Monday, April 22, 2024

ಕಥೆ-373

 ನಮಗೆ ನಾಲ್ಕೇ ನಾಲ್ಕು ಬೆರಳಿದ್ದಿದ್ದರೆ ನಾವೇನು ಮಾಡುತ್ತಿದ್ದಿವಿ?

ಎರಡು ಕೈ, ಹತ್ತು ಬೆರಳುಗಳು, ಎರಡು ಕಾಲು, ಸದೃಢ ಶರೀರವಿದ್ದರೂ ನಮ್ಮಲ್ಲಿ ಹಲವರಿಗೆ ಏನಾದರೊಂದು ಕೊರಗು ಇದ್ದೇ ಇರುತ್ತದೆ. ನನ್ನಲ್ಲಿ ಅದು ಇಲ್ಲ, ಇದು ಇಲ್ಲ, ಹೀಗೆ ನಮ್ಮ ‘ಇಲ್ಲ’ಗಳ ಪಟ್ಟಿ ಬಹಳ ಉದ್ದವಿರುತ್ತದೆ. ಆದರೆ ನಮಗೆ ಕೇವಲ ನಾಲ್ಕು ಬೆರಳುಗಳಿದ್ದರೆ, ಕಾಲು ಸ್ವಾಧೀನ ಕಳೆದುಕೊಂಡಿದ್ದರೆ ನಾವೇನು ಮಾಡುತ್ತಿದ್ದಿವಿ? ಹಾಗೊಂದು ಸ್ಥಿತಿಯನ್ನು ಆಲೋಚಿಸಿಕೊಳ್ಳುವುದೂ ನಮಗೆ ಕಷ್ಟವಾಗುತ್ತದೆ. ನಾಲ್ಕು ಬೆರಳುಗಳಲ್ಲಿ ಸುಮಧುರ ಸಂಗೀತ ಹೊರಡಿಸಬಲ್ಲ, ಭರವಸೆ ಕಳೆದುಕೊಂಡ ಜೀವಗಳಿಗೆ ಆಶಾಕಿರಣವಾಗಬಲ್ಲ ಲೀ ಹೀ ಆಹ್ ಬಗ್ಗೆ ಯಾರಿಗೆಲ್ಲ ಗೊತ್ತು?


ದಕ್ಷಿಣ ಕೊರಿಯಾದ ಲೀ ಹೀ ಆಹ್ ಪ್ರಪಂಚದ ದೃಷ್ಟಿಯಲ್ಲಿ ನತದೃಷ್ಟ ಹೆಣ್ಣುಮಗಳು. ಆಕೆಗೆ ಹುಟ್ಟಿನಿಂದಲೇ ಕೈ ಕಾಲುಗಳು ಸರಿಯಿರಲಿಲ್ಲ. ಇತರರಿಗೆ ಹೋಲಿಸಿದರೆ ಬುದ್ಧಿಯೂ ಕೊಂಚ ಮಂದ. ತಾಯಿ ಗರ್ಭಿಣಿಯಾಗಿದ್ದಾಗ ತೆಗೆದುಕೊಂಡ ಔಷಧಗಳ ಅಡ್ಡಪರಿಣಾಮದಿಂದ ಲೀ ದೇಹರಚನೆಯಲ್ಲಿ ಊನವಾಗಿತ್ತು. ಆಕೆಯ ಎರಡೂ ಕೈಗಳಲ್ಲಿದ್ದುದು ಎರಡೆರಡು ಬೆರಳುಗಳು ಮಾತ್ರ. ಮಂಡಿ ಕೆಳಗಿನ ಕಾಲು ಕೂಡ ಬಲಹೀನವಾಗಿತ್ತು. ಈಕೆ ಬದುಕುಳಿಯುತ್ತಾಳೆ ಎಂಬ ಯಾವ ಭರವಸೆಯೂ ಹೆತ್ತವರಿಗಿರಲಿಲ್ಲ. ಮೂರು ವರ್ಷದ ಮಗುವಾಗಿದ್ದಾಗ ಆಕೆಗೆ ಕಾಲಿನ ಶಸ್ತ್ರಚಿಕಿತ್ಸೆ ನಡೆಯಿತು. ಮಂಡಿ ಕೆಳಗಿನ ಕಾಲನ್ನು ಕತ್ತರಿಸಿ ತೆಗೆಯಲಾಯಿತು. ಇನ್ನು ಜೀವನಪರ್ಯಂತ ನಡೆಯಲಾರದ ಸ್ಥಿತಿಗೆ ವಿಧಿ ಅವಳನ್ನು ದೂಡಿತ್ತು. ಆಕೆಗಿದ್ದ ನಾಲ್ಕು ಬೆರಳುಗಳಾದರೂ ಸರಿಯಿದ್ದವೆ? ಅವುಗಳು ಎಷ್ಟು ಬಲಹೀನವಾಗಿದ್ದವೆಂದರೆ ಆಕೆಗೆ ಪೆನ್ಸಿಲನ್ನು ಸಹ ಹಿಡಿಯಲಾಗುತ್ತಿರಲಿಲ್ಲ.

