ಕಥೆ-362
ಇದೊಂದು ಬಗೆಯ ವಿಶೇಷವಾದ ದೇವರ ಸೇವೆ !
ವಿಶೇಷ ಬಗೆಯ ದೇವರ ಸೇವೆ ಏನೆಂಬುದನ್ನು ಅರಿಯಲು ಇಲ್ಲಿರುವ ನಿಜಜೀವನದ ಘಟನೆಯನ್ನು ಓದಬೇಕು. ಒಮ್ಮೆ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾಗಿದ್ದ ಪೂಜ್ಯ ಸ್ವಾಮಿ ರಂಗನಾಥನಂದಜೀಯರು (1908-2005) ಕಾರ್ಯನಿಮಿತ್ತ ಹೈದರಾಬಾದಿಗೆ ಪ್ರಯಾಣ ಮಾಡುತ್ತಿದ್ದರು. ಅವರು ಆಂಧ್ರ ಪ್ರದೇಶದ ಹೈದರಾಬಾದಿನ ರಾಮಕೃಷ್ಣ ಮಠದ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದವರು. ಹಾಗಾಗಿ ಅವರಿಗೆ ಹೈದರಾಬಾದಿನಲ್ಲಿ ಅನೇಕ ಪ್ರಭಾವಿ ಜನ ಪರಿಚಯವಿದ್ದರು.
ಅವರಿಗೆ 1986ರಲ್ಲಿ ಇಂದಿರಾಗಾಂಧಿಯವರ ಹೆಸರಿನಲ್ಲಿ ಕೊಡುವ ರಾಷ್ಟ್ರೀಯ ಏಕತಾ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ವಿಮಾನ ಪ್ರಯಾಣದಲ್ಲಿ ಮತ್ತೊಬ್ಬ ಹಿರಿಯ ಸನ್ಯಾಸಿಗಳಾದ ಸ್ವಾಮಿ ಸ್ಮರಣಾನಂದಜೀಯವರು ಮತ್ತು ರಂಗನಾಥಾನಂದಜೀಯವರು ಅಕ್ಕ-ಪಕ್ಕದ ಆಸನಗಳಲ್ಲಿ ಕುಳಿತಿದ್ದರು. ವಿಮಾನವು ಗಗನಕ್ಕೇರಿ ಹೊರಟ ನಂತರ ರಂಗನಾಥಾನಂದಜೀಯವರು ಯಾವುದೋ ಪುಸ್ತಕ ಓದುತ್ತಾ ಕುಳಿತುಕೊಂಡರು.
ಕೊಂಚ ಸಮಯದ ನಂತರ ಗಗನಸಖಿಯರು ಎಲ್ಲರಿಗೂ ಭೋಜನದ ಪ್ಯಾಕೆಟ್‌ನ್ನು ಕೊಟ್ಟರು. ರಂಗನಾಥಾನಂದಜೀ ಯವರು ಅದನ್ನು ಸ್ವೀಕರಿಸಿದರು. ಆದರೆ ಅದನ್ನು ತಿನ್ನಲಿಲ್ಲ. ಅದರ ಬದಲು ಅದನ್ನು ಎತ್ತಿ ತಮ್ಮ ಕೈಚೀಲದಲ್ಲಿ ಇಟ್ಟುಕೊಂಡರು. ಅದನ್ನು ಗಮನಿಸಿದ ಸ್ಮರಣಾನಂದಜೀಯವರಿಗೆ ಆಶ್ಚರ್ಯವಾಯಿತು. ಏಕೆಂದರೆ ಸ್ವಾಮೀಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಅವರು ಕೇವಲ ಅನ್ನ ಬಸಿದ ಗಂಜಿ ಮತ್ತು ಕೊಂಚ ಬೇಯಿಸಿದ ತರಕಾರಿಯನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಂಥದ್ದರಲ್ಲಿ ವಿಮಾನದಲ್ಲಿ ಕೊಡುವ ಉಚಿತ ಶ್ರೀಮತ ಭೋಜನವನ್ನು ಸ್ವಾಮೀಜಿಯವರು ತೆಗೆದುಕೊಂಡು ಎತ್ತಿಟ್ಟುಕೊಂಡುದುದರ ಔಚಿತ್ಯ ಸ್ಮರಣಾನಂದಜೀಯರಿಗೆ ಅರ್ಥವಾಗಲಿಲ್ಲ. ಅವರು ಏನೂ ಮಾತನಾಡಲಿಲ್ಲ. ಆನಂತರ ಸ್ವಾಮೀಜಿಯವರಿಬ್ಬರೂ ತಂತಮ್ಮ ಓದಿನಲ್ಲಿ ಮಗ್ನರಾದರು.
