ಕಥೆ-986
ಪ್ರೇರಣೆ ಸಾಧನೆಗೆ ಮುನ್ನುಡಿ.. https://basapurs.blogspot.com
ಯುವಕನೊಬ್ಬ ಹೆಚ್ಚುವರಿ ಆಟಗಾರನಾಗಿ ಫುಟ್ಬಾಲ್ ತಂಡದಲ್ಲಿದ್ದ. ಆತ ಎಂದೂ ಹನ್ನೊಂದು ಮಂದಿ ತಂಡದೊಳಗೆ ಆಡಿದವನಲ್ಲ, ಆದರೆ ತಪ್ಪದೇ ಅಭ್ಯಾಸಕ್ಕೆ ಬರುತ್ತಿದ್ದ. ಫೈನಲ್ ಫುಟ್ಬಾಲ್ ಪಂದ್ಯಾವಳಿ ಪ್ರಾರಂಭವಾಗಬೇಕಿತ್ತು, ಅತ್ಯಂತ ಪ್ರಮುಖ ಆಟಗಾರನೊಬ್ಬ ಪತ್ತೆಯೇ ಇಲ್ಲ, ಅಂತಿಮ ಪಂದ್ಯ ಇನ್ನೇನು ಶುರುವಾಗುತ್ತದೆ ಎನ್ನುವಾಗ ಏಕಾಏಕಿ ಕೋಚ್ ಬಳಿ ಯಾರೋ ಬಂದು ಅವನಿಗೆ ಹುಷಾರಿಲ್ಲ, ಬರಲು ಆಗಲ್ಲ ಎಂಬ ಸಂದೇಶ ಮುಟ್ಟಿಸಿದ... ಕೋಚ್ ಗೆ ದಿಕ್ಕೇ ತೋಚಲಿಲ್ಲ, ಅದು ಫೈನಲ್ ಮ್ಯಾಚ್, ಅವನಿಲ್ಲದೆ ಈ ಆಟ ಗೆಲ್ಲಲು ಸಾಧ್ಯವಿಲ್ಲ ಎಂದುಕೊಂಡ... ಕೊನೆಗೆ ಅನಿವಾರ್ಯವಾಗಿ, ಎಕ್ಸ್ಟ್ರಾ ಪ್ಲೇಯರ್ ಕಡೆ ಬಂದ, ಕೋಚ್, ‘ನಿನಗಿಂತ ಚೆನ್ನಾಗಿ ಆಡುವವರು ತಂಡದಲ್ಲಿದ್ದರು. ಅದಕ್ಕೆ ಅವಕಾಶ ನೀಡಲಿಲ್ಲ.. ಈಗ ನಿನ್ನನ್ನು ತಂಡಕ್ಕೆ ತೆಗೆದುಕೊಳ್ಳುತ್ತಿದ್ದೇನೆ, ನನ್ನ ನಿರೀಕ್ಷೆ ಹುಸಿಗೊಳಿಸಬೇಡ’ ಎಂದರು ಕೋಚ್.
ಆಟ ಶುರು ಆಯ್ತು
ಚೆಂಡು ತನ್ನೆಡೆಗೆ ಬಂದಾಗಲೆಲ್ಲ ಗೋಲ್ ಬಾರಿಸಿದ ಯುವಕನ ಚಲನೆಯಲ್ಲಿ ಮಿಂಚಿನ ಪ್ರಖರತೆ ಇತ್ತು. ಅಂದಿನ ಅಮೋಘ ಜಯಕ್ಕೆ ಆತನೇ ಕೇಂದ್ರಬಿಂದುವಾಗಿದ್ದ. ಅದನ್ನು ಕಂಡು ಕೋಚ್ ‘ನಿನ್ನ ಆಟ ಅದ್ಭುತವಾಗಿತ್ತು; ನಿನ್ನನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದಿದ್ದರೆ ನಮ್ಮ ತಂಡ ಸೋಲುತ್ತಿತ್ತೇನೋ? ಇಂಥ ಅಮೋಘ ಪ್ರದರ್ಶನ ಹೇಗೆ ಸಾಧ್ಯವಾಯಿತು?’ ಎಂದು ಪ್ರಶ್ನಿಸಿದರು.