ಲೀ ಹೀ ಕೂಡ ಎಲ್ಲರಂತೆ ಅಕ್ಷರ ಕಲಿಯುವಂತಾಗಲಿ ಎಂಬುದು ಆಕೆಯ ತಾಯಿಯ ಆಸೆ. ಆದರೆ ಲೀ ಬೆರಳುಗಳು ಪೆನ್ಸಿಲ್ ಹಿಡಿಯಲೂ ಸಹಕರಿಸುತ್ತಿರಲಿಲ್ಲ. ಕೊನೆಗೆ ಆಕೆಯ ತಾಯಿ ಅವಳಿಗೆ ಪಿಯಾನೊ ಕಲಿಸಬೇಕೆಂದು ನಿರ್ಧರಿಸಿದರು. ಆದರದು ಆಕೆಯನ್ನು ದೊಡ್ಡ ಪಿಯಾನೊ ವಾದಕಿ ಮಾಡುವ ಆಸೆಯಿಂದಲ್ಲ. ಪಿಯಾನೊ ಕೀಗಳನ್ನು ಒತ್ತಲು ಕಲಿತರೆ ಬೆರಳುಗಳಿಗೆ ಶಕ್ತಿ ಬರುತ್ತದೆ ಎಂಬ ಕಾರಣದಿಂದ. ಆಕೆ ಪೆನ್ಸಿಲ್ ಹಿಡಿಯುವಂತಾಗಲಿ ಎಂಬುದು ತಾಯಿಯ ಆಸೆ.


ನಾಲ್ಕು ಬೆರಳಿನ, ಕಾಲಿಲ್ಲದ ಹುಡುಗಿಯೊಬ್ಬಳಿಗೆ ಪಿಯಾನೊ ಕಲಿಯಲಾದೀತೆ ಎಂದು ಪಿಯಾನೊ ಶಿಕ್ಷಕರು ಕೂಡ ನಿರಾಸಕ್ತಿ ತೋರಿದರು. ಕೊನೆಗೂ ಒಬ್ಬರು ಅವಳಿಗೆ ಪಿಯಾನೊ ಕಲಿಸಲು ಒಪ್ಪಿದರು. ಕೆಲವಾರು ತಿಂಗಳುಗಳವರೆಗೆ ಪ್ರಯತ್ನಿಸಿದರೂ ಆಕೆಗೆ ಸ್ವರ ಹೊರಡಿಸುವುದಿರಲಿ, ಪಿಯಾನೊನ ಒಂದೇ ಒಂದು ಕೀಯನ್ನೂ ಒತ್ತಲು ಆಗಿರಲಿಲ್ಲ. ಆಕೆ ಪಿಯಾನೊದ ಲಯ,ತಾಳಗಳನ್ನೂ ಗ್ರಹಿಸುತ್ತಿರಲಿಲ್ಲ. ಯಾವುದಾದರೊಂದು ಸಾಲನ್ನೋ, ಶೃತಿಯನ್ನೋ ಐದು ನಿಮಿಷಕ್ಕಿಂತ ಹೆಚ್ಚು ನೆನಪಿಟ್ಟುಕೊಳ್ಳಲು ಯತ್ನಿಸಿದರೆ ಮೆದುಳು ಇನ್ನಷ್ಟು ನಿಷ್ಕ್ರಿಯವಾಗಬಹುದೆಂದು ವೈದ್ಯರು ಕೂಡ ಎಚ್ಚರಿಸಿದ್ದರು. ಆದರೆ ಆಕೆ ಎದೆಗುಂದಲಿಲ್ಲ. ಶ್ರಮ-ಶ್ರದ್ಧೆಯಿಂದ ಪಿಯಾನೊ ಕಲಿಯತೊಡಗಿದಳು. ಮೊದ ಮೊದಲು ಬಹಳ ಕಷ್ಟವಾಗುತ್ತಿತ್ತು. ಆದರೆ ಪ್ರಯತ್ನ ಮಾತ್ರ ಕೈ ಬಿಡಲಿಲ್ಲ. ತಿಂಗಳುಗಳ ಪರಿಶ್ರಮದ ನಂತರ ಸ್ಪರ್ಧೆಗಳಲ್ಲಿ ಭಾಗವಹಿಸುವಷ್ಟರ ಮಟ್ಟಿಗೆ ಪಿಯಾನೊ ನುಡಿಸುವುದನ್ನು ಕಲಿತಳು.


ಆಕೆ ಮೊದಲ ಬಾರಿಗೆ ಪಿಯಾನೊ ಸ್ಪರ್ಧೆಯಲ್ಲಿ ಭಾಗವಹಿಸಿದಾಗ, ಸ್ಪರ್ಧೆಯ ಆಯೋಜಕರು ಆಕೆಯನ್ನು ತಿರಸ್ಕರಿಸಿದ್ದರಂತೆ. ಬೆರಳುಗಳೇ ಇಲ್ಲದವಳಿಂದ ಏನು ತಾನೇ ಆಗುತ್ತದೆಂದು ಅವರು ಭಾವಿಸಿದ್ದರು. ಬಹಳಷ್ಟು ಒತ್ತಾಯ ಮತ್ತು ಬೇಡಿಕೆಯ ನಂತರ ಕೊನೆಗೂ ಆಯೋಜಕರು ಆಕೆಗೊಂದು ಅವಕಾಶ ಕೊಡಲು ಮನಸ್ಸು ಮಾಡಿದರು. ಆದರೆ ನಂತರ ನಡೆದಿದ್ದು ಮಾತ್ರ ಪವಾಡ. ಲೀ ಹೀ ಆಹ್ ಅಂದಿನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಳು. ಬಹುಮಾನ ಘೋಷಣೆಯಾದಾಗ ಅಲ್ಲಿ ನೆರೆದಿದ್ದವರೆಲ್ಲ ಕಣ್ಣಲ್ಲಿ ನೀರಿತ್ತು, ಆಕೆಯ ಛಲದ ಬಗ್ಗೆ ಅಭಿಮಾನ ಮೂಡಿತ್ತು.


ಅಲ್ಲಿಂದ ಮುಂದೆ ಆಕೆಯ ಆತ್ಮವಿಶ್ವಾಸ ಇಮ್ಮಡಿಯಾಯಿತು. ಲೀ ಒಂದರ ಮೇಲೊಂದರಂತೆ ಪ್ರಶಸ್ತಿಗಳನ್ನು ಗೆಲ್ಲುತ್ತಲೇ ಹೋದಳು, ಸುಮಧುರ ಸಂಗೀತದಿಂದ ಎಲ್ಲರ ಮನಸ್ಸನ್ನೂ ಗೆದ್ದಳು. ಆಕೆ ದಿನದಲ್ಲಿ ಹತ್ತು ಗಂಟೆಗೂ ಹೆಚ್ಚು ಕಾಲ ಪಿಯಾನೊ ನುಡಿಸಬಲ್ಲವಳಾಗಿದ್ದು, ಲೀ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಯಿತು, ಆಕೆಯ ಕುರಿತು ಪುಸ್ತಕಗಳು ಬಂದವು, ಆಕೆಯ ಜೀವನದ ಕಥೆ ಪಠ್ಯಪುಸ್ತಕವೂ ಆಯಿತು. ಕೈ-ಕಾಲಿಲ್ಲದವಳಿಂದ ಏನಾಗುತ್ತದೆ ಎಂದು ಮೂಗು ಮುರಿದವರೇ ಲೀ ಸಾಧನೆಗೆ ಮಾರು ಹೋದರು. 1997ರಲ್ಲಿ ಆಕೆ ಏಕಾಂಗಿಯಾಗಿ ಪಿಯಾನೊ ವಾದನ ಕಾರ್ಯಕ್ರಮ ನೀಡಿದಳು. ಅದರಿಂದ ಬಂದ ಹಣವನ್ನು ವಿಶಿಷ್ಟ ಚೇತನರ ಸಂಸ್ಥೆಗೆ ದಾನ ಮಾಡಿದಳು.

ನಾನು ಕೂಡ ಇತರರಂತೆ ಸಾಧಾರಣ ಹುಡುಗಿ. ಒಂದೇ ಒಂದು ವ್ಯತ್ಯಾಸವೆಂದರೆ ನನ್ನ ಕೈ ಮತ್ತು ಕಾಲುಗಳು ಬೇರೆಯವರಷ್ಟು ಸದೃಢವಾಗಿಲ್ಲ. ಆದರೆ ಅದು ನನ್ನ ಕನಸಿಗೆ ಯಾವತ್ತೂ ಅಡ್ಡಿ ಮಾಡುವುದಿಲ್ಲ. ಕನಸು ನನಸಾಗಿಸುವ ಛಲವಿದ್ದವರಿಗೆ ಇಂಥ ಸಣ್ಣಪುಟ್ಟ ದೌರ್ಬಲ್ಯಗಳು ಯಾವ ಲೆಕ್ಕವೂ ಅಲ್ಲ’ ಎನ್ನುತ್ತಾಳೆ ಲೀ. ನಾನು “Four fingered Pianist’’. ನಾನು ಇತರರಂತಿಲ್ಲದಿರಬಹುದು, ಆದರೆ ಬೇರೆಯವರಿಗಿಂತ ನಾನೇನು ಕಡಿಮೆಯಿಲ್ಲ. ದೈಹಿಕ, ಮಾನಸಿಕ ದೌರ್ಬಲ್ಯ ಹೊಂದಿರುವವರಿಗೆ ದೇವರು ನನ್ನ ಮೂಲಕ ಸ್ಫೂರ್ತಿ ನೀಡಲು ಬಯಸಿದ್ದಾನೆಂದೇ ನಾನು ಭಾವಿಸುತ್ತೇನೆ!’

ಹೌದು ಲೀ ಜಾಗದಲ್ಲಿ ಬೇರೆ ಯಾರಾದರು ಇದ್ದರೆ ಅವರೇನು ಮಾಡುತ್ತಿದ್ದರು? ತಮ್ಮ ದುರ್ವಿಧಿಯನ್ನು ಹಳಿದು ಸುಮ್ಮನೆ ಕೂರಬಹುದಿತ್ತು, ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡಬಹುದಿತ್ತು. ಆದರೆ ಲೀ ಹಾಗೆ ಮಾಡಲಿಲ್ಲ. ಆಕೆ ನಿರ್ಧರಿಸಿದಳು-

‘ನಾಲ್ಕು ಬೆರಳುಗಳ ಪಿಯಾನೊ ವಾದಕಿಯಾಗುತ್ತೇನೆ’ ಎಂದು!

ನಮ್ಮ ದೇಹ ನಮ್ಮ ಕನಸುಗಳನ್ನು ಪೂರ್ಣಗೊಳಿಸಲು ರೂಪಿತಗೊಂಡಿರುತ್ತದೆ..

ಆ ಕನಸನ್ನು ಈಡೇರಿಸಲು ನಮಗೆ ನಂಬಿಕೆ ಮತ್ತು ಛಲ ನಮ್ಮಲ್ಲಿರಬೇಕು

 ಶ್ರಮ-ಶ್ರದ್ಧೆ ಭಕ್ತಿಯಿಂದ ಪ್ರಯತ್ನ ಮಾಡಿದರೆ ಅಸಾಧ್ಯವಾದದ್ದು ಯಾವುದು ಇಲ್ಲ..🙏🙏💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು