Monday, March 4, 2024

 ಕಥೆ-325

ಸುಳ್ಳಿನಿಂದ ಜನರನ್ನು ಮರಳು ಮಾಡುವುದು ಪಾಪದ ಕೆಲಸ..

ಬೆಲ್ಲದಂತ ಮಾತನಾಡಿ ಎಲ್ಲರನ್ನೂ ಮರುಳು ಮಾಡಿ, ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಸಾಲುಗಳನ್ನು ನಾವೆಲ್ಲಾ ಕೇಳಿದ್ದೇವೆ ಅಲ್ಲವೇ? ಇವು ಕನಕದಾಸರ ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ ಎಂಬ ಪ್ರಖ್ಯಾತ ಕೃತಿಯ ಸಾಲುಗಳು. ಈ ಸಾಲುಗಳನ್ನು ನೆನಪು ಮಾಡಿಕೊಡುವ ಕತೆಯೊಂದು ಇಲ್ಲಿದೆ. 

ಒಮ್ಮೆ ಸಂತರೊಬ್ಬರ ಬಳಿ ಬಂದ ಅವರ ಅನುಚರರು ಮಿಠಾಯಿಗಳನ್ನು ಸಮರ್ಪಿಸಿದರು. ಸಂತರು ಮಿಠಾಯಿಯ ಚೂರೊಂದನ್ನು ಬಾಯಿಗೆ ಹಾಕಿಕೊಂಡರು. ‘ತಮ್ಮಾ! ಮಿಠಾಯಿ ತುಂಬ ರುಚಿಯಾಗಿದೆ. ಎಲ್ಲಿಂದ ತಂದೆಯಪ್ಪಾ?’ಎಂದು ಕೇಳಿದರು. ಅನುಚರರು ‘ಇದು ನಾನು ತಂದದ್ದಲ್ಲ. ನನ್ನ ಗೆಳೆಯನೊಬ್ಬ ಇದನ್ನು ತಂದುಕೊಟ್ಟ. ಅದರಲ್ಲಿ ಸ್ವಲ್ಪವನ್ನು ತಮಗೆ ಸಮರ್ಪಿಸಿದ್ದೇನೆ’ ಎಂದರು. ಸಂತರು ‘ಮಿಠಾಯಿ ಕೊಟ್ಟ ನಿನ್ನ ಗೆಳೆಯನಿಗೆ ನೀನು ಏನಾದರೂ ಕೆಲಸ ಮಾಡಿಕೊಟ್ಟಿದ್ದೀಯಾ? ಏಕೆಂದರೆ ಉಚಿತವಾಗಿ ಏನನ್ನೂ ಪಡೆಯಬಾರದು. ಯಾರ ಹಂಗಿಗೂ ಬೀಳಬಾರದು’ ಎಂದರು.

ಅನುಚರರು ‘ಕೆಲವು ದಿನಗಳ ಹಿಂದೆ ನಾನು ಅವನ ಕೈಯಲ್ಲಿಯ ಗೆರೆಗಳನ್ನು ನೋಡಿ ನಿನಗೆ ಸದ್ಯದಲ್ಲಿಯೇ ಲಾಭವಾಗುವುದರಲ್ಲಿದೆ ಎಂದು ಭವಿಷ್ಯ ನುಡಿದಿದ್ದೆ. ಇಂದು ಆತ ಬಂದು ‘ನಿನ್ನ ಭವಿಷ್ಯ ನಿಜವಾಯಿತು. ನನಗಿಂದು ದೊಡ್ಡ ಲಾಭವಾಯಿತು’ ಎಂದು ಹೇಳಿ ಮಿಠಾಯಿಗಳನ್ನು ಕೊಟ್ಟು ಹೋದ’ ಎಂದರು. ಸಂತರು ಆಶ್ಚರ್ಯದಿಂದ ‘ನಿನಗೆ ಕೈ ಗೆರೆಗಳನ್ನು ನೋಡಿ ಭವಿಷ್ಯ ನುಡಿಯುವ ವಿದ್ಯೆಯಿದೆಯೇ? ಇದನ್ನು ಯಾವಾಗ ಕಲಿತೆ?’ ಎಂದು ಕೇಳಿದರು. ಆಗ ಅನುಚರರು ನಾಚಿಕೊಳ್ಳುತ್ತಾ‘ಇಲ್ಲ ಪ್ರಭು. ನಾನು ಅಂಥ ವಿದ್ಯೆ ಕಲಿತಿಲ್ಲ. ಸುಮ್ಮನೆ ಆಗಾಗ ನನ್ನ ಗೆಳೆಯರ ಕೈಗಳನ್ನು ನೋಡುತ್ತೇನೆ. ಏನೋ ಅರ್ಥವಾದವನಂತೆ ನಟಿಸುತ್ತೇನೆ. ಅವರಿಗೆ ಸುಳ್ಳು-ಸುಳ್ಳು ಏನಾದರೂ ಹೇಳುತ್ತೇನೆ. ಒಮ್ಮೊಮ್ಮೆ ಆಕಸ್ಮಿಕವಾಗಿ ನಾನು ಹೇಳಿದ ಮಾತುಗಳು ನಿಜವಾಗಿಬಿಡುತ್ತವೆ. ಆಗ ಅವರು ಕೃತಜ್ಞತೆಯಿಂದ ಕೊಡುವ ಸಣ್ಣಪುಟ್ಟ ಬಳುವಳಿಗಳನ್ನು ಸ್ವೀಕರಿಸುತ್ತೇನೆ’ ಎಂದರು. ಇದನ್ನು ಕೇಳಿ ಸಂತರ ಮುಖ ಸಿಟ್ಟಿನಿಂದ ಕೆಂಪಾಯಿತು.