ವಿಮಾನವು ಹೈದರಾಬಾದಿನಲ್ಲಿ ಇಳಿಯಿತು. ಸ್ವಾಮೀಜಿಗಳಿಬ್ಬರೂ ಇಳಿದು ಬರುವಾಗ ರಂಗನಾಥಾನಂದಜೀಯವರು ಭೋಜನದ ಪ್ಯಾಕೆಟನ್ನು ಕೈಯಲ್ಲಿ ಹಿಡಿದೇ ಬರುತ್ತಿರುವುದನ್ನು ಕಂಡು ಸ್ಮರಣಾನಂದಜೀಯವರ ಆಶ್ಚರ್ಯ ಇನ್ನೂ ಹೆಚ್ಚಾಯಿತು. ರಂಗನಾಥಾನಂದಜೀಯವರು ವಿಮಾನ ನಿಲ್ದಾಣದಲ್ಲಿ ಯಾರನ್ನೋ ಹುಡುಕುತ್ತಿದ್ದರು. ಆ ವ್ಯಕ್ತಿ ಕಂಡಾಗ ಭೋಜನದ ಪ್ಯಾಕೆಟ್ಟನ್ನು ಅವರಿಗೆ ಕೊಟ್ಟು ‘ಯೇ ಖಾಲೇ ಬೇಟಾ’ (ಇದನ್ನು ತಿಂದು ಬಿಡು ಮಗೂ) ಎಂದರು.
ಸ್ವಾಮೀಜಿಯವರು ಅಷ್ಟು ಶ್ರದ್ಧೆ-ಪ್ರೀತಿಗಳಿಂದ ಭೋಜನದ ಪ್ಯಾಕೆಟ್‌ನ್ನು ತಂದುಕೊಟ್ಟ ವ್ಯಕ್ತಿ ಯಾರು ಗೊತ್ತೆೆ? ಆತ ವಿಮಾನ ನಿಲ್ದಾಣದಲ್ಲಿ ಟೆಲಿಫೋನ್ ಬೂತಿನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾಂಗ ಬಡ ಯುವಕ! ಉನ್ನತ ಮಟ್ಟದ ವೇದಾಂತಿಯಾಗಿದ್ದು ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಂಥ ಗಣ್ಯವ್ಯಕ್ತಿಗಳೊಂದಿಗೆ ಒಡನಾಟವಿದ್ದ ಸ್ವಾಾಮೀಜಿ ಬಡ ದಿವ್ಯಾಂಗ ವ್ಯಕ್ತಿಗಾಗಿ ಭೋಜನದ ಪ್ಯಾಕೇಟನ್ನು ಮರೆಯದೆ ತಂದುಕೊಟ್ಟ ಪ್ರೀತಿಯನ್ನು ಕಂಡು ಸ್ಮರಣಾನಂದಜೀಯವರ ಕಣ್ಣಲ್ಲಿ ನೀರು ಬಂದಿತಂತೆ!
ಮರುದಿನ ಹೈದರಾಬಾದಿನಿಂದ ಹಿಂತಿರುಗಲೆಂದು ವಿಮಾನ ನಿಲ್ದಾಣಕ್ಕೆ ಇಬ್ಬರೂ ಸ್ವಾಮೀಜಿಗಳು ಬಂದರು. ಆಗ ರಂಗನಾಥಾನಂದಜೀಯವರು ಆ ದಿವ್ಯಾಂಗ ಯುವಕನನ್ನು ಹುಡುಕಿ ಮಾತನಾಡಿಸಿದರು. ‘ಖಾನಾ ಕೈಸಾ ಥಾ ಬೇಟಾ?’ ಎಂದು ಕೇಳಿದರು. ಆತ ಸ್ವಾಮೀಜಿಯವರಿಗೆ ನಮಸ್ಕರಿಸುತ್ತಾ, ಸಂತಸದಿಂದ ಬೀಗುತ್ತಾ ‘ಖಾನಾ ಮ್ತ್ ಥಾ!’ ಎಂದರು. ಆಗ ರಂಗನಾಥಾನಂದಜೀಯವರು ‘ವಿಮಾನಗಳಲ್ಲಿ ಪ್ರತಿದಿನ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಅಂಥ ಶ್ರೀಮಂತ ಭೋಜನವನ್ನು ಸ್ವೀಕರಿಸುತ್ತಾರೆ. ಆದರೆ ‘ಖಾನಾ ಮಸ್ತ್ ಥಾ’ ಎನ್ನುತ್ತಾಾ ತಿನ್ನುವ ಭಾಗ್ಯ ಎಷ್ಟು ಜನಕ್ಕಿದೆಯೋ ಗೊತ್ತಿಲ್ಲ! ಎಂದರಂತೆ.
ದೀನದರಿದ್ರರಲ್ಲಿ ನಾರಾಯಣನನ್ನು ಕಂಡು ಅವರ ಸೇವೆ ಮಾಡಬೇಕೆಂಬ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಆಚರಣೆಯಲ್ಲಿ ತರುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕಾ? ನಮಗೆ ಅನುಪಯುಕ್ತವಾದ ಆಹಾರವನ್ನು ಉಪವಾಸವಿರುವ ವ್ಯಕ್ತಿಗಳಿಗೆ ಕೊಟ್ಟಾಗ ಅವರು ‘ಖಾನಾ ಮಸ್ತ್ ಥಾ’ ಎಂದು ತಿನ್ನುತ್ತಾರಲ್ಲವೇ? ಇಲ್ಲದ ದೇವರಿಗೆ ಎಡೆ ಮಾಡುತ್ತೇವೆ ದೀನ ದಲಿತರಲ್ಲಿ, ಸಹಾಯ ಅವಶ್ಯಕ ಇರುವವರಲ್ಲಿ ಸೇವೆ ಮಾಡುವುದು ಇದೊಂದು ಬಗೆಯ ವಿಶೇಷವಾದ ದೇವರ ಸೇವೆ ಅಲ್ಲವೇ?
ಕೃಪೆ: ವಿಶ್ವ ವಾಣಿ.
No comments:
Post a Comment