ಕಥೆ-982
ಮಹಾಮಾರಿ ವಿರುದ್ಧ ದಿಗ್ವಿಜಯಿ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ನಮಗೆ ಅಲೆಕ್ಸಾಂಡರ್ ಅಥವಾ ನೆಪೋಲಿಯನ್‌ನಂತಹ ದಿಗ್ವಿಜಯಿಗಳು ಕಾಣಸಿಗುತ್ತಾರೆ. ಆದರೆ, ಕತ್ತಿ ಹಿಡಿಯದೆ, ರಕ್ತ ಹರಿಸದೆ, ಕೋಟ್ಯಂತರ ಜೀವಗಳನ್ನು ಉಳಿಸಿದ ಒಬ್ಬ ಶಾಂತ ಸ್ವಭಾವದ 'ಯೋಧ' ಅವರೇ ಡಾ. ಎಡ್ವರ್ಡ್ ಜೆನ್ನರ್. ಇವರು ನಡೆಸಿದ ಹೋರಾಟ ರಾಜಕೀಯಕ್ಕಲ್ಲ, ಬದಲಾಗಿ ಇಡೀ ಮಾನವಕುಲವನ್ನೇ ನಡುಗಿಸುತ್ತಿದ್ದ 'ಸಿಡುಬು' ಎಂಬ ಮಹಾಮಾರಿಯ ವಿರುದ್ಧ.
18ನೇ ಶತಮಾನದ ಅಂತ್ಯದವರೆಗೆ 'ಸಿಡುಬು' (Smallpox) ಎನ್ನುವುದು ಕೇವಲ ಕಾಯಿಲೆಯಾಗಿರಲಿಲ್ಲ, ಅದೊಂದು ಶಾಪವಾಗಿತ್ತು. ಸೋಂಕಿತರಲ್ಲಿ ಶೇಕಡಾ 30ರಷ್ಟು ಜನ ಸಾವನ್ನಪ್ಪುತ್ತಿದ್ದರು. ಬದುಕುಳಿದವರ ಮುಖದ ಮೇಲೆ ಅಸಹ್ಯಕರ ಕಲೆಗಳು ಮೂಡುತ್ತಿದ್ದವು, ಇಲ್ಲವೇ ಅವರು ಶಾಶ್ವತವಾಗಿ ಅಂಧರಾಗುತ್ತಿದ್ದರು. ಇಡೀ ಜಗತ್ತು ಈ ರೋಗಕ್ಕೆ ಮದ್ದಿಲ್ಲದೆ ಅಸಹಾಯಕವಾಗಿ ಕುಳಿತಿದ್ದ ಕಾಲವದು.
ಇಂಗ್ಲೆಂಡ್‌ನ ಹಳ್ಳಿಯೊಂದರಲ್ಲಿ ವೈದ್ಯರಾಗಿದ್ದ ಜೆನ್ನರ್ ಅವರಿಗೆ ಒಂದು ವಿಷಯ ತೀವ್ರ ಕುತೂಹಲ ಮೂಡಿಸಿತ್ತು. ಹಸುಗಳ ಹಾಲು ಕರೆಯುವ ಹೆಣ್ಣುಮಕ್ಕಳು ಸಣ್ಣಪುಟ್ಟ ಕಾಯಿಲೆಗಳಿಗೆ ತುತ್ತಾಗುತ್ತಿದ್ದರೂ, ಈ ಮಹಾಮಾರಿ ಸಿಡುಬು ಮಾತ್ರ ಅವರನ್ನು ಮುಟ್ಟುತ್ತಿರಲಿಲ್ಲ! ಇದಕ್ಕೆ ಕಾರಣವೇನಿರಬಹುದು ಎಂದು ಹುಡುಕುತ್ತಾ ಹೋದಾಗ ಅವರಿಗೆ ಸಿಕ್ಕಿದ್ದು 'ಕೌಪಾಕ್ಸ್' ಎಂಬ ಹಸುಗಳಿಂದ ಬರುವ ಸಾಧಾರಣ ರೋಗ. "ಹಸುವಿನ ರೋಗವು ಮನುಷ್ಯನನ್ನು ಮೃತ್ಯುವಿನಿಂದ ರಕ್ಷಿಸುತ್ತದೆಯೇ?" ಎಂಬ ಆಲೋಚನೆಯೇ ಆಧುನಿಕ ವೈದ್ಯಕೀಯದ ಅಡಿಪಾಯವಾಯಿತು.
ಜೆನ್ನರ್ ತನ್ನ ಸಿದ್ಧಾಂತವನ್ನು ಸಾಬೀತುಪಡಿಸಲು ಆರಿಸಿಕೊಂಡ ದಾರಿ ಅತ್ಯಂತ ಅಪಾಯಕಾರಿಯಾಗಿತ್ತು. ಜೇಮ್ಸ್ ಫಿಪ್ಸ್ ಎಂಬ ಎಂಟು ವರ್ಷದ ಬಾಲಕನ ಮೇಲೆ ಒಂದು ಅಪಾಯಕಾರಿ 'ಜೂಜಾಟ'ವನ್ನೇ ಆಡಿದ್ದರು. ಮೊದಲು ಕೌಪಾಕ್ಸ್ ವೈರಸ್ ಅನ್ನು ಆತನಿಗೆ ಚುಚ್ಚಿ, ನಂತರ ಅತಿ ಭಯಾನಕವಾದ ಸಿಡುಬಿನ ವೈರಸ್ ಅನ್ನು ಅದೇ ಬಾಲಕನ ದೇಹಕ್ಕೆ ಸೇರಿಸಿದ.
