ಕಥೆ-1016
ರಾಷ್ಟ್ರೀಯ ಮತದಾರ ದಿನ.. (ಬುಲೆಟ್‌ಗಿಂತ ಬ್ಯಾಲೆಟ್ ಬಲಿಷ್ಠ)
ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಮತದಾನವಾಗಿದೆ. ಇಂತಹ ಪವಿತ್ರ ಮತದಾನ ಮಾಡುವ ಅವಕಾಶವನ್ನು ನಮಗೆ ಸಂವಿಧಾನವು ಭಾರತ ಚುನಾವಣಾ ಆಯೋಗದ ಮೂಲಕ ನೀಡಿದೆ.. ಭಾರತೀಯ ಚುನಾವಣಾ ಆಯೋಗದ ಸ್ಥಾಪನೆಯಾದ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುತ್ತಿದೆ..
25ನೇ ಜನವರಿ 1950 ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ಚುನಾವಣಾ ಆಯೋಗ, ಮತದಾನದ ಹಕ್ಕನ್ನು ಪ್ರೋತ್ಸಾಹಿಸುತ್ತದೆ.. ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತಿದೆ...
ಪ್ರತಿಯೊಬ್ಬ 18 ವರ್ಷ ಪೂರ್ಣಗೊಂಡ ಪ್ರಜೆಗೂ ಮತದಾನ ಮೂಲಭೂತ ಹಕ್ಕು. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕು ನಮಗಿದೆ.. ಒಮ್ಮೆ ಯೋಚಿಸಿ, ನಾವು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ.
ನನ್ನ ಒಂದು ಮತದಿಂದ ಏನಾಗುತ್ತದೆ, ಎಂಬ ನಿರುತ್ಸಾಹ ಸರಿಯಲ್ಲ... ಒಂದು ಮತಕ್ಕೆ ದೇಶದ ದಿಕ್ಕನ್ನು ಬದಲಾಯಿಸುವ ಶಕ್ತಿ ಇದೆ. ನಮ್ಮ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಯೆಂದರೆ ಅದು ಮತದಾನ ಮಾಡುವುದು...
ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ.
1951-52ರ ಅವಧಿಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 44.87 ರಷ್ಟು ಮತದಾನವಾಗಿದ್ದು, 2019 ರಲ್ಲಿ 17 ನೇ ಲೋಕಸಭೆಗೆ 67.40 ಪ್ರತಿಶತದಷ್ಟು ಮತದಾನದವಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ 65.79 ಪ್ರತಿಶತದಷ್ಟು ಮತದಾನದವಾಗಿದೆ.. ಮತದಾನದ ಪ್ರಮಾಣ ಏರಿಕೆ ಆಗುವುದರ ಬದಲು ಕಡಿಮೆಯಾಗಿರುವುದು ಆತಂಕದ ವಿಷಯ... ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ, ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. 'ನಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. 'ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ,' ಎಂದು ಬರಾಕ್ ಒಬಾಮಾ ಹೇಳಿದ್ದಾರೆ.
ಸಮಾಜ ಕೆಟ್ಟಿದೆ ಎಂದು ಹೇಳುತ್ತಾ ನಾವು ಕೆಡುವುದರಲ್ಲಿ ಯಾವುದೇ ಅರ್ಥವಿಲ್ಲ. ಜನತಂತ್ರ ಗಟ್ಟಿಗೊಳ್ಳಬೇಕಾದರೆ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಮತದಾನ ಎಂಬುದು ವ್ಯಾಪಾರವಲ್ಲ. ನಾವು ದುಡ್ಡು ಪಡೆದು ಮತ ಹಾಕಿದರೆ ಮತ ಪಡೆದವರು ಅದನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳುತ್ತಾರೆ. ಅವರನ್ನು ಪ್ರಶ್ನಿಸುವ ನೈತಿಕ ಅಧಿಕಾರ ನಮಗಿರುವುದಿಲ್ಲ. ನಮ್ಮನ್ನು ನಾವು ಮಾರಿಕೊಂಡಂತೆ...ಮತ ಮಾರಿಕೊಂಡರೆ ಪ್ರಶ್ನಿಸುವ ಅಧಿಕಾರವನ್ನು ಒತ್ತೆ ಇಟ್ಟಂತೆ
ಆದ್ದರಿಂದ ನಾವು ಮತವನ್ನು ಮಾರಿಕೊಳ್ಳದೆ ನಮ್ಮ ಹಕ್ಕನ್ನು ಚಲಾಯಿಸಲು ಕೆಳಗಿನಂತೆ ಪ್ರತಿಜ್ಞೆ ಮಾಡೋಣ.
ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ
'"ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ" ಎಂದು ಪ್ರತಿಜ್ಞೆ ಮಾಡೋಣ...
ಮತದಾರರ ದಿನಾಚರಣೆಯ ಶುಭಾಶಯಗಳು..
💐💐💐💐💐
-ಶಂಕರಗೌಡ ಬಸಾಪೂರ

No comments:
Post a Comment