ಕಥೆ-973
ಸುಖ ದುಃಖ
https://basapurs.blogspot.com
ಊರ ಮುಂದೆ ಇದ್ದ ಮುರುಕು ಧರ್ಮಶಾಲೆಯಲ್ಲಿ ತಿರುಕನೊಬ್ಬ ಮಲಗಿದ್ದಾನೆ. ಆಗ ಅವನು ಸುಂದರವಾದ ಒಂದು ಕನಸನ್ನು ಕಾಣುತ್ತಾನೆ. ಆ ಊರಿನ ಅರಸ ಆಕಸ್ಮಿಕವಾಗಿ ತೀರಿಕೊಂಡಿದ್ದಾನೆ. ಆ ಅರಸನಿಗೆ ಮಕ್ಕಳೇ ಇರಲಿಲ್ಲ.
ಹಿರಿಯರೆಲ್ಲ ಸೇರಿ, "ಆನೆಯ ಸೊಂಡಿಲಿಗೆ ಹೂವಿನ ಹಾರ ಹಾಕಿ ಬಿಡೋಣ. ಅದು ಯಾರ ಕೊರಳಿಗೆ ಹಾರ ಹಾಕುವುದೋ ಅವರನ್ನು ರಾಜರೆಂದು ಸ್ವೀಕರಿಸೋಣ." ಎಂದು ನಿರ್ಣಯಿಸಿ ಆನೆಯ ಸೊಂಡಿಲಕ್ಕೆ ಹಾರವನ್ನು ಹಾಕಿಬಿಡುತ್ತಾರೆ. ಅದು ನೇರವಾಗಿ ಬಂದು ಈ ತಿರುಕನಿಗೆ ಹಾರ ಹಾಕುತ್ತದೆ. ತಕ್ಷಣ ಅದೇ ಆನೆಯ ಮೇಲೆ ಆ ತಿರುಕನನ್ನು ಕೂಡಿಸಿ ಮೆರವಣಿಗೆ ಮಾಡುತ್ತಾ ಕರೆತಂದು ಸಿಂಹಾಸನದಲ್ಲಿ ಕೂಡ್ರಿಸುತ್ತಾರೆ. ಕ್ಷಣಾರ್ಧದಲ್ಲಿ ಮಹಾರಾಜನಾಗಿದ್ದ ಆ ತಿರುಕನಿಗೆ ಎಂತಹ ಸಂತಸ ! ಸ್ವರ್ಗ ಸುಖವೂ ಅದರ ಮುಂದೆ ಏನು ಅಲ್ಲ. ಆದರೆ ಇದೆಲ್ಲವೂ ಕನಸೇ ವಿನ: ನನಸಲ್ಲ!!
ನಮ್ಮ ವಾಸ್ತವಿಕ ಜೀವನವು ಸುಖ-ದುಃಖಗಳ ಸಮ್ಮಿಶ್ರಣವಾಗಿದೆ. ಮನೆಯಲ್ಲಿ ವಯಸ್ಸಾದ ಮುದುಕನು. ತೀರಿದಾಗ ದುಃಖ. ಮರುದಿನ ಅದೇ ಮನೆಯಲ್ಲಿ ಮಗುವೊಂದು ಜನಿಸಿದಾಗ ಮತ್ತೆ ಅದೇ ಮನೆಯಲ್ಲಿ ಸುಖದ ಸಂಭ್ರಮ. ಈ ಬದುಕು ಒಂದು ದೊಡ್ಡ ಗಾಳಿಪಟವಿದ್ದಂತೆ. ಗಾಳಿಯು, ಪಟವನ್ನು ಮೇಲೆ ಮೇಲೆ ಏರಿಸುತ್ತದೆ. ಅದರ ಬಾಲ ಮಾತ್ರ ಪಟ ಅತ್ತಿತ್ತ ಹೊಯ್ದಾಡದಂತೆ ಸಮತೋಲನ ಕಾಪಾಡುತ್ತದೆ. ಹಾಗೆಯೇ ಸುಖದ ಗಾಳಿಯು ನಮ್ಮ ಜೀವನದ ಪಟವನ್ನು ಮೇಲೆ ಏರಿಸುತ್ತದೆ. ದುಃಖದ ಗಾಳಿಯು ಅದನ್ನು ನೆಲಕ್ಕೆ ತರುತ್ತದೆ. ಕೋಟಿ ಹಣ ಹೇಗೋ ಲಾಭವಾದಾಗ ಜೀವನದ ಪಟ ಆಕಾಶಕ್ಕೆ ಏರುತ್ತದೆ. ಅದೇ ವ್ಯಕ್ತಿ, ತೆರಿಗೆ ಅಧಿಕಾರಿಗಳ ಕೈಗೆ ಸಿಕ್ಕಾಗ ಜೀವನದ ಪಟ ಮತ್ತೆ ನೆಲಕಚ್ಚುತ್ತದೆ.
- ಶ್ರೀ ಸಿದ್ದೇಶ್ವರ ಸ್ವಾಮೀಜಿ
No comments:
Post a Comment