ಒಮ್ಮೆ ಯೋಚಿಸಿ, ಅಂದು ಆ ಪ್ರಯೋಗ ವಿಫಲವಾಗಿದ್ದರೆ ? ಆ ಬಾಲಕ ಸಾಯುತ್ತಿದ್ದ, ಇತಿಹಾಸವು ಜೆನ್ನರ್‌ನನ್ನು ಒಬ್ಬ ಕ್ರೂರಿ ಎಂದು ನೆನಪಿಡುತ್ತಿತ್ತು. ಆದರೆ ಜೆನ್ನರ್ ಅವರ ನಂಬಿಕೆ ಸುಳ್ಳಾಗಲಿಲ್ಲ. ಆ ಮಗುವಿಗೆ ಸಿಡುಬು ಬರಲೇ ಇಲ್ಲ! ಮನುಷ್ಯನ ದೇಹವು ಕೌಪಾಕ್ಸ್ ಮೂಲಕ ಸಿಡುಬಿನ ವಿರುದ್ಧ ಹೋರಾಡಲು ಬೇಕಾದ 'ರಕ್ಷಾ ಕವಚ'ವನ್ನು ಸಿದ್ಧಪಡಿಸಿಕೊಂಡಿತ್ತು.
ಯಾವುದೇ ಹೊಸ ಬದಲಾವಣೆಗೆ ಸಮಾಜ ಮೊದಲು ಕಲ್ಲು ಎಸೆಯುವುದು ಸಹಜ. ಜೆನ್ನರ್ ಲಸಿಕೆಯನ್ನು ಕಂಡುಹಿಡಿದಾಗ ಜನರು ಅವರನ್ನು ಹುಚ್ಚ ಎಂದು ಕರೆದರು. "ಹಸುವಿನ ಅಂಶ ಚುಚ್ಚಿಸಿಕೊಂಡರೆ ಮನುಷ್ಯರಿಗೆ ಕೊಂಬು ಬರುತ್ತದೆ, ಅವರು ಎಮ್ಮೆಯಂತೆ ಕಿರುಚುತ್ತಾರೆ" ಎಂಬ ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಬಂದವು. ಆದರೆ ಜೆನ್ನರ್ ಧೃತಿಗೆಡಲಿಲ್ಲ. ಸಮಾಜದ ಮೂದಲಿಕೆಯ ನಡುವೆಯೂ ಅವರ ಸಂಶೋಧನೆ ಮುಂದುವರಿಯಿತು.
ಅವರ ಆ ಛಲದ ಫಲವಾಗಿ ಇಂದು ಪ್ರಪಂಚವು ಸಿಡುಬಿನಿಂದ ಮುಕ್ತವಾಗಿದೆ. ಇಂದು ನಾವು ಹಾಕಿಸಿಕೊಳ್ಳುವ ಪ್ರತಿ ಲಸಿಕೆಯ ಹಿಂದೆ ಒಬ್ಬ ಹಳ್ಳಿಯ ವೈದ್ಯ ಅಂದು ತೋರಿದ ಅಪ್ರತಿಮ ಧೈರ್ಯದ ಕಥೆಯಿದೆ.
ಆಸ್ತಿಕ, ನಾಸ್ತಿಕ, ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ವಿಷಯದಲ್ಲಿ 'ಗೋಮಾತೆ'ಯ ಅಪ್ರತಿಮ ಕೊಡುಗೆಯ ದರ್ಶನವಾಗುತ್ತದೆ. ಮಾನವಕುಲಕ್ಕೆ ಹಾಲು ನೀಡಿ ಪೋಷಿಸುವ ಹಸು, ಅಂದು ತನ್ನ ದೇಹದಲ್ಲಿದ್ದ 'ಕೌಪಾಕ್ಸ್' ಎಂಬ ವೈರಸ್ ಮೂಲಕ ಮನುಷ್ಯನಿಗೆ ಸಾವಿನ ವಿರುದ್ಧದ ರಕ್ಷಾಕವಚವನ್ನೂ ನೀಡಿತ್ತು. ಇಂದಿಗೂ ನಾವು ಬಳಸುವ 'Vaccine' ಎಂಬ ಪದವು ಲ್ಯಾಟಿನ್ ಭಾಷೆಯ 'Vacca' (ಹಸು) ಎಂಬ ಪದದಿಂದಲೇ ಬಂದಿದೆ..
ದೊಡ್ಡ ಬದಲಾವಣೆಗಳು ಯಾವಾಗಲೂ ದೊಡ್ಡ ಪ್ರಯೋಗಾಲಯದಿಂದ ಬರುವುದಿಲ್ಲ; ಅವು ನಮ್ಮ ಕಣ್ಣಮುಂದಿರುವ ಸಣ್ಣ ವಿಷಯಗಳನ್ನು ಗಮನಿಸುವ ಸೂಕ್ಷ್ಮತೆ ಮತ್ತು ಸಮಾಜದ ವಿರೋಧವನ್ನು ಎದುರಿಸುವ ಎದೆಗಾರಿಕೆಯಿಂದ ಹುಟ್ಟುತ್ತವೆ.
ಕೃಪೆ-ನೆಟ್

No comments:
Post a Comment