Sunday, May 5, 2024

 ಕಥೆ-387

ಯಾರು ಯಾರು ನೀಯಾರು? ಎಲ್ಲಿಂದ ಬಂದೆ ಯಾವೂರು?

ನಾವೆಲ್ಲಾ ಹಳೆಯ ಕನ್ನಡ ಸಿನಿಮಾ ರತ್ನಮಂಜರಿಯ(1962) ಈ ಹಾಡನ್ನು ಕೇಳಿದ್ದೇವಲ್ಲವೇ? ಮೊದಲ ಬಾರಿ ನೋಡಿದಾಗ, ಕೇಳಿದಾಗ ಹೆದರಿಕೊಂಡಿದ್ದರೂ ಆಶ್ಚರ್ಯವೇನಿಲ್ಲ! (ಹಾಡಿನಲ್ಲಿ ರುಂಡವೊಂದು ಕಡೆ, ಮುಂಡವೊಂದು ಕಡೆ ಇರುವ ಯುವತಿಯ ನೆನಪಾಯಿತೇ?) ಆಕಾಲದ ಜನಪ್ರಿಯ ಹಾಸ್ಯನಟರಾದ ನರಸಿಂಹರಾಜು ಮತ್ತು ಎಂ.ಎನ್.ಲಕ್ಷ್ಮೀದೇವಿಯವರ ಅಭಿನಯದ ಹಾಡು. ಈಗ ಆ ಹಾಡಿನ ನೆನಪಾಗಲು ಕಾರಣವೇನೆಂದರೆ ದೆವ್ವವೊಂದರ ಉಲ್ಲೇಖವಿರುವ ಪ್ರಸಂಗವೊಂದು ಇಲ್ಲಿದೆ.

ಆದರೆ ಹೆದರಬೇಕಿಲ್ಲ. ಏಕೆಂದರೆ ಪ್ರಸಂಗದಲ್ಲೇ ದೆವ್ವಗಳು ಬರುವುದು ಎಲ್ಲಿಂದ ಎಂಬ ಸಮಾಧಾನಕರ ಉತ್ತರವೂ ಇದೆ. ಯುವ ದಂಪತಿಗೆ ಆಗಷ್ಟೇ ಮದುವೆಯಾಗಿತ್ತು. ಇಬ್ಬರೂ ಪರಸ್ಪರರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸಂಸಾರ. ಆದರೆ ದುರದೃಷ್ಟದಿಂದ ಆಕೆಗೆ ತೀವ್ರವಾದ ಅನಾರೋಗ್ಯವುಂಟಾಯಿತು. ಏನೆಲ್ಲಾ ಚಿಕಿತ್ಸೆ ಕೊಡಿಸಿದರೂ ಪತ್ನಿ ಉಳಿಯಲಿಲ್ಲ. ಪತ್ನಿ ಸಾಯುವ ಮುಂಚೆ ‘ನಮ್ಮಿಬ್ಬರದ್ದು ಅಮರ ಮಧುರ ಪ್ರೇಮ! ನಾನು ಸತ್ತರೂ ನಮ್ಮಿಬ್ಬರ ಪ್ರೇಮ ಸಾಯಬಾರದು. ನೀವು ಮರುಮದುವೆಯಾಗಲು ಪ್ರಯತ್ನಿಸಿದರೆ ನಾನು ದೆವ್ವವಾಗಿ ಬಂದು ನಿಮ್ಮನ್ನು ಕಾಡುತ್ತೇನೆ’ ಎಂದು ಹೇಳಿ ಪ್ರಾಣಬಿಟ್ಟಳು.

ಆನಂತರ ಯುವಕ ಕೆಲವು ವರ್ಷ ಒಂಟಿಯಾಗಿದ್ದರು. ಕೊನೆಗೆ ಒಂಟಿ ಜೀವನ ಕಷ್ಟವೆನಿಸಿತು. ಮರುಮದುವೆಯಾಗಲು ನಿರ್ಧರಿಸಿದರು. ಬೇರೊಬ್ಬಳೊಂದಿಗೆ ನಿಶ್ಚಿತಾರ್ಥವೂ ಆಯಿತು. ಅಂದು ರಾತ್ರಿಯೇ ಮೃತಪತ್ನಿಯ ದೆವ್ವ ಕಂಡಂತಾಯಿತು. ಆಕೆ ತಾವಿಬ್ಬರೂ ಜತೆಯಲ್ಲಿ ಕಳೆದ ದಿನಗಳನ್ನೂ, ಏಕಾಂತದಲ್ಲಿ ಆಡಿದ್ದ ಮಾತುಗಳನ್ನೂ ವಿವರವಾಗಿ ನೆನಪಿಸಿದರು. ಮದುವೆ ಬೇಡವೆಂದು ಬೆದರಿಸಿದರು. ಯುವಕ ಗಾಬರಿಯಾಗಿ ಎದ್ದು ಕುಳಿತರು. ತಮ್ಮಿಬ್ಬರಿಗೆ ಮಾತ್ರ ಗೊತ್ತಿದ್ದ ಅನೇಕ ವಿಷಯಗಳನ್ನೆಲ್ಲ ದೆವ್ವ ಸವಿವರವಾಗಿ ಹೇಳುತ್ತಿದ್ದುದರಿಂದ ಅದನ್ನು ನಂಬಲೇಬೇಕಿತ್ತು. ಮತ್ತೆ ಯುವಕ ಮಲಗಲಿಲ್ಲ. ಮುಂಜಾನೆಯೇ ಮನೋವೈದ್ಯರೊಬ್ಬರ ಬಳಿ ಹೋಗಿ ತನ್ನ ಗೋಳನ್ನು ಹೇಳಿಕೊಂಡರು.


ವೈದ್ಯರು ‘ಇದು ಪರಿಹರಿಸಬಹುದಾದ ಸಮಸ್ಯೆ. ಮೃತಪತ್ನಿಯ ದೆವ್ವ ಬುದ್ಧಿಶಾಲಿಯಂತಿದೆ. ಅದಕ್ಕೆ ಎಲ್ಲ ಗೊತ್ತಿರುವಂತಿದೆ. ನಾನು ನಿನಗೆ ಸೀಲ್ ಮಾಡಿದ ಡಬ್ಬವೊಂದನ್ನು ಕೊಡುತ್ತೇನೆ. ಇಂದು ರಾತ್ರಿ ಆ ದೆವ್ವ ಬಂದರೆ ಅದಕ್ಕೆ ಡಬ್ಬದೊಳಗೆ ಏನಿದೆಯೆಂದು ಹೇಳಿದರೆ ನಿಶ್ಚಿತಾರ್ಥವನ್ನು ಮುರಿದು ಹಾಕುತ್ತೇನೆಂದೂ, ಮರುಮದುವೆ ಆಗುವುದಿಲ್ಲವೆಂದೂ ಹೇಳು. ಒಂದು ವಾರದ ನಂತರ ಬಂದು ನನ್ನನ್ನು ಭೇಟಿಯಾಗು’ ಎಂದರು. ಯುವಕ ಸೀಲ್ ಮಾಡಿದ ಡಬ್ಬದೊಂದಿಗೆ ಮನೆಗೆ ಬಂದರು. ದೆವ್ವಕ್ಕಾಗಿ ಅವರೇ ಕಾದು ಕುಳಿತರು. ಮಧ್ಯರಾತ್ರಿ ದೆವ್ವ ಬಂದಂತಾಯಿತು. ಅದು ಮತ್ತೆ ಸವಿಸವಿ ಮಾತುಗಳನ್ನಾಡಿತು. ಬೇರೆ ಮದುವೆಯಾಗಬೇಡವೆಂದು ಬೆದರಿಸಿತು. ಆಗ ಯುವಕ ಡಬ್ಬವನ್ನು ಹೊರತೆಗೆದರು. ಇದರಲ್ಲೇನಿದೆಯೆಂದು ಸರಿಯಾಗಿ ಹೇಳಿದರೆ ನಿಶ್ಚಿತಾರ್ಥ ಮುರಿಯುತ್ತೇನೆಂದು ವಾಗ್ದಾನ ಮಾಡಿದರು.


