ಕಥೆ-1061
ದ್ವೀಪದ ಆಕರ್ಷಣೆ
ಒಂದು ಹಡಗಿನಲ್ಲಿ ನೂರಾರು ಜನರು ಕುಳಿತು ಸಾಗರದಲ್ಲಿ ಪ್ರಯಾಣ ಮಾಡುತ್ತಿದ್ದರು. ಮಧ್ಯದಲ್ಲಿ ಒಂದು ಸುಂದರವಾದ ನಡುಗಡ್ಡೆ ಬಂದಾಗ ಎಲ್ಲರೂ ನೋಡಲೆಂದು ಅಲ್ಲಿಗೆ ಹೋದರು. ಆ ನಡುಗಡ್ಡೆಯಲ್ಲಿ ಎಲ್ಲಿ ನೋಡಿದಲ್ಲಿ ಮುತ್ತು ರತ್ನಗಳು ರಾಶಿ ರಾಶಿಯಾಗಿ ಬಿದ್ದಿದ್ದವು.
ಆ ಹಡಗಿನ ಯಜಮಾನ ಮೊದಲೇ ಹೇಳಿದ್ದೇನೆಂದರೆ-"ಆ ನಡುಗಡ್ಡೆಯಲ್ಲಿರುವುದನ್ನೆಲ್ಲ ನೋಡಿ ಸುಮ್ಮನೆ ಬರಿಗೈಯಿಂದ ಬರಬೇಕು. ಏನನ್ನೂ ನೀವು ತರಬಾರದು. ಹೊತ್ತು ಮುಳುಗುವುದರೊಳಗಾಗಿ ಹಡಗಿನಲ್ಲಿ ಮತ್ತೆ ಸೇರಬೇಕು."
ಅದೇ ಪ್ರಕಾರ ಎಲ್ಲರೂ ಸ್ವರ್ಗ ಸದೃಶ್ಯವಾದ ಆ ನಡುಗಡ್ಡೆಯ ವೈಭವವನ್ನೆಲ್ಲ ನೋಡಿ ಸಂತಸದಿಂದ ಬಂದು ಸರಿಯಾದ ಸಮಯಕ್ಕೆ ಹಡಗನ್ನೇರಿ ಕುಳಿತುಕೊಂಡರು. ಒಬ್ಬ ಜಿಪುಣ ಮಹಾಶಯ ಮಾತ್ರ ಇಂಥಾ ವೈಭವ ಸಿರಿಸಂಪತ್ತು ಇನ್ನೆಲ್ಲಿ ಸಿಗುತ್ತದೆಂದು ಅಲ್ಲಿಯೇ ಉಳಿದುಬಿಟ್ಟ. ಇತ್ತ ಆತ ಕುಳಿತು ಬಂದಿದ್ದ ಹಡಗು ಹೊರಟು ಹೋಯಿತು. ಆ ಬಳಿಕ ಅನ್ನ, ನೀರು ಏನೂ ಇಲ್ಲದೆ ಆ ಮನುಷ್ಯ ಅಲ್ಲೇ ಅಸುನೀಗಿದ! ಮುಂದಿನ ವರುಷ ಅದೇ ಹಡಗು ಪ್ರವಾಸಕ್ಕೆಂದು ಬಂದಾಗ ಅಲ್ಲಿ ಜಿಪುಣನ ಎಲುಬಿನ ಹಂದರ ಮಾತ್ರ ಇತ್ತು
ಮಿತಿಯಲ್ಲಿರುವ ಆಸೆ ಆಶೀರ್ವಾದ,
ದರಾಸೆ ಮನುಷ್ಯನನ್ನು ಅಂಧನನ್ನಾಗಿಸುತ್ತದೆ. ಅತಿಯಾದ ದುರಾಸೆ ಕೊನೆಗೆ ವಿನಾಶವನ್ನು ತರುತ್ತದೆ.
-ಶ್ರೀ ಸಿದ್ದೇಶ್ವರ ಸ್ವಾಮೀಜಿ
No comments:
Post a Comment