ಕಥೆ-1005
ಸೊಸೆಯಲ್ಲ ಮಗಳು
ಕಮಲಮ್ಮನವರು ತನ್ನ ಮಕ್ಕಳ ಮದುವೆಯ ಸಡಗರದಿಂದ ಆಚೀಚೆ ಓಡಾಡುತ್ತಿದ್ದರು. ಸಡಗರ ಇದ್ದರೂ ಮುಖದಲ್ಲಿ ಏನೋ ಇರುವ ಕಳವಳವನ್ನು ಮಗಳು ಸನಿಹ ಗುರುತಿಸಿದ್ದಳು. ಕಮಲಮ್ಮನವರಿಗೆ ಇಬ್ಬರು ಮಕ್ಕಳು, ಒಂದು ಗಂಡು ಒಂದು ಹೆಣ್ಣು. ಮಕ್ಕಳು ಎಳವೆಯಲ್ಲಿದ್ದಾಗಲೇ ಗಂಡ ತೀರಿಹೋಗಿದ್ದರೂ ಮಕ್ಕಳಿಗೆ ಅಪ್ಪನ ಕೊರತೆಯಿರದಂತೆ ಸಾಕಿ ಸಲಹಿದವರು ಕಮಲಮ್ಮನವರು. ಈಗ ಮಕ್ಕಳು ವಿದ್ಯಾವಂತರಾಗಿ ಪ್ರಾಯಸ್ಥರಾದಾಗ ಅವರಿಗೆ ಮದುವೆ ಮಾಡಿಸಿ ತನ್ನ ಜವಾಬ್ದಾರಿ ಕಳೆದುಕೊಳ್ಳುವ ತವಕ ಕಮಲಮ್ಮನವರಿಗೆ.
ಅಮ್ಮನನ್ನು ಯಾವುದೋ ಒಂದು ನೋವು ಕಾಡುತ್ತಿದೆ ಎಂದು ಕಮಲಮ್ಮನ ಪುತ್ರಿ ಸನಿಹ ಅರಿತಳು. ತಾನು ಮದುವೆಯಾಗುವ ಸಂಭ್ರಮದಲ್ಲಿದ್ದರೂ ಅಮ್ಮನ ನೋವಿನ ಚಹರೆ ಪದೇಪದೇ ಸನಿಹಳನ್ನು ಕಾಡುತ್ತಿತ್ತು. ಅಣ್ಣ ಚರಣ್ ಮದುಮಗನ ದಿರಿಸಿನಲ್ಲಿ ಕುಶಿಯಲ್ಲಿ ಓಲಾಡುತ್ತಿದ್ದ. ಪಾಣಿಗ್ರಹಣದ ಸಮಯದಲ್ಲಿ ತಾನು ಅಳಬಾರದೆಂದು ಸನಿಹ ನಿರ್ಧರಿಸಿದ್ದರೂ ಕೂಡ ಅಮ್ಮನ ಅಳು ಮುಖವನ್ನು ಕಂಡು ತಾನು ಅತ್ತು ತಾಳಿಕಟ್ಟಿಸಿಕೊಂಡಳು. ಕಮಲಮ್ಮನವರು ನಿರಾಳರಾಗಿ ಮದುಮಕ್ಕಳನ್ನು ಭರಪೂರ ಹರಸಿದರು.
ಸನಿಹ ತಾಯಿ ಮನೆಯನ್ನು ತೊರೆಯುವ ಸಂದರ್ಭದಲ್ಲಿ ಅಮ್ಮನ ಚಿಂತೆಗೆ ಕಾರಣವೇನೆಂದು ಒಂದು ರೂಮಿನಲ್ಲಿ ಪ್ರತ್ಯೇಕವಾಗಿ ವಿಚಾರಿಸಿದಳು. ಕಮಲಮ್ಮನವರು ದುಃಖ ತಡೆಯಲಾರದೇ ಸನಿಹಳನ್ನು ತಬ್ಬಿ ಗಳಗಳನೇ ಕಣ್ಣೀರು ಸುರಿಸಿದರು. ಸನಿಹ ಏನೆಂದು ಒತ್ತಾಯದಿಂದ ಕೇಳಿದಾಗ ಮನೆಗೆ ಬಂದಿರುವ ಸೊಸೆ ನನ್ನನ್ನು ಯಾವ ರೀತಿ ನೋಡುತ್ತಾಳೋ ಎಂದು ಕಳವಳವಿದೆ ಎಂದರು. ಧಾರಾವಾಹಿ, ಸಿನೆಮಾಗಳಲ್ಲಿ ಎಷ್ಟೊಂದು ಜೋರಿನ ಸೊಸೆಯರು ಇದ್ದಾರೆ ಅದೇ ರೀತಿ ನನ್ನ ಸೊಸೆ ಇದ್ದರೆ ನನ್ನ ಗತಿಯೇನು ಎಂದು ಸೆರಗಿನಿಂದ ಮುಖ ಮೂಗು ಕಣ್ಣು ಒರೆಸಿಕೊಂಡರು.
ಸನಿಹಳಿಗೆ ನಗು ತಡೆಯಲಾಗಲಿಲ್ಲ. ಅಲ್ಲಮ್ಮ ನಿನ್ನ ಸೊಸೆಯಾಗಿ ಬಂದಿರುವವಳು ಜೋರು ಇದ್ದಾಳೆಂದು ಹೇಗೆ ಗ್ರಹಿಸಿದೆ. ಅತ್ತೆ ಅಮ್ಮನಾದರೆ ಸೊಸೆ ಮಗಳಾಗಲ್ವೇ ಎಂದು ಸನಿಹ ನವಿರಾಗಿ ಅಮ್ಮನನ್ನು ಪ್ರಶ್ನಿಸಿದಳು. ಧಾರಾವಾಹಿ ಸಿನೆಮಾ ನಿಜವಲ್ಲ ಅಮ್ಮ, ಅವರುಗಳು ಹಣ ಮಾಡಲು ಏನೇನೋ ಕಥೆ ಕಟ್ಟುತ್ತಾರೆ, ಅದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಡ. ಅಮ್ಮ ನೀನು ನನ್ನನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಂಡಿದ್ದಿಯೋ ಅದೇ ರೀತಿ ನೀನು ಸೊಸೆಯನ್ನು ನೋಡಿಕೊಂಡರೆ ಅವಳು ಖಂಡಿತವಾಗಿ ನಿನ್ನ ಮಗಳಾಗಿರುತ್ತಾಳೆ ಎಂದು ಸನಿಹ ಖಂಡಿತವಾಗಿ ಹೇಳಿದಳು.
ಕಮಲಮ್ಮನವರಿಗೆ ಅಜ್ಞಾನದ ಪೊರೆ ಕಳಚಿತು. ಸನಿಹ ನೀನು ಗಂಡನ ಮನೆಗೆ ಹೋಗಮ್ಮ, ನಿನ್ನ ಅತ್ತೆ ಮಾವನನ್ನು ಮಗಳಂತೆ ನಿಂತು ಅವರನ್ನು ಚೆನ್ನಾಗಿ ನೋಡಿಕೋ ಎಂದರು ಕಮಲಮ್ಮನವರು. ಹಾ ಅಮ್ಮ ನಾನು ನಿನ್ನ ಮಗಳಮ್ಮ ಎಂದು ಅಮ್ಮನನ್ನು ತಬ್ಬಿದಾಗ ಕಮಲಮ್ಮನವರು ನನ್ನ ಮೂರು ಮಕ್ಕಳು ಸುಖವಾಗಿರಲಿ ಎಂದು ಉದ್ಗಸಿದರು. ಒಡನೆಯೇ ಸನಿಹ ನಿನ್ನ ಮೂರು ಮಕ್ಕಳು ಯಾರಮ್ಮ ಎಂದಾಗ ಇವತ್ತಿನಿಂದ ನನ್ನ ಸೊಸೆಯೂ ನನಗೆ ಮಗಳೇ ಎಂದಾಗ ಸನಿಹ ಸಂತೋಷದಿಂದ ಕುಣಿದಾಡಿದಳು.
ಸನಿಹ ಬಾಗಿಲ ಬಳಿ ನಿಂತಿದ್ದ ಅಮ್ಮ, ಅಣ್ಣ, ಅತ್ತಿಗೆಯರನ್ನು ಕಣ್ಣು ತುಂಬಿಸಿಕೊಂಡು ಕಣ್ಣಂಚು ತೇವ ಮಾಡಿಕೊಂಡು ಮೂವರೂ ಸುಖವಾಗಿರಿ ಮನದುಂಬಿ ಹಾರೈಸಿ ತನ್ನ ಗಂಡನ ಕಾರು ಹತ್ತಿದಳು. ಅಮ್ಮನ ಮೊಗದಲ್ಲಿ ಸಂತೃಪ್ತಿಯ ಛಾಯೆಯನ್ನು ಕಂಡು ಸಂತೋಷದಿಂದ ಬೈ ಅಂದಳು.
-ನಿರಂಜನ್ ಜೈನ್
No comments:
Post a Comment