ಅದಕ್ಕೆ ಯುವಕ ‘ನಾನು ಆಡುವುದನ್ನು ನನ್ನ ತಂದೆ ವೀಕ್ಷಿಸುತ್ತಿದ್ದರು’ ಎಂದ. ಕೋಚ್ ಆತನ ತಂದೆ ಕುಳಿತುಕೊಳ್ಳುತ್ತಿದ್ದ ಸ್ಥಳದ ಕಡೆ ದಿಟ್ಟಿಸಿ, ‘ಅಲ್ಲಿ ನಿನ್ನ ತಂದೆ ಇಲ್ಲವಲ್ಲ?’ ಎಂದರು. ಒಂದು ಕ್ಷಣ ಮೌನ ಮುರಿದ ಯುವಕ ‘ಸರ್, ನಿಮಗೊಂದು ಸಂಗತಿ ಹೇಳುವುದಿದೆ. ನನ್ನ ತಂದೆ ಅಂಧರು, ನಾಲ್ಕು ದಿನಗಳ ಹಿಂದಷ್ಟೇ ತೀರಿಕೊಂಡರು. ನಾನು ಆಡುವುದನ್ನು ಅವರು ಮೊದಲ ಬಾರಿಗೆ ಮೇಲಿಂದ ವೀಕ್ಷಿಸಿದ್ದಾರೆ’ ಎನ್ನುತ್ತ ಕಣ್ಣೊರೆಸಿಕೊಂಡ…
ಕಣ್ಣಿಲ್ಲದಿದ್ದರೂ, ಆಟದ ಅಭ್ಯಾಸದ ವೇಳೆ ಆತನ ತಂದೆ ಮೈದಾನದ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದರು. ಪ್ರತಿದಿನ ಮಗನಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿದ್ದರು..
ಅವನ ಸಾಧನೆಗೆ ಮುನ್ನುಡಿಯೇ ಅವರ ತಂದೆಯ ಪ್ರೇರಣೆ,
ಇನ್ನೊಬ್ಬರ ನೀಡಿದ ಪ್ರೇರಣೆ ಮತ್ತು ಸ್ವಯಂ ಪ್ರೇರಣೆ, ನಮ್ಮಲ್ಲೇ ಅಡಗಿದೆ. ಬೇಕಾದಾಗ ಅದನ್ನು ಹೆಕ್ಕಿತೆಗೆದು ಉಪಯೋಗಿಸುವುದೇ ಜಾಣತನ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ಪ್ರೇರಣೆ ನೆರವಾಗುತ್ತದೆ.
ಪ್ರೇರಣೆಯ ಬಲದಿಂದ ಜೀವನದಾಚೆಗೂ ಮೆರೆದ ಮಹನೀಯರು ಅನೇಕರು.
ನಮ್ಮ ಆಸಕ್ತಿ ರಂಗದಲ್ಲಿ ಸಾಧನೆಗೆ, ಉತ್ತಮ ತಯಾರಿ ಮಾಡಿ, ಸಿದ್ದರಾಗಿರಬೇಕು, ಅವಕಾಶ ಬಂದೇ ಬರುತ್ತೆ, ಆಗ ನಾವು ಶ್ರೇಷ್ಠರಲ್ಲಿಯೇ ಶ್ರೇಷ್ಠರಾಗಲು ಬದುಕಿಗೆ ಬೆಳಕಾಗುವ ಪ್ರೇರಣೆಯೆಡೆಗೆ ಹೆಜ್ಜೆ ಹಾಕಿದಾಗ ಗೆಲುವು ಸಾಧ್ಯವಾಗುತ್ತದೆ..
ಕೃಪೆ: ಜಯಶ್ರೀ ಅಬ್ಬಿಗೇರಿ.
No comments:
Post a Comment