ಜಿಪುಣ ಕಲಿತ ಪಾಠ*
ಒಂದು ಊರಿನಲ್ಲಿ ಒಬ್ಬ ಜಿಪುಣನಿದ್ದ. ಅವನ ಹೆಸರು ಗಂಗಾಧರ. ಅವನ ಬಳಿ ಸಾಕಷ್ಟು ಹಣವಿದ್ದರೂ ತಿರುಕನಂತೆ ಹರಕು ಬಟ್ಟೆ ಧರಿಸುತ್ತಿದ್ದ. ಅಕ್ಕ ಪಕ್ಕದ ಮನೆಯವರಿಗೆ ಅವನನ್ನು ಕಂಡರೆ ಆಗದು. ಯಾರಿಗೂ ಒಂದು ಪೈಸೆ ಸಹಾಯ ಮಾಡಿದವನಲ್ಲ. ಒಂದು ಮುರುಕು ಮನೆಯಲ್ಲಿ ವಾಸವಿದ್ದ ಅವನಿಗೆ ಒಬ್ಬ ಸ್ನೇಹಿತನೂ ಇರಲಿಲ್ಲ. ಪ್ರತಿ ದಿನ ಅವನ ಕೆಲಸವೆಂದರೆ, ತಾನು ಗಳಿಸಿದ್ದ ಚಿನ್ನದ ನಾಣ್ಯಗಳನ್ನು ಎಣಿಸುವುದು, ಅದನ್ನು ನೋಡಿ ಸಂತೋಷಪಡುತ್ತಿದ್ದ. ಆದರೆ, ಆ ಹಣದಿಂದ ಅವನಿಗೆ ಯಾವ ಸುಖವೂ ಇರಲಿಲ್ಲ. ಯಾರಾದರೂ ಅದನ್ನು ಕದ್ದರೆ ಎಂಬ ಭಯ ಅವನನ್ನು ಕಾಡುತ್ತಿತ್ತು.
ಒಂದು ದಿನ ಅವನು ತನ್ನ ನಿಧಿಯನ್ನು ಬಚ್ಚಿಡಬೇಕೆಂದು ನಿರ್ಧರಿಸಿದ. ಒಂದು ದೊಡ್ಡ ಪೆಟ್ಟಿಗೆಯಲ್ಲಿ ನಾಣ್ಯಗಳನ್ನು ಇಟ್ಟು ಬೀಗ ಹಾಕಿ ಹತ್ತಿರದಲ್ಲೇ ಇದ್ದ ಒಂದು ದೊಡ್ಡ ಮರದ ಕೆಳಗೆ ಹೂತಿಟ್ಟ. ಬಹಳ ಎಚ್ಚರಿಕೆಯಿಂದ ನೆಲವನ್ನು ಸಮ ಮಾಡಿ, ತಾನು ಬಚ್ಚಿಟ್ಟ ಜಾಗ ಯಾರಿಗೂ ಗೊತ್ತಾಗುವುದಿಲ್ಲವೆಂದು ನೆಮ್ಮದಿಯಿಂದ ಇದ್ದನು. ಬೆಳಿಗ್ಗೆ ನೆರೆಹೊರೆಯವರು ಏಳುವ ಮುನ್ನ ಮರದ ಬಳಿಗೆ ಹೋಗಿ ನಿಧಿ ಬಚ್ಚಿಟ್ಟಿದ್ದ ನೆಲವನ್ನು ನೋಡಿ ಮನೆಗೆ ಹಿಂದಿರುಗುತ್ತಿದ್ದನು. ಹೀಗೆ ಹಲವು ದಿನ ಕಳೆದವು.
ಒಂದು ದಿನ ಗಂಗಾಧರನು ಮರದ ಬಳಿಗೆ ಹೋಗಿ ನೆಲವನ್ನು ನೋಡಿ "ಎಲ್ಲವೂ ಸರಿಯಾಗಿದೆ. ನನ್ನ ಆಸ್ತಿ ಸುರಕ್ಷಿತವಾಗಿದೆ" ಎಂದು ಹೇಳಿಕೊಂಡು ಸಂತಸದಿಂದ ಮನೆಯ ಕಡೆಗೆ ಹೋಗುವುದನ್ನೇ ಅಲ್ಲೇ ಒಂದು ಪೊದೆಯ ಹಿಂದೆ ಅವಿತಿದ್ದ ಕಳ್ಳರು ನೋಡಿದರು. ಅವನು ಹೋದ ಬಳಿಕ ಅವರು ಆ ಮರದ ಹತ್ತಿರ ಹೋಗಿ ನೆಲವನ್ನು ಅಗೆದು ನೋಡಿದರು. ಅಲ್ಲಿದ್ದ ಪೆಟ್ಟಿಗೆಯನ್ನು ತೆಗೆದು ನೋಡಿ ಅದರಲ್ಲಿದ್ದ ನಾಣ್ಯಗಳನ್ನು ತಮ್ಮ ಬಟ್ಟೆಯಲ್ಲಿ ಸುತ್ತಿಕೊಂಡು, ಮತ್ತೆ ಪೆಟ್ಟಿಗೆಯನ್ನು ನೆಲದಲ್ಲಿ ಹೂತು ಮೊದಲಿನ ಹಾಗೆಯೇ ನೆಲವನ್ನು ಸಮ ಮಾಡಿ ಓಡಿಹೋದರು.
ಪಾಪ! ಗಂಗಾಧರನಿಗೆ ಇದು ಗೊತ್ತಾಗಲೇ ಇಲ್ಲ. ಅವನು ಪ್ರತಿದಿನ ಮುಂಜಾನೆ ಎಂದಿನಂತೆ ಮರದ ಬಳಿ ಹೋಗಿ ಬರುತ್ತಿದ್ದ. ಕೆಲವು ದಿನಗಳ ಬಳಿಕ ಅವನಿಗೆ ತನ್ನ ಚಿನ್ನದ ನಾಣ್ಯಗಳನ್ನು ನೋಡಬೇಕೆಂಬ ಆಸೆಯಾಯಿತು. ನೆಲವನ್ನು ಅಗೆದು ಪೆಟ್ಟಿಗೆ ಹೊತ್ತುಕೊಂಡು ಮನೆಗೆ ಹೋದ. ಮುಚ್ಚಳ ತೆಗೆದು ನೋಡಿದಾಗ ಪೆಟ್ಟಿಗೆ ಖಾಲಿ. ಅವನು ಅಲ್ಲೇ ಕುಸಿದನು. ಅವನ ಗೋಳಾಟವನ್ನು ಕೇಳಿದ ನೆರೆಹೊರೆಯವರು ಅವನ ಬಳಿಗೆ ಬಂದರು. ಏನಾಯಿತೆಂದು ವಿಚಾರಿಸಿದರು. ಅವನು ತನ್ನ ಗಳಿಕೆಯೆಲ್ಲ ಕಳುವಾಗಿದೆಯೆಂದು ವಿವರಿಸಿದ. ಇದನ್ನು ಕೇಳಿದ ಜನ "ಆ ನಾಣ್ಯಗಳಿಂದ ನಿನಗೆ ಏನು ಪ್ರಯೋಜನವಾಯಿತು? ಅದರಿಂದ ಒಂದು ದಿನವೂ ನಿನಗೆ ನೆಮ್ಮದಿಯಿರಲಿಲ್ಲ. ಈಗ ನೀನು ಸಮಾಧಾನದಿಂದ ನಿದ್ರಿಸಬಹುದು. ಕಳ್ಳತನವಾಗುದೆಂಬ ಹೆದರಿಕೆಯಿಲ್ಲ" ಎಂದು ಸಮಾಧಾನ ಮಾಡಿದರು. ತಾನು ಜೀವಮಾನವೆಲ್ಲ ಗಳಿಸಿದ್ದ ಹಣ ಹೋದದ್ದರಿಂದ ಅವನು ಮತ್ತೆ ದುಡಿಯಬೇಕಾಯಿತು. ಆದರೆ, ಅವನು ಮೊದಲಿನಂತೆ ಇರಲಿಲ್ಲ. ತಾನು ಮಾಡಿದ ತಪ್ಪಿನ ಅರಿವಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರತೊಡಗಿದ. ಅವನು ಮತ್ತೆ ಶ್ರೀಮಂತನಾಗಾದಿದ್ದರೂ ತನ್ನ ಉತ್ತಮ ನಡವಳಿಕೆಯಿಂದ ಒಳ್ಳೆಯ ಗೆಳೆಯರನ್ನು ಸಂಪಾದಿಸಿದ. ಚಿನ್ನಕ್ಕಿಂತ ಪ್ರಾಮಾಣಿಕ ಸ್ನೇಹಿತರು ಹೆಚ್ಚು ಅಮೂಲ್ಯ ಎಂಬುದನ್ನು ತಿಳಿದುಕೊಂಡು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಜೀವನ ನಡೆಸಿದ.
ಆಧಾರ : ಭಾರತದ ಒಂದು ಜಾನಪದ ಕಥೆ
No comments:
Post a Comment