ದೆವ್ವ ಬಹಳ ಹೊತ್ತು ಡಬ್ಬವನ್ನೇ ದೃಷ್ಟಿಸಿ ನೋಡಿತು. ನಿಟ್ಟುಸಿರು ಬಿಟ್ಟು ನಾಳೆ ಬಂದು ಹೇಳುತ್ತೇನೆಂದು ಹೇಳಿ ಹೋಯಿತು. ನಾಳೆಯೇಕೆ? ಒಂದು ವಾರ ಕಾದರೂ ಬರಲಿಲ್ಲ. ಯುವಕ ಸಂತೋಷದಿಂದ ವೈದ್ಯರ ಬಳಿ ಹೋಗಿ ದೆವ್ವದ ಕಾಟ ತಪ್ಪಿಸಿದ್ದಕ್ಕೆ ವೈದ್ಯರಿಗೆ ಧನ್ಯವಾದ ತಿಳಿಸಿ ನಿಗದಿಗೊಳಿಸಿದ್ದ ಫೀಸ್ ಕೊಟ್ಟರು. ಬರುವಾಗ ಡಬ್ಬದಲ್ಲಿ ಏನಿದೆಯೆಂದು ವೈದ್ಯರನ್ನು ಕೇಳಿದರು. ವೈದ್ಯರು ಡಬ್ಬದಲ್ಲಿ ಏನಿದೆಯೆಂದು ನಿನಗೆ ಗೊತ್ತಾದರೆ ದೆವ್ವ ಮತ್ತೆ ಬರುತ್ತದೆ. ಏಕೆಂದರೆ ಆ ದೆವ್ವ ನಿನ್ನದೇ ಕಲ್ಪನೆ! ನಿನ್ನ ಪಾಪಪ್ರಜ್ಞೆ ನಿನ್ನನ್ನು ಕಾಡುತ್ತಿತ್ತು. ಅದೇ ದೆವ್ವ ಸೃಷ್ಟಿ ಮಾಡಿತು. ನಿನಗೆ ಗೊತ್ತಿರುವ ವಿಷಯಗಳು ಮಾತ್ರ ದೆವ್ವಕ್ಕೆ ಗೊತ್ತಿತ್ತು. ನಿನಗೆ ಗೊತ್ತಿಲ್ಲದ ವಿಷಯ ದೆವ್ವಕ್ಕೂ ಗೊತ್ತಾಗುವುದಿಲ್ಲ! ಎಂದು ಹೇಳಿ ಕಳುಹಿಸಿದರು. ಮುಂದೇನಾಯಿತೆಂಬ ಗೊಂದಲ ನಮಗೇಕೆ? ದೆವ್ವಗಳು ಎಲ್ಲಿಂದ ಬರುತ್ತವೆಂದು ನಮಗೆ ಗೊತ್ತಾಗಿದೆಯಲ್ಲವೇ? ನಮ್ಮ ಮನಸ್ಸಿನ ಸೃಷ್ಟಿಯೇ ಆದ ಅವಕ್ಕೆ ನಾವು ಹೆದರಬಾರದಲ್ಲವೇ? 

ದೇವರು ಮತ್ತು ದೆವ್ವಗಳು ನಮ್ಮ ಸೃಷ್ಟಿಯಾಗಿವೆ. ವೈಜ್ಞಾನಿಕವಾಗಿ ದೇವರು ಮತ್ತು ದೆವ್ವ ಇಲ್ಲ. ಒಳ್ಳೆಯ ಗುಣಗಳಿರುವವರೇ ದೇವರು, ಕೆಟ್ಟ ಗುಣಗಳನ್ನು ಹೊಂದಿರುವವರು ದೆವ್ವಗಳು..

ಮಾನವರಲ್ಲಿ ಅಹಂ ಭಾವನೆ ಬರಬಾರದೆಂದು ದೇವರನ್ನು ನಂಬಲಾಗುತ್ತದೆ. ಆದರೆ ದೇವರ ಹೆಸರಿನಲ್ಲಿ ಮೋಸ ವಂಚನೆ ಮಾಡುವ ದೆವ್ವಗಳು ಅಪಾರ. ಕೆಲವೆಡೆ ಮೋಸದಿಂದ ದುಡ್ಡು ಮಾಡುವ ವ್ಯಾಪಾರವಾಗುತ್ತಿದೆ.

ಕೊನೆಗೆ ಪಾಪಪ್ರಜ್ಞೆ ಅವರನ್ನು ಕಾಡುತ್ತದೆ.. ಪುಣ್ಯದ ಫಲ ಯಾವಾಗಲೂ ಚೆಂದ.. ಅದುವೇ ಮಹಾದಾನಂದ..

ಕೃಪೆ:ಎಸ್.ಷಡಕ್ಷರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು