ಕಥೆ-1057
ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…
ಸನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗ ತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು.
ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬರುವಂತೆ ನಡೆದುಕೊಂಡರೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ- ‘ಅವರೊಂದು ಖಾಲಿ ದೋಣಿಯಂಥವರು, ಕೋಪ ನನ್ನೊಳಗೇ ಇದೆ’ ಅಂತ.
ಇದು ಆ ಸಂನ್ಯಾಸಿಯ ಸಮಸ್ಯೆ ಮಾತ್ರವಲ್ಲ, ನಮ್ಮೆಲ್ಲರ ಸಮಸ್ಯೆ. ನಾವು ತಲ್ಲಣಗೊಳ್ಳುವುದು ಯಾವಾಗ? ಮನಸ್ಸಿಗೆ ಕಿರಿಕಿರಿಯಾದಾಗ. ಆದರೆ ಕಿರಿಕಿರಿ ಮಾಡಿಕೊಳ್ಳುವುದರಿಂದ, ಹತಾಶರಾಗಿ ತಲೆಮೇಲೆ ಕೈಹೊತ್ತು ಕೂರುವುದರಿಂದ ಸಮಸ್ಯೆಯ ಬೆಟ್ಟ ಒಂದಿಂಚೂ ಕರಗುವುದಿಲ್ಲ. ನಾವು ಬಯಸಲಿ ಬಿಡಲಿ ಕೆಲವು ಘಟನೆಗಳು ತಮ್ಮಷ್ಟಕ್ಕೆ ತಾವೇ ನಡೆಯುತ್ತಿರುತ್ತವೆ. ನಮ್ಮ ಕೈಮೀರಿದ ಘಟನೆಗಳು ನಡೆದಾಗ ಅವನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನಾಧರಿಸಿ ಅದರ ಪರಿಣಾಮದ ತೀವ್ರತೆ ಮತ್ತು ನಮ್ಮ ವ್ಯಕ್ತಿತ್ವ ನಿರ್ಧರಿಸಲ್ಪಡುತ್ತವೆ.
ಕೃಪೆ: ದೀಪಾ ಹಿರೇಗುತ್ತಿ
No comments:
Post a Comment