ಅವರು ಬಾಯಿಯಲ್ಲಿದ್ದ ಮಿಠಾಯಿಯ ಚೂರುಗಳನ್ನು ತಕ್ಷಣ ಉಗಿದು ಬಿಟ್ಟರು. ನೀರಿನಿಂದ ಬಾಯಿ ಶುದ್ಧಿ ಮಾಡಿಕೊಂಡರು. ‘ನೀನು ಸುಳ್ಳುಗಳನ್ನು ಹೇಳಿ ಗೆಳೆಯರಿಂದ ಬಳುವಳಿಗಳನ್ನು ಗಳಿಸಿಕೊಳ್ಳುತ್ತೀಯಲ್ಲಾ? ಎಂಥ ಪಾಪದ ಕೆಲಸ ಮಾಡುತ್ತಿದ್ದೀಯ? ಸುಳ್ಳು ಹೇಳುವುದು ಮೊದಲನೆಯ ತಪ್ಪು, ಇಲ್ಲದಿರುವ ವಿದ್ಯೆಯನ್ನು ಇದೆಯೆಂದು ತೋರಿಸಿಕೊಳ್ಳುವುದು ಮತ್ತೊಂದು ತಪ್ಪು. ಇಲ್ಲದಿರುವ ವಿದ್ಯೆಯನ್ನು ಪ್ರದರ್ಶಿಸಿ ಅದಕ್ಕೆ ಬಳುವಳಿಗಳನ್ನು ಪಡೆದುಕೊಳ್ಳುವುದು ಇನ್ನೂ ದೊಡ್ಡ ತಪ್ಪು. ಇಷ್ಟೊಂದು ತಪ್ಪುಗಳನ್ನು ಮಾಡಿ ಗಳಿಸಿದ ಪಾಪದ ಸಿಹಿತಿಂಡಿಯನ್ನು ನೀನೂ ತಿಂದು ನನಗೂ ತಿನಿಸಿದೆಯಲ್ಲಾ? ನಿನ್ನ ಪಾಪದಲ್ಲಿ ನಾನೂ ಪಾಲುದಾರನಾಗಿಬಿಟ್ಟಿದ್ದೇನೆ! ಈಗ ನನಗೆ ಸಿಹಿ ಮಿಠಾಯಿಯಿಂದ ಬಾಯಿಯೆಲ್ಲ ಕಹಿ ಎನಿಸುತ್ತಿದೆ. ತಕ್ಷಣ ನಿನ್ನ ತಪ್ಪಿಗೆ ಪಶ್ಚಾತ್ತಾಪ ಮಾಡಿಕೋ.. ದೇವರಲ್ಲಿ ಕ್ಷಮೆ ಕೇಳಿಕೋ’ ಎಂದು ಗದರಿಸಿದರು. ಅನುಚರರಿಗೆ ತಮ್ಮ ತಪ್ಪಿನರಿವಾಯಿತು. ಆತ ಸಂತರ ಕ್ಷಮೆ ಯಾಚಿಸಿದರು. ಸೂಕ್ತ ಪಶ್ಚಾತ್ತಾಪದೊಂದಿಗೆ ಭಗವಂತನಲ್ಲೂ ಕ್ಷಮೆ ಕೇಳಿದರಂತೆ.

ನಮಗೆ ನಿಜವಾಗಿಯೂ ಇಲ್ಲದಿರುವ ವಿದ್ಯೆಯನ್ನು ಇದೆ ಎಂದು ಪ್ರದರ್ಶಿಸುವುದು, ಸುಳ್ಳು ಹೇಳುವುದು, ಬಣ್ಣಬಣ್ಣದ ಮಾತುಗಳನ್ನು ಹೇಳಿ ಜನರನ್ನು ಮರಳು ಮಾಡುವುದು, ಅದಕ್ಕೆ ಪ್ರತಿಯಾಗಿ ಬಳುವಳಿಗಳನ್ನು ಪಡೆಯುವುದು ತಪ್ಪು, ಪಾಪದ ಕೆಲಸ ಎಂದು ಆ ಸಂತರು ಹೇಳಿದ್ದು ಅಂದಿಗೂ ನಿಜ! ಇಂದಿಗೂ ನಿಜ! ಅಲ್ಲವೇ? ಪಾಪ-ಪುಣ್ಯಗಳ ವಿಷಯವನ್ನು ಬದಿಗೆ ಇಡೋಣ. ಆದರೆ ನಮ್ಮ ಮಾತುಗಳನ್ನು ನಂಬುವವರಿಗೆ ಆಗುವ ಅನನುಕೂಲಗಳ ಬಗ್ಗೆ ಚಿಂತಿಸೋಣ. ಈ ಮಾತುಗಳು ಭವಿಷ್ಯ ಹೇಳಿ ಬಳುವಳಿ ಗಳಿಸಲು ಪ್ರಯತ್ನಿಸುವವರಿಗೂ ಅನ್ವಯವಾಗುತ್ತವೆ. 

ಸಿನಿಮಾ ನಾಯಕರು, ಕ್ರಿಕೆಟಿಗರು ಜಾಹೀರಾತು ನೀಡಿ ನಮ್ಮನ್ನು ಮರಳು ಮಾಡುವುದು ಸಹ ಅದೇ ಅಲ್ಲವೇ? ಉಳಿದ ವ್ಯಾಪಾರ ವ್ಯವಹಾರಗಳಲ್ಲಿ ನಮ್ಮನ್ನು ಮರಳು ಮಾಡುತ್ತಿರುವವರಿಗೆ, ಮಾಡುವವರಿಗೂ ಅನ್ವಯವಾಗುತ್ತದೆ ಅಲ್ಲವೇ?


ಕೃಪೆ: ಷಡಕ್ಷರಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು