇ?” ಗುಬ್ಬಿ- “ಅಹುದು.
ಆದರೆ ಇವರು ಅತಿಥಿಗಳು ಹೌದೋ ಅಲ್ಲೋ ಒಂದಿಷ್ಟು ವಿಚಾರಿಸು!”ರಾಜ- “ಅನ್ನ ಆಶ್ರಯ ಕೋರಿ ಮನೆಗೆ ಬಂದವರೆಲ್ಲ ಅತಿಥಿಗಳು!ಇದರಲ್ಲೇನು ವಿಚಾರಿಸುವುದಿದೆ?” ಗುಬ್ಬಿ “ಸರಿ, ನಿನ್ನ ಕಥೆ ಮುಗಿದಂತಾಯಿತು!'' ರಾಜ- “ಹಾಗೆಂದರೇನು?” ಗುಬ್ಬಿ- “ಸ್ವಲ್ಪ ದಿವಸ
ತಡಿ ನಿನಗೇ ತಿಳಿಯುತ್ತದೆ.”ವರ್ಷಾರು ತಿಂಗಳು ಹೋಗಿರಲಿಲ್ಲ. ಗೆದ್ದಲು ದಂಪತಿಗಳ ಬಳಗ ಒಳಗೊಳಗೆ ಅಸಂಖ್ಯವಾಗಿ ಬೆಳೆಯತೊಡಗಿತು. ಹೊರಗೆ ಮಾತ್ರ ಹಿರಿಯ
ಜೋಡಿಗಳೆರಡೇ ರಾಜನಿಗೆ ಭೇಟಿಯಾಗಿ ಹೋಗುತ್ತಿದ್ದವು. ಒಂದು ದಿನ ಸಂಪೂರ್ಣ ಅರಮನೆಯ ಮರ ಮಟ್ಟಗಳನ್ನೆಲ್ಲ ತಿಂದು ಹಾಕಿದವು. ಮರುಕ್ಷಣವೇ ಅರಮನೆ ಮಣ್ಣುಗೂಡಿತ್ತು. ಈಗ ರಾಜನೇ ನಿರ್ಗತಿಕನಾಗಿದ್ದ! ಅಲ್ಲೇ ಇದ್ದ ಗುಬ್ಬಿ ಕೇಳಿತು- “ಈಗಲಾದರೂ ತಿಳಿಯಿತೇ ಅವರೆಂಥ
ಅತಿಥಿಗಳೆಂದು!” ಗುಬ್ಬಿಯ ಮಾತು ಕೇಳಲಾರದ್ದಕ್ಕೆ ನಾನು ಕೆಟ್ಟು ಹೋದೆನೆಂದು ರಾಜ ಪರಿತಪಿಸಿದ!!
ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಈ ಪಂಚ ವಿಷಯಗಳೇ ಗೆದ್ದಲದಂಥ ಅತಿಥಿಗಳು. ಅವು ಯಾವ ರೂಪ ಧರಿಸಿ ನಮ್ಮ ಮನೆಗೆ ಅತಿಥಿಗಳಾಗಿ ಬರುತ್ತಾರೋ ಹೇಳಲಾಗುವುದಿಲ್ಲ. ಅಧಿಕಾರ ಅಂತಸ್ತು, ಮಾನ ಮರ್ಯಾದೆ ಕೀರ್ತಿವಾರ್ತೆಯಾಗಿ ಬರಬಹುದು. ಏನಾದರಾಗಿ ಬರಬಹುದು. ಆಗ ಸಂತರು ಶರಣರು ಗುಬ್ಬಿ ಪಕ್ಷಿಯಂತೆ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ. ತಕ್ಷಣ ನಾವು ಎಚ್ಚತ್ತು ಎದ್ದು ಮೈಕೊಡವಿ ಮುನ್ನಡೆದು ನಮ್ಮ ಸಹಜ ಜೀವನ ನಡೆಸಬೇಕು, ಇಲ್ಲದಿದ್ದರೆ, ಮಾಯಾ ಲೋಕದ ಅತಿಥಿಗಳ ಬಲೆಯೊಳಗೆ ಸಿಲುಕಿ ಮೇಲೆ ಏರಲಾಗದೆ ನಮ್ಮ ಬದುಕಿನ ಅಂತ್ಯ ಕಂಡುಕೊಳ್ಳುತ್ತೇವೆ..
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*

No comments:
Post